ನವದೆಹಲಿ(ಡಿ.06): ಕೃಷಿ ಕಾಯ್ದೆ ಬಿಕ್ಕಟ್ಟು ಇತ್ಯರ್ಥಕ್ಕೆ ಶನಿವಾರ ಇಲ್ಲಿ ನಡೆದ ರೈತ ಸಂಘಟನೆಗಳು ಮತ್ತು ಕೇಂದ್ರ ಸಚಿವರ ನಡುವಿನ ಸಭೆ ನಾಟಕೀಯ ಘಟನೆಗಳಿಗೆ ಸಾಕ್ಷಿಯಾಯಿತು. ಕಾಯ್ದೆ ರದ್ದಿಗೆ ರೈತರು ಪಟ್ಟು ಹಿಡಿದರೆ, ಸರ್ಕಾರ ತಿದ್ದುಪಡಿಗೆ ಒಲವು ವ್ಯಕ್ತಪಡಿಸಿತು. ತಮ್ಮ ಬೇಡಿಕೆಗಳ ಕುರಿತಂತೆ ಕೇಂದ್ರ ಸರ್ಕಾರದಿಂದ ಸ್ಪಷ್ಟಭರವಸೆ ಲಭಿಸದ ಹಿನ್ನೆಲೆಯಲ್ಲಿ ಸಭೆಯಿಂದ ಮಧ್ಯದಲ್ಲೇ ಹೊರನಡೆಯಲು ರೈತರು ಮುಂದಾದರು. ಸಚಿವರು ಮನವೊಲಿಸಿ, ಸಭೆ ಮುಂದುವರಿಯುವಂತೆ ನೋಡಿಕೊಂಡರು.

ಸಭೆಯಲ್ಲಿ ರೈತರ ಮೌನವ್ರತ

ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂಬುದು ರೈತರ ಬಹುಮುಖ್ಯ ಬೇಡಿಕೆಯಾಗಿತ್ತು. ಈ ಬಗ್ಗೆ ಸರ್ಕಾರದ ಕಡೆಯಿಂದ ಸ್ಪಷ್ಟಉತ್ತರ ದೊರೆಯಲೇ ಇಲ್ಲ. ಹೀಗಾಗಿ ಕೆಲವು ರೈತ ನಾಯಕರು ‘ಹೌದು’ ಅಥವಾ ‘ಇಲ್ಲ’ ಎಂಬ ಫಲಕಗಳನ್ನು ಹಿಡಿದು ತುಟಿಯ ಮೇಲೆ ಬೆರಳಿಟ್ಟು ಕುಳಿತುಕೊಂಡಿದ್ದರು.

ಗೊಂದಲದ ಹೇಳಿಕೆ

ನಮ್ಮ ಬೇಡಿಕೆ ಕುರಿತು ಆಂತರಿಕವಾಗಿ ಸಮಾಲೋಚಿಸಲು ಇನ್ನಷ್ಟುಸಮಯ ಬೇಕು. ಬಳಿಕವಷ್ಟೇ ನಮ್ಮ ಪ್ರಸ್ತಾಪವನ್ನು ಮುಂದಿನ ಸಭೆಯಲ್ಲಿ ಮುಂದಿಡಲಿದ್ದೇವೆ ಎಂದು ಸಭೆಯಲ್ಲಿ ಭಾಗಿಯಾಗಿದ್ದ ಸಚಿವರು ತಿಳಿಸಿದರು ಎಂದು ರೈತರು ಹೇಳಿದರೆ, ಸಚಿವ ನರೇಂದ್ರ ಸಿಂಗ್‌ ತೋಮರ್‌, ನಾವು ರೈತರಿಂದ ಇನ್ನಷ್ಟುಸೂಕ್ತ ಸಲಹೆ ನಿರೀಕ್ಷಿಸುತ್ತಿದ್ದೇವೆ. ಮುಂದಿನ ಸಭೆಯಲ್ಲಿ ರೈತರಿಂದ ಇಂಥ ಪ್ರಸ್ತಾಪ ಸ್ವೀಕರಿಸಿದ ಬಳಿಕ ಸಮಸ್ಯೆಗೆ ಪರಿಹಾರ ಸಿಗಬಹುದು ಎಂದು ಹೇಳುವ ಮೂಲಕ ಗೊಂದಲಕ್ಕೆ ಕಾರಣರಾದರು.

ಪ್ರಧಾನಿ ಮಧ್ಯಪ್ರವೇಶ

ರೈತರ ಹೋರಾಟ ಆರಂಭವಾದ ಬಳಿಕ ಮೊದಲ ಬಾರಿಗೆ ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸಿದ್ದಾರೆ. ಶನಿವಾರ ಬೆಳಗ್ಗೆ ಸಚಿವರಾದ ನರೇಂದ್ರ ಸಿಂಗ್‌ ತೋಮರ್‌, ಪೀಯೂಷ್‌ ಗೋಯಲ್‌, ರಾಜನಾಥ ಸಿಂಗ್‌ ಹಾಗೂ ಅಮಿತ್‌ ಶಾ ಅವರನ್ನು ಕರೆಸಿಕೊಂಡ ಅವರು, ರೈತ ಹೋರಾಟದ ಕುರಿತು ಚರ್ಚೆ ನಡೆಸಿದ್ದಾರೆ.

ರೈತರ ನಿಲುವೇನು?

3 ಕೃಷಿ ಕಾಯ್ದೆಗಳಿಂದ ಎಪಿಎಂಸಿ ಹಾಗೂ ಕನಿಷ್ಠ ಬೆಂಬಲ ಬೆಲೆಗೆ ಸಂಚಕಾರವಿದೆ. ಹೀಗಾಗಿ ಆ ಮೂರೂ ಕಾಯ್ದೆಗಳನ್ನು ಹಿಂಪಡೆಯಬೇಕು. ಅದು ಈಡೇರುವವರೆಗೂ ಪ್ರತಿಭಟನೆಯನ್ನು ಹಿಂದೆ ಪಡೆಯುವ ಪ್ರಶ್ನೆಯೇ ಇಲ್ಲ.

ಸರ್ಕಾರ ಹೇಳೋದೇನು?

ರೈತರ ಎಲ್ಲ ಬೇಡಿಕೆಗಳನ್ನು ಸರ್ಕಾರ ಮುಕ್ತವಾಗಿ ಪರಿಶೀಲಿಸಲಿದೆ. ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದ ಎಲ್ಲ ಧನಾತ್ಮಕ ಸಲಹೆಗಳನ್ನೂ ಸ್ವೀಕರಿಸಲಾಗುತ್ತದೆ. ರೈತರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯಲು ಸಿದ್ಧವಿದೆ.