ನವದೆಹಲಿ(ನ.26) ದೆಹಲಿಯಲ್ಲಿ ಗುರುವಾರ ಹಾಗೂ ಶುಕ್ರವಾರದಂದು ರೈತರ ಬೃಹತ್ ಪ್ರತಿಭಟನೆ ನಡೆಯಲಿದೆ. ಕೃಷಿ ಬಿಲ್ ವಿರೋಧಿಸಿರುವ ಪಂಜಾಬ್ ಹಾಗೂ ಹರ್ಯಾಣ ರೈತರು 'ದಿಲ್ಲಿ ಚಲೋ' ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಭಾರತೀಯ ರೈತ ಸಂಘಟನೆಯಡಿ ಸಾವಿರಾರು ರೈತರು ದೆಹಲಿಯಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದು, ಈ ನಿಟ್ಟಿನಲ್ಲಿ ಅನ್ನದಾತ ರಾಷ್ಟ್ರ ರಾಜಧಾನಿಯೆಡೆ ಹೆಜ್ಜೆ ಹಾಕಿದ್ದಾರೆ. ಆದರೆ ಹರ್ಯಾಣ ಪೊಲೀಸರು ರೈತರನ್ನು ಅಂಬಾಲಾ ಬಳಿ ತಡೆ ಹಿಡಿದಿದ್ದು, ಇಬ್ಬರ ನಡುವೆ ಘರ್ಷಣೆ ನಡೆದಿದ್ದು ಕಲ್ಲು ತೂರಾಟವೂ ನಡೆದಿದೆ.

ಕೃಷಿ ಕಾಯ್ದೆ ವಿರುದ್ಧ ಅನ್ನದಾತನ ಸಮರ, ರಾಷ್ಟ್ರ ರಾಜಧಾನಿ ತಲುಪಲು ಇಷ್ಟೆಲ್ಲಾ ಸಂಕಷ್ಟ!

ಹೌದು ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ ಸರಿಸಿ ರೈತರು ಮುಂದೆ ತೆರಳಿದ್ದು, ಈ ವೇಳೆ ಅವರನ್ನು ತಡೆಯಲು ಪೊಲೀಸರು ಅಶ್ರುವಾಯು ಹಾಗೂ ತಣ್ಣೀರಿನ ಪ್ರಯೋಗ ಮಾಡಿದ್ದಾರೆನ್ನಲಾಗಿದೆ. 

 ಹೀಗಿರುವಾಗ ರೈತರನ್ನು ತಡೆಯಲು ಹರ್ಯಾಣ ಸರ್ಕಾರ ಹಾಗೂ ದೆಹಲಿ ಪೊಲೀಸರು ಸಜ್ಜಾಗಿದ್ದಾರೆ.

ಬದರ್‌ಪುರ್ ಗಡಿಯಲ್ಲಿ ಪೊಲೀಸರು ಹಾಗೂ ಸಿಆರ್‌ಪಿಎಫ್‌ ಯೋಧರು

ರೈತರ ಈ ಪ್ರತಿಭಟನೆ ತಡೆಯಲು ಗುರುವಾರ ಬೆಳಗ್ಗೆ ದೆಹಲಿಯ ಬದರ್‌ಪುರ ಗಡಿಯಲ್ಲಿ ಬ್ಯಾರಿಕೇಡ್ ಹಾಗೂ ಕ್ರೇನ್ ಇಡಲಾಗಿದೆ. ದೆಹಲಿ ಪೊಲೀಸರೊಂದಿಗೆ ಕೇಂದ್ರ ಮೀಸಲು ಪಡೆ ಯೋಧರನ್ನೂ ಈ ಕಾರ್ಯಕ್ಕೆ ನೇಮಿಸಲಾಗಿದೆ.

ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆ: ದೆಹಲಿ ಮಟ್ಟದಲ್ಲಿ ಈಶ್ವರಪ್ಪ ಬ್ಯಾಟಿಂಗ್

ಪ್ರತಿಭಟನೆಗೆ ಅವಕಾಶ ನೀಡಿಲ್ಲ

ದೆಹಲಿ ಪೊಲೀಸ್ ಖಾತೆಯಿಂದ ಬುಧವಾರ ಟ್ವೀಟ್ ಒಂದನ್ನು ಮಾಡಲಾಗಿದ್ದು, 26 ಹಾಗೂ 27 ರಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ವಿಭಿನ್ನ ರೈತ ಸಂಘಟನೆಗಳು ಕೋರಿದ್ದ ಮನವಿಯನ್ನು ತಿರಸ್ಕರಿಸಲಾಗಿದ್ದು, ಈ ಬಗ್ಗೆ ಆಯೋಜಕರಿಗೆ ಈ ಮೊದಲೇ ಮಾಹಿತಿ ನೀಡಲಾಗಿದೆ ಎಂದಿದ್ದಾರೆ.  

ಮತ್ತೊಂದೆಡೆ ಹರ್ಯಾಣ ಸರ್ಕಾರ ಗುರುವಾರ ಹಾಗೂ ಶುಕ್ರವಾರ ಈ ಎರಡು ದಿನಗಳವರೆಗೆ ಪಂಜಾಬ್ ಗಡಿಯನ್ನು ಸೀಲ್ ಮಾಡುವ ನಿರ್ಧಾರ ಕೈಗೊಂಡಿದೆ. ಅಲ್ಲದೇ ಈ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಎರಡು ದಿನಗಳವರೆಗೆ ಹರ್ಯಾಣದಿಂದ ಪಂಜಾಬ್‌ಗೆ ತೆರಳುವ ಹಾಗೂ ಆಗಮಿಸುವ ಬಸ್‌ಗಳನ್ನು ಬಂದ್ ಮಾಡಲಾಗಿದೆ.

ಅನೇಕ ರೈತ ನಾಯಕರು ವಶಕ್ಕೆ

ಈಗಾಗಲೇ ಅನೇಕ ರೈತ ನಾಯಕರನ್ನು ಹರ್ಯಾಣ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅತ್ತ ದೆಹಲಿ ಮೆಟ್ರೋ ಕೂಡಾ ಓಡಾಟದ ಸಮಯವ್ನನು ಬದಲಾಯಿಸಿಕೊಂಡಿದೆ.