ನವದೆಹಲಿ (ಫೆ. 06): ಒಂದಾದ ಮೇಲೊಂದು ಚುನಾವಣೆಯಲ್ಲಿ ಗೆಲ್ಲುತ್ತಿದ್ದರೂ, ಸ್ವತಃ ಪ್ರಧಾನಿ ಮೋದಿ ಜನಪ್ರಿಯತೆಯ ತುತ್ತ ತುದಿಯಲ್ಲಿ ಇದ್ದರೂ ಎರಡು ರಾಜ್ಯಗಳ ರೈತರ ಪ್ರತಿಭಟನೆಯನ್ನು ಮುಗಿಸುವುದು ಹೇಗೆ, ಇದಕ್ಕೆ ನಿರ್ಗಮನದ ತಂತ್ರ ಏನು ಎನ್ನುವುದು ಸರ್ಕಾರಕ್ಕೆ ತೋಚುತ್ತಿಲ್ಲ. 7 ವರ್ಷಗಳಲ್ಲಿ ಮೊದಲ ಬಾರಿಗೆ ಕೇಂದ್ರ ಸರ್ಕಾರ ಅಸ್ಪಷ್ಟತೆಯಲ್ಲಿದೆ.

ಹಿಂದೆ ಭೂಸ್ವಾಧೀನ ಕಾಯ್ದೆ ಹಾಗೂ ಎಸ್‌ಸಿ, ಎಸ್‌ಟಿ ಕಾನೂನಿಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಪ್ರತಿಭಟನೆಗೆ ಮಣಿದು ಹಿಂದೆ ಹೆಜ್ಜೆ ಇಟ್ಟಿತ್ತು. ಆದರೆ ರೈತ ಕಾನೂನು ವಿಚಾರದಲ್ಲಿ ಹಿಂದೆ ಹೆಜ್ಜೆ ಇಡಲು ಆಗುತ್ತಿಲ್ಲ. ಇಟ್ಟರೆ ಮುಂದೆ ಯಾವುದೇ ಸುಧಾರಣಾ ಕ್ರಮಗಳನ್ನು ತರಲು ವಿರೋಧಿಗಳು ಬಿಡುವುದಿಲ್ಲ.

ಜನವರಿ 26ರ ದೊಂಬಿಯ ನಂತರ ರೈತ ಸಂಘಟನೆಗಳು ಅನುಕಂಪ ಕಳೆದುಕೊಂಡು ಸ್ವಲ್ಪ ಕಳಾಹೀನಗೊಂಡಿದ್ದು ನಿಜ. ಆದರೆ ಹಾಗೆಂದು ಸರ್ಕಾರ ಏನಾದರೂ ಬಲವಂತ ಮಾಡಲು ಹೋದರೆ ರೈತರಿಗೆ ಮತ್ತೊಮ್ಮೆ ಸಾರ್ವತ್ರಿಕ ಬೆಂಬಲ ದೊರೆಯಬಹುದು ಎಂಬ ಚಿಂತೆ ಸರ್ಕಾರದ್ದು. ನಾವಂತೂ ಹಿಂದೆ ಸರಿಯೋದಿಲ್ಲ; ಒಂದೋ ಕಾನೂನು ಹಿಂದೆ ತೆಗೆದುಕೊಳ್ಳಲಿ, ಇಲ್ಲವೇ ಪೊಲೀಸರನ್ನು ಕಳುಹಿಸಿ ಬಲ ಪ್ರಯೋಗದ ಸಾಹಸ ಮಾಡಿಸಲಿ ಎಂಬ ತಂತ್ರ ರೈತ ಸಂಘಟನೆಗಳದ್ದು. ಏನೇ ಆದರೂ ಸರ್ಕಾರಕ್ಕೇ ಕೆಟ್ಟಹೆಸರು ಬರಬಹುದು. ಒಟ್ಟಾರೆ ಪರಸ್ಪರ ಒಬ್ಬರಿಗೊಬ್ಬರು ಕಣ್ಣು ಮಿಟುಕಿಸಲಿ ಎಂದು ಕಾಯುವಿಕೆಯ ಆಟ ನಡೆದಂತೆ ಕಾಣುತ್ತಿದೆ.

ದೆಹಲಿ ಹಿಂಸಾಚಾರ : ಮೋದಿ ಯಾಕೆ ಇನ್ನೂ ಮೌನ ವಹಿಸಿದ್ದಾರೆ..?

ರಿಹಾನಾ ತಂದಿಟ್ಟ ಕಿರಿಕಿರಿ

ಮೇಲ್ನೋಟಕ್ಕೆ ಅಮೆರಿಕ, ಕೆನಡಾ ಮತ್ತು ಬ್ರಿಟನ್‌ನ ಕೆಲ ಖ್ಯಾತನಾಮರು ರೈತರ ಪರವಾಗಿ ಟ್ವೀಟ್‌ ಮಾಡಿದಂತೆ ಕಂಡರೂ ಈ ಎಲ್ಲದರ ಹಿಂದೆ ಬದಲಾಗುತ್ತಿರುವ ಅಂತಾರಾಷ್ಟ್ರೀಯ ರಾಜಕಾರಣದ ವಾಸನೆಯಂತೂ ಬಡಿಯುತ್ತಿದೆ. ಮೊದಲನೆಯದು, ಬಲಪಂಥೀಯ ಕನ್ಸರ್ವೇಟಿವ್‌ ಆಗಿದ್ದ ಡೊನಾಲ್ಡ… ಟ್ರಂಪ್‌ ಅಧಿಕಾರ ಕಳೆದುಕೊಂಡ ನಂತರ ಪ್ರೋಗ್ರೆಸ್ಸಿವ್‌ ಲಿಬರಲ… ಎನಿಸಿಕೊಂಡ ಜೋ ಬೈಡೆನ್‌, ಕಮಲಾ ಹ್ಯಾರಿಸ್‌ ಅಧಿಕಾರಕ್ಕೆ ಬಂದಿದ್ದಾರೆ. ಜೊತೆಗೆ ಟ್ರಂಪ್‌ಗೆ ಈ ಹಿಂದೆ ಭಾರತ ಜೈ ಎಂದಿದ್ದರಿಂದ ಇದುವರೆಗೂ ಬೈಡೆನ್‌ ಮತ್ತು ಮೋದಿ ನಡುವೆ ಮಂಜುಗುಡ್ಡೆ ಕರಗಿಲ್ಲ.

ಮತ್ತೊಂದು ಕಾರಣ ಎಂದರೆ ಅಮೆರಿಕ, ಕೆನಡಾ ಮತ್ತು ಬ್ರಿಟನ್‌ನಲ್ಲಿ ಸಿಖ್ಖರ ರಾಜಕೀಯ ಮತ್ತು ಹಣಕಾಸು ಪ್ರಭಾವ ತೀರ ಜಾಸ್ತಿಯಿದೆ. ಹೀಗಾಗಿ ಅನೇಕ ಪಾಶ್ಚಿಮಾತ್ಯ ಖ್ಯಾತನಾಮರು ರೈತರ ಪರವಾಗಿ ನಿಲ್ಲುವಂತೆ ಮಾಡಲಾಗುತ್ತಿದೆ. ಭಾರತದಲ್ಲಿ ಒಬ್ಬಂಟಿಗರಾಗಿರುವ ಎಡಪಂಥೀಯ ಪ್ರಗತಿಪರರು ಇದರಿಂದ ಉತ್ಸಾಹಿತರಾಗಿದ್ದಾರೆ. ರಿಹಾನಾ ಮತ್ತು ಇತರರ ಒಂದು ಟ್ವೀಟ್‌ಗೆ ಪ್ರತಿಯಾಗಿ ಸರ್ಕಾರ ಏಕ್‌ದಂ ವಿದೇಶಾಂಗ ಇಲಾಖೆಯಿಂದ ಹೇಳಿಕೆ ಕೊಡಿಸಿದೆ. ಜನಾಭಿಪ್ರಾಯ ಯಾವತ್ತೂ ಚಂಚಲ, ಲೋಲಕದಂತೆ ಹೊಯ್ದಾಡುತ್ತಿರುತ್ತದೆ.

ಸಿಖ್ಖರು ವರ್ಸಸ್‌ ಇತರರು

ರೈತರ ಪ್ರತಿಭಟನೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಧ್ಯಮಗಳು ಮತ್ತು ಖ್ಯಾತನಾಮರ ಬೆಂಬಲ ಸಿಗಲು ಮುಖ್ಯ ಕಾರಣ ಮುಂಚೂಣಿಯಲ್ಲಿರುವ ಅಲ್ಪಸಂಖ್ಯಾತ ಸಿಖ್‌ ಸಮುದಾಯ. ದೇಶದ ಒಳಗಡೆ ಬಿಜೆಪಿಗೆ ಇದರಿಂದ ದೊಡ್ಡ ರಾಜಕೀಯ ನಷ್ಟಇಲ್ಲ. ಆದರೂ ಸಿಖ್ಖರೇ ಪ್ರತಿಭಟನೆಯಲ್ಲಿ ನಿಂತಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸರ್ಕಾರದ ಇಮೇಜ್‌ಗೆ ಸಮಸ್ಯೆ ತಂದೊಡ್ಡಿರುವುದು ನಿಜ.

ಒಂದು ಕಡೆ ಕೃಷಿ ಕ್ಷೇತ್ರವನ್ನು ಭಾರತದಲ್ಲಿ ಮಾರುಕಟ್ಟೆಗೆ ಮುಕ್ತಗೊಳಿಸುವಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ಒತ್ತಡ ಹೇರುತ್ತಿದ್ದರೆ, ಅದಕ್ಕೆ ವಿರುದ್ಧವಾಗಿ ಹೋರಾಟವನ್ನು ಬೆಂಬಲಿಸುವವರು ಅಲ್ಲಿನ ಸೆಲೆಬ್ರಿಟಿಗಳು. ಅನೇಕ ಬಾರಿ ಶಸ್ತ್ರ ಮಾರುವವರು ಮತ್ತು ಅದಕ್ಕೆ ವಿರೋಧ ಸೂಚಿಸುವವರು ಒಬ್ಬರೇ ಇರುತ್ತಾರೆ ಅಲ್ಲವೇ. ಇದು ಕೂಡ ಸ್ವಲ್ಪ ಹಾಗೆಯೇ. ಗ್ಲೋಬಲ್ ರಾಜಕೀಯ ಬಲು ವಿಚಿತ್ರ.

ಹೇಗಿರಲಿದೆ ಮೋದಿ - ಬೈಡೆನ್ ಬಾಂಧವ್ಯ..?

ನಿಶಾನ್‌ ಸಾಹಿಬ್‌ ಇತಿಹಾಸ

ಕೆಂಪುಕೋಟೆಯಲ್ಲಿ ಕೆಲ ಅತಿರೇಕಿ ಉತ್ಸಾಹಿಗಳು ಹಾರಿಸಿದ ನಿಶಾನ್‌ ಸಾಹಿಬ್‌ ಧ್ವಜದ ಬಗ್ಗೆ ಪರ, ವಿರೋಧದ ಚರ್ಚೆ ನಡೆಯುತ್ತಲೇ ಇದೆ. ಆದರೆ ಆ ಧ್ವಜಕ್ಕೂ ಕೆಂಪುಕೋಟೆಗೂ 230 ವರ್ಷಗಳ ಇತಿಹಾಸವಿದೆ. 1783ರಲ್ಲಿ ಸಿಖ್‌ ಕಮಾಂಡರ್‌ ಬಾಬಾ ಸಿಂಗ್,‌ ಮೊಗಲ್ ದೊರೆ ಶಾ ಅಲಂ ಮೇಲೆ ವಿಜಯ ಸಾಧಿಸಿ ಕೆಂಪುಕೋಟೆ ಮೇಲೆ ನಿಶಾನ್‌ ಸಾಹಿಬ್‌ ಹಾರಿಸಿದ್ದನಂತೆ. ಇದನ್ನು ಈಗಲೂ ಸಿಖ್ಖರು ‘ದಿಲ್ಲಿ ಫತೇ ದಿವಸ’ ಅಂದರೆ ವಿಜಯದ ದಿನ ಎಂದು ಆಚರಿಸುತ್ತಾರೆ.

ದಿಲ್ಲಿಯ ಐತಿಹಾಸಿಕ ಗುರುದ್ವಾರಗಳಾದ ಶೀಶ್‌ಗಂಜ್‌, ರಕಬ್‌ ಗಂಜ್‌, ಬಾಂಗ್ಲಾ ಸಾಹಿಬ್‌, ಮೋತಿ ಬಾಗ್‌, ಮಜನು ಕಾ ಟೀಲಾ ಸಿಖ್ಖರ ಕೈಗೆ ಬಂದಿದ್ದು ಈ ಕೆಂಪುಕೋಟೆ ಗೆದ್ದ ಮೇಲೆಯೇ. ಹೀಗಾಗಿ ಇತರರಿಗೆ ಕೆಂಪು ಕೋಟೆ ಮೇಲೆ ನಿಶಾನ್‌ ಸಾಹಿಬ್‌ ಹಾರಿಸಿದ ಬಗ್ಗೆ ಭಾರೀ ಅಸಮಾಧಾನ ಇದೆ. ಆದರೂ ಸಿಖ್‌ ಸಮುದಾಯದಲ್ಲಿ ಆ ಅಸಂತೋಷ, ಆಕ್ರೋಶ ಕಾಣುತ್ತಿಲ್ಲ. ಸಿಖ್ಖರು ಧರ್ಮ ಧ್ವಜ ಮತ್ತು ಆಸ್ತಿಕತೆಯ ವಿಚಾರದಲ್ಲಿ ಭಾವನಾತ್ಮಕರು. ಹೀಗಾಗಿ ಆಂದೋಲನ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿದೆ.

ಸಂಸದರಿಗೆ ತುಟ್ಟಿ ತಿಂಡಿ

ಪಾರ್ಲಿಮೆಂಟ್‌ ಕ್ಯಾಂಟೀನ್‌ನಲ್ಲಿ ಲಾಗಾಯ್ತಿನಿಂದ ತುಂಬಾ ಕಡಿಮೆ ಬೆಲೆಯಲ್ಲಿ ತಿಂಡಿ ಊಟ ಸಿಗುತ್ತಿತ್ತು. ಎಷ್ಟೆಂದರೆ ಮೀನು 25 ರುಪಾಯಿಗೆ, ಕೋಳಿ ಸಾರು 30 ರುಪಾಯಿಗೆ. ಆದರೆ ಈಗ ಅಲ್ಲಿನ ರೈಲ್ವೆ ಕ್ಯಾಂಟೀನ್‌ ಸಬ್ಸಿಡಿ ನಿಲ್ಲಿಸಿ ಅದನ್ನು ಪ್ರವಾಸೋದ್ಯಮ ಇಲಾಖೆಗೆ ಕೊಟ್ಟಿದ್ದು, ತಿಂಡಿ ಊಟದ ಬೆಲೆ 5 ಪಟ್ಟು ಹೆಚ್ಚಳ ಆಗಿದೆ. ಸಂಸದರು ಅಲ್ಲಿ ಊಟ ತಿಂಡಿ ಮಾಡೋದು ಇತ್ತೀಚೆಗೆ ಕಡಿಮೆ ಆಗಿತ್ತು. ಆದರೆ ಸಂಸದರ ಹಿಂದೆ ಬರುವ ಬೆಂಬಲಿಗರು, ಅಲ್ಲಿನ ಸಿಬ್ಬಂದಿ ಮತ್ತು ಪತ್ರಕರ್ತರಿಗೆ ಕ್ಯಾಂಟೀನ್‌ನಿಂದ ಭಾರಿ ಉಪಯೋಗ ಆಗುತ್ತಿತ್ತು. ಒಂದು ಉದ್ದಿನ ವಡೆ 4 ರುಪಾಯಿಗೆ ಸಿಗುತ್ತಿದ್ದರಿಂದ ಅಲ್ಲಿಂದ ಜನ ಚೀಲಗಟ್ಟಲೆ ಕಟ್ಟಿಸಿ ಮನೆಗೆ ಒಯ್ಯುತ್ತಿದ್ದರು. ಈಗ ಅದಕ್ಕೆಲ್ಲ ಬ್ರೇಕ್‌ ಬೀಳಲಿದೆ. ಅಗ್ಗದ ಊಟ ತಿಂಡಿ ಎಂದು ಬಂದವರಿಗೆಲ್ಲ ದಾಸೋಹ ಹಾಕಿಸುತ್ತಿದ್ದ ಸಂಸದರ ಉತ್ಸಾಹ ಕೂಡ ತಣ್ಣಗಾಗಲಿದೆ.

ಸಂಧಾನಕ್ಕೆ ಗಡ್ಕರಿ ಹೋಗಿದ್ದರೆ?

ರೈತರ ನಾಯಕರೊಂದಿಗೆ ಮಾತಾಡಲು ತೋಮರ್‌ ಜೊತೆಗೆ ಗಡ್ಕರಿ ಮತ್ತು ರಾಜನಾಥ್‌ ಸಿಂಗ್‌ ಅವರನ್ನು ಕಳುಹಿಸಿದ್ದರೆ ಸ್ವಲ್ಪ ಪರಿಸ್ಥಿತಿ ಬೇರೆ ಇರುತ್ತಿತ್ತು ಎಂದು ರೈತ ನಾಯಕರ ಜೊತೆಗೆ ಬಿಜೆಪಿ ನಾಯಕರೂ ಖಾಸಗಿಯಾಗಿ ಹೇಳುತ್ತಾರೆ. ಏಕೆಂದರೆ ಗಡ್ಕರಿಗೆ ವಿರೋಧಿಗಳನ್ನು ಒಪ್ಪಿಸುವ ಶಕ್ತಿಯಿದೆ. ಆದರೆ ಸಮಸ್ಯೆ ಎಂದರೆ ಗಡ್ಕರಿಗೂ ಅಮಿತ್‌ ಶಾ ಅವರಿಗೂ ಅಷ್ಟಕ್ಕಷ್ಟೆ. ಹೀಗಾಗಿ ಅಮಿತ್‌ ಶಾ ಕಳುಹಿಸಿದ್ದು ತಮ್ಮ ಆಪ್ತ ಪಿಯೂಷ್‌ ಗೋಯಲ್‌ನ್ನು. ಆದರೆ ರೈತರು ಹೇಳುವ ಪ್ರಕಾರ, ಪಿಯೂಷ್‌ ಆಡಿದ ಮಾತುಗಳು, ಬಳಸಿದ ಪದಗಳು ಮತ್ತು ಅವರ ವೈಖರಿ ರೈತ ನಾಯಕರನ್ನು ಮೊದಲ ದಿನದಿಂದಲೇ ಕೆರಳಿಸಿತ್ತು. ಆದರೆ ತೋಮರ್‌ ನಡೆದುಕೊಂಡ ರೀತಿ ಮತ್ತು ತೋರಿಸಿದ ತಾಳ್ಮೆ ಬಗ್ಗೆ ರೈತರಿಗೆ ಸಮಾಧಾನವಿದೆ. ಕೇಂದ್ರ ಸರ್ಕಾರದಲ್ಲಿ ವಿರೋಧಿಗಳ ಜೊತೆ ಸಂವಾದ ಸಾಧಿಸಬಲ್ಲ ನಾಯಕರು ಕಡಿಮೆ. ಸತತ ಗೆಲುವಿನ ಪರಿಣಾಮವೂ ಇರಬಹುದೇನೋ.

ವಿಪಕ್ಷಗಳು ರೈತರ ದಿಲ್ಲಿ ಪ್ರತಿಭಟನೆಯಿಂದ ರಾಜಕೀಯ ಲಾಭ ತೆಗೆದುಕೊಳ್ಳುತ್ತಿವೆಯೇ.?

ಪಿಪಿಇ ಕಿಟ್‌ ಧರಿಸಿ ಹಲ್ವಾ ತಯಾರಿ

ಈ ಬಾರಿ ಕೋವಿಡ್‌ ಸಂಕಟ ಇದ್ದರೂ ನಾತ್‌ರ್‍ ಬ್ಲಾಕ್‌ನ ಹಣಕಾಸು ಇಲಾಖೆಯಲ್ಲಿ ಮುಂಗಡಪತ್ರದ ಮುನ್ನ ನಡೆಯುವ ಹಲ್ವಾ ತಯಾರಿಸುವ ಕಾರ್ಯಕ್ರಮಕ್ಕೆ ಏನೂ ಅಡ್ಡಿ ಆಗಲಿಲ್ಲ. ಆದರೆ ಬಾಣಸಿಗರಿಗೆ ಪೂರ್ತಿ ಪಿಪಿಇ ಕಿಟ್‌ ಹಾಕಿಸಿ ಒಳಗಡೆ ಕರೆಸಲಾಗಿತ್ತು. ಈ ಬಾರಿ ಮುದ್ರಣದ ಕೆಲಸ ಏನೂ ಇರಲಿಲ್ಲ. ಹೀಗಾಗಿ ಕಡಿಮೆ ಜನರಿಗೆ ಕೆಳ ಮಹಡಿಯಲ್ಲಿ ವಸತಿ ವ್ಯವಸ್ಥೆ ಮಾಡಲಾಗಿತ್ತು. ಅವರಿಗೆ ಮೊಬೈಲ… ಇಂಟರ್ನೆಟ್‌ಗೆ ಅವಕಾಶ ಇರುವುದಿಲ್ಲ. ಸ್ನಾನ ಶೌಚ ಎಲ್ಲವೂ ಅಲ್ಲಿಯೇ.

ದಿನಕ್ಕೊಮ್ಮೆ ಮಾತ್ರ ಲ್ಯಾಂಡ್‌ಲೈನ್‌ನಿಂದ ಪಹರೆಯವರ ಎದುರು ಮಾತಾಡಲು ಅವಕಾಶ ಇರುತ್ತದೆ. ಅಲ್ಲಿಗೆ ಮೂವರು ಕಾರ್ಯದರ್ಶಿಗಳು ಮತ್ತು ಇಬ್ಬರು ಸಚಿವರಿಗೆ ಮಾತ್ರ ಹೋಗಿ ಬರಲು ಅನುಮತಿ ಇರುತ್ತದೆ. ಇವತ್ತಿನ ವಾಟ್ಸ್‌ಆ್ಯಪ್‌ ಯುಗದಲ್ಲಿ ಮುಂಗಡ ಪತ್ರದ ರಹಸ್ಯ ಕಾಪಾಡಿಕೊಳ್ಳುವುದು ಒಂದು ದೊಡ್ಡ ಸವಾಲು ಬಿಡಿ.

ಅಮಿತ್‌ ಶಾ ಟು ನಿರಾಣಿ

6 ತಿಂಗಳ ಹಿಂದಿನವರೆಗೂ ಮುರುಗೇಶ್‌ ನಿರಾಣಿ ದಿಲ್ಲಿಯಲ್ಲಿ ಅಮಿತ್‌ ಶಾ ಮತ್ತು ಜೆ.ಪಿ ನಡ್ಡಾ ಭೇಟಿಗೆ 3-4 ದಿನ ಕಾಯಬೇಕಾಗುತ್ತಿತ್ತು. ಅಷ್ಟೇ ಅಲ್ಲ, ಪ್ರಹ್ಲಾದ್‌ ಜೋಶಿ, ಸದಾನಂದ ಗೌಡರ ಮೂಲಕ ಅವರು ಭೇಟಿಗೆ ಪ್ರಯತ್ನ ಮಾಡುತ್ತಿದ್ದರು. ಆದರೆ ಕಳೆದ ತಿಂಗಳು ಅಮಿತ್‌ ಶಾ ಬೆಳಗಾವಿಗೆ ಬಂದು ಮುರುಗೇಶ್‌ ನಿರಾಣಿಯವರ ಹೊಸ ಕಾರ್ಖಾನೆಗೆ ಹೋಗಿರುವುದು ಅನೇಕರ ಹುಬ್ಬೇರುವಂತೆ ಮಾಡಿದೆ. ಹೇಗೋ ಗೊತ್ತಿಲ್ಲ, ನಿರಾಣಿ ಅವರಿಗೆ ದಿಲ್ಲಿ ಲಿಂಕ್‌ ಸಿಕ್ಕಂತಿದೆ. ಅಮಿತ್‌ ಶಾ ಕಾರ್ಖಾನೆಗೆ ಬಂದು ಹೋಗಿರುವುದು ಮತ್ತು ರಾಜ್ಯದಲ್ಲಿ ನಿರಾಣಿ ಮಂತ್ರಿ ಆಗಿರುವುದು ಬಿಜೆಪಿಯಲ್ಲೇ ಅನೇಕರ ಅಚ್ಚರಿಗೆ ಕಾರಣವಾಗಿದೆ. ಇದು ಗಮನಿಸಬೇಕಾದ ಸಂಗತಿ ಅಂತೂ ಹೌದು.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ