ಪ್ರತಿಭಟಿಸುವ ಹಕ್ಕಿದೆ, ರಸ್ತೆ ಬಂದ್ ಮಾಡುವಂತಿಲ್ಲ: ರೈತ ಸಂಘಟನೆಗಳಿಗೆ ಸುಪ್ರೀಂ ಚಾಟಿ!
* ರಸ್ತೆ ಬಂದ್ ಮಾಡಿದ ರೈತ ಸಂಘಟನೆಗಳಿಗೆ ಸುಪ್ರೀಂ ಚಾಟಿ
* ಪ್ರತಿಭಟಿಸುವ ಹಕ್ಕಿದೆ, ರಸ್ತೆ ಬಂದ್ ಮಾಡುವಂತಿಲ್ಲ: ಕೋರ್ಟ್
ನವದೆಹಲಿ(ಅ.22): ದೆಹಲಿಯ(Delhi) ಗಡಿಗಳಲ್ಲಿ ಕೃಷಿ ಕಾಯ್ದೆ ವಿರೋಧಿಸಿ ರೈತರು ಪ್ರತಿಭಟನೆ(Fಅರಮೆರಸ ಫರೊತೆಸತ) ಮಾಡುತ್ತಿರುವುದು ಅವರ ಹಕ್ಕು. ಆದರೆ ಪ್ರತಿಭಟನೆಯ ನೆಪದಲ್ಲಿ ರಸ್ತೆಗಳನ್ನು ಅನಿರ್ದಿಷ್ಟಾವಧಿವರೆಗೆ ಬಂದ್ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್(Supreme Court) ಗುರುವಾರ ಹೇಳಿದೆ.
ರಸ್ತೆಗಳು ಬಂದ್ ಆಗಿರುವುದರಿಂದ ದೈನಂದಿನ ಓಡಾಟಕ್ಕೆ ತೊಂದರೆಯಾಗಿದೆ ಎಂದು ನೋಯ್ಡಾ(Noida) ನಿವಾಸಿ ಸಲ್ಲಿಸಿದ್ದ ಸಾರ್ವಜನಿಕ ಹಿಸಾಸಕ್ತಿ ಅರ್ಜಿ ವಿಚಾರಣೆಯನ್ನು ನ್ಯಾ| ಎಸ್.ಕೆ. ಕೌಲ್ ಅವರಿದ್ದ ಪೀಠ ವಿಚಾರಣೆ ನಡೆಸಿತು.
‘ರೈತರಿಗೆ ಪ್ರತಿಭಟನೆ ಮಾಡುವ ಹಕ್ಕಿದೆ ಆದರೆ ರಸ್ತೆಗಳನ್ನು ಮುಚ್ಚುವ ಹಾಗಿಲ್ಲ. ರಸ್ತೆಗಳು ಸಾರ್ವಜನಿಕರ ಓಡಾಡಕ್ಕೆ ಮುಕ್ತವಾಗಿರಬೇಕು’ ಎಂದು ಕೋರ್ಟ್ ಹೇಳಿದೆ. ಇದರೊಂದಿಗೆ ಪ್ರತಿಭಟನೆಯ ವ್ಯೂಹರಚನೆಯ ಕುರಿತು 3 ವಾರದಲ್ಲಿ ವರದಿ ಸಲ್ಲಿಸುವಂತೆ ರೈತ ಸಂಘಟನೆಗಳಿಗೆ ಆದೇಶ ನೀಡಿ, ವಿಚಾರಣೆಯನ್ನು ಡಿ.7ಕ್ಕೆ ಮುಂದೂಡಿತು.
ರಸ್ತೆಗಳನ್ನು ಮುಚ್ಚಿದ್ದು ಪೊಲೀಸರು- ರೈತ ಸಂಘಟನೆ:
ರೈತರು ಪ್ರತಿಭಟನೆ ನಡೆಸುತ್ತಿರುವ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಇಟ್ಟು ರಸ್ತೆಯನ್ನು ಮುಚ್ಚಿರುವುದು ದೆಹಲಿ ಪೊಲೀಸರು, ರೈತರಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ಪ್ರತಿಕ್ರಿಯೆ ನೀಡಿದೆ.
‘ನಾವು ಸುಪ್ರೀಂಕೋರ್ಟ್ ಆದೇಶವನ್ನು ಗೌರವಿಸುತ್ತೇವೆ. ಆದರೆ ಬ್ಯಾರಿಕೇಡ್‌ಗಳನ್ನು ಇಟ್ಟು ರಸ್ತೆ ಮುಚ್ಚಿರುವುದು ದೆಹಲಿ ಪೊಲೀಸರು. ಸಾರ್ವಜನಿಕರ ಸುಗಮ ಓಡಾಟಕ್ಕಾಗಿ ಅವರು ಈ ಬ್ಯಾರಿಕೇಡ್‌ಗಳನ್ನು ತೆಗೆಯಬೇಕು’ ಎಂದು ಬಿಕೆಯು ವಕ್ತಾರ ಹೇಳಿದ್ದಾರೆ.
ಲಖೀಂಪುರ ತನಿಖೆ ವಿಳಂಬ: ಉ.ಪ್ರ.ಕ್ಕೆ ಸುಪ್ರೀಂ ತರಾಟೆ
ನಾಲ್ವರು ರೈತರು ಸೇರಿದಂತೆ ಎಂಟು ಮಂದಿ ಮೃತಪಟ್ಟಉತ್ತರ ಪ್ರದೇಶದ ಲಖೀಂಪುರ ಖೇರಿ ಹಿಂಸಾಚಾರದ ತನಿಖೆಯಲ್ಲಿ ಪೊಲೀಸರು ಬೇಕಂತಲೇ ವಿಳಂಬ ಮಾಡುತ್ತಿರುವಂತೆ ತೋರುತ್ತಿದೆ ಎಂದು ಸುಪ್ರೀಂಕೋರ್ಟ್ ಕಟು ಮಾತುಗಳಲ್ಲಿ ಉತ್ತರ ಪ್ರದೇಶ ಸರ್ಕಾರವನ್ನು ತರಾಟೆ ತೆಗೆದುಕೊಂಡಿದೆ. ‘ಇದು ಮುಗಿಯದ ಕತೆಯಾಗಬಾರದು. ಶೀಘ್ರದಲ್ಲೇ ಎಲ್ಲಾ ಸಾಕ್ಷಿಗಳ ಹೇಳಿಕೆ ದಾಖಲಿಸಿ. ಕೇವಲ 4 ಸಾಕ್ಷಿಗಳ ಹೇಳಿಕೆ ದಾಖಲಿಸಿ ಇನ್ನೂ 40 ಜನರನ್ನು ಏಕೆ ಸುಮ್ಮನೇ ಬಿಟ್ಟಿದ್ದೀರಿ?’ ಎಂದೂ ಸರ್ಕಾರದ ಪರ ವಕೀಲ ಹರೀಶ್ ಸಾಳ್ವೆ ಅವರಿಗೆ ತಾಕೀತು ಮಾಡಿದೆ.
‘ಉತ್ತರ ಪ್ರದೇಶ ಪೊಲೀಸರು ಈ ಪ್ರಕರಣದಲ್ಲಿ ವೃಥಾ ವಿಳಂಬ ಮಾಡುತ್ತಿದ್ದಾರೆ. ಅಂತಹ ಯೋಚನೆ ಬಿಟ್ಟುಬಿಡಿ. ಕೂಡಲೇ ಸಿಆರ್‌ಪಿಸಿ ಸೆಕ್ಷನ್ 164ರ ಅಡಿ ಮ್ಯಾಜಿಸ್ಪ್ರೇಟ್ ಎದುರು ಎಲ್ಲಾ ಸಾಕ್ಷಿಗಳ ಹೇಳಿಕೆ ದಾಖಲಿಸಿ. ಪ್ರಕರಣದ ಸಂತ್ರಸ್ತರಿಗೆ ಹಾಗೂ ಸಾಕ್ಷಿಗಳಿಗೆ ರಕ್ಷಣೆ ಒದಗಿಸಿ’ ಎಂದು ಬುಧವಾರದ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ಪೀಠ ಸೂಚಿಸಿತು.