ದೇಶದಲ್ಲಿ ಈ ಸಲ ಬಂಪರ್ ಬಿತ್ತನೆ: ಭರ್ಜರಿ ಬೆಳೆ ಸಾಧ್ಯತೆ!
ದೇಶದಲ್ಲಿ ಈ ಸಲ ಬಂಪರ್ ಬಿತ್ತನೆ| ಭರ್ಜರಿ ಬೆಳೆ ಸಾಧ್ಯತೆ| ಬೆಳೆ ಹೆಚ್ಚಳ|
ನವದೆಹಲಿ(ಜೂ.16): ಕೊರೋನಾ ವೈರಸ್ ಹೊಡೆತದಿಂದ ಕಂಗೆಟ್ಟರೈತ ಸಮುದಾಯ ಹಾಗೂ ದೇಶಕ್ಕೊಂದು ಸಿಹಿಸುದ್ದಿ. ಈ ಬಾರಿ ಕಳೆದ ವರ್ಷಕ್ಕಿಂತ ಶೇ.13.2ರಷ್ಟುಹೆಚ್ಚು ಭೂಮಿಯಲ್ಲಿ ಬೇಸಿಗೆ ಬೆಳೆಗಳ (ಖಾರಿಫ್) ಬಿತ್ತನೆಯಾಗಿದ್ದು, ಉತ್ತಮ ಫಸಲಿನ ನಿರೀಕ್ಷೆಯಲ್ಲಿ ರೈತ ಸಮುದಾಯವಿದೆ. ಸರಿಯಾದ ಸಮಯಕ್ಕೆ ಉತ್ತಮ ಮಳೆಯೂ ಸುರಿಯುತ್ತಿರುವುದರಿಂದ ಕೃಷಿ ಕ್ಷೇತ್ರವು ಲಾಕ್‌ಡೌನ್‌ನ ನಷ್ಟದಿಂದ ಹೊರಬರುವ ಆಶಾಭಾವನೆ ಮೂಡಿದೆ.
ಖಾರಿಫ್ ಬೆಳೆಯಿಂದ ದೇಶಕ್ಕೆ ಅರ್ಧ ವರ್ಷಕ್ಕೆ ಬೇಕಾದಷ್ಟುಆಹಾರ ಪೂರೈಕೆಯಾಗುತ್ತದೆ. ಮಳೆಗಾಲ ಶುರುವಾಗುವ ಹೊತ್ತಿಗೆ ಎಷ್ಟುಬಿತ್ತನೆಯಾಗಿದೆ, ರಸಗೊಬ್ಬರ, ಬೀಜ ಹಾಗೂ ಕೀಟನಾಶಕಗಳ ಲಭ್ಯತೆ ಎಷ್ಟಿದೆ ಮತ್ತು ವಾತಾವರಣ ಹೇಗೆ ಪೂರಕವಾಗಿದೆ ಎಂಬುದರ ಮೇಲೆ ಆಯಾ ವರ್ಷದ ಕೃಷಿ ಭವಿಷ್ಯ ನಿಂತಿರುತ್ತದೆ. ಈ ವರ್ಷ ಹೆಚ್ಚು ಭೂಮಿಯಲ್ಲಿ ಬಿತ್ತನೆಯಾಗಿರುವುದು ಮತ್ತು ಹವಾಮಾನವೂ ಪೂರಕವಾಗಿರುವುದರಿಂದ ಬಂಪರ್ ಫಸಲಿನ ನಿರೀಕ್ಷೆಯಲ್ಲಿ ದೇಶವಿದೆ.
ನೈಋುತ್ಯ ಮುಂಗಾರು ದೇಶದ ಶೇ.60ರಷ್ಟುಕೃಷಿ ಕ್ಷೇತ್ರಗಳಿಗೆ ನೀರುಣಿಸುತ್ತದೆ. ಈ ಬಾರಿ ಈಗಾಗಲೇ ದೇಶಾದ್ಯಂತ ಶೇ.31ರಷ್ಟುಹೆಚ್ಚುವರಿ ಮಳೆಯಾಗಿದೆ. ಉತ್ತಮ ಬೆಳೆ ಬಂದರೆ ಗ್ರಾಮೀಣ ಜನರ ಆದಾಯ ಏರಿಕೆಯಾಗಿ, ದೇಶಾದ್ಯಂತ ಸರಕು ಮತ್ತು ಸೇವೆಗಳಿಗೆ ಬೇಡಿಕೆಯೂ ಹೆಚ್ಚುತ್ತದೆ. ಇದು ದೇಶದ ಆರ್ಥಿಕ ಚೇತರಿಕೆಗೆ ಸಹಕಾರಿ ಎಂದು ತಜ್ಞರು ಹೇಳಿದ್ದಾರೆ.
ಕೊರೋನಾ ಸಮಸ್ಯೆಯಿಂದ ಇಲ್ಲಿಯವರೆಗೆ ದೇಶದ ಕೃಷಿ ಕ್ಷೇತ್ರ ಬಚಾವಾಗಿದೆ. ಗ್ರಾಮೀಣ ಪ್ರದೇಶಗಳಿಗೆ ಕೊರೋನಾ ವ್ಯಾಪಕವಾಗಿ ಹರಡಿಲ್ಲ. ಇನ್ನು, ಲಾಕ್‌ಡೌನ್ ವೇಳೆಯಲ್ಲಿ ಎಲ್ಲವೂ ಬಂದ್ ಆಗಿದ್ದರೂ ಕೃಷಿ ಉತ್ಪನ್ನಗಳ ಮಾರಾಟ ಹಾಗೂ ಸಾಗಣೆಗೆ ವಿನಾಯ್ತಿ ನೀಡಲಾಗಿತ್ತು. ಹೀಗಾಗಿ ಆರ್ಥಿಕ ಚೇತರಿಕೆಗೆ ಇಡೀ ದೇಶ ಕೃಷಿ ಕ್ಷೇತ್ರದತ್ತ ಆಶಾಭಾವನೆ ಇರಿಸಿಕೊಂಡಿದೆ.