ನವದೆಹಲಿ(ನ.28): ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಚಲೋ ರಾರ‍ಯಲಿ ಕೈಗೊಂಡಿರುವ ಪಂಜಾಬ್‌ ಹಾಗೂ ಹರ್ಯಾಣ ರೈತರು ಶುಕ್ರವಾರ ದೆಹಲಿಯನ್ನು ಪ್ರವೇಶಿಸಿದ್ದಾರೆ. ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸುವ ವಿವಿಧ ರಸ್ತೆಗಳಲ್ಲಿ ಜಮಾವಣೆ ಆದ ಸಾವಿರಾರು ರೈತರಿಗೆ ಉತ್ತರ ದೆಹಲಿಯ ಬುರಾರಿ ಪ್ರದೇಶದಲ್ಲಿರುವ ನಿರಂಕಾರಿ ಮೈದಾನದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ಅವಕಾಶ ನೀಡಲಾಗಿದೆ. ಹಲವು ಅಡೆತಡೆಗಳು, ಪೊಲೀಸರ ಜೊತೆಗಿನ ಸಂಘರ್ಷದ ಬಳಿಕ ರೈತರು ಮಧ್ಯಾಹ್ನ 3 ಗಂಟೆಯ ಸುಮಾರಿನಲ್ಲಿ ಟಿಕ್ರಿ ಗಡಿಯ ಮೂಲಕ ದೆಹಲಿಯನ್ನು ಪ್ರವೇಶಿಸಿದರು. ಆದರೆ, ಸಿಂಘು ಗಡಿಯ ಮೂಲಕ ದೆಹಲಿಗೆ ಆಗಮಿಸಲು ರೈತರಿಗೆ ಅನುಮತಿ ನೀಡಲಾಗಿಲ್ಲ.

ಇದಕ್ಕೂ ಮುನ್ನ ಮುಂಜಾನೆ ಟಿಕ್ರಿ ಗಡಿಯಲ್ಲಿ ರೈತರನ್ನು ತಡೆಯಲು ಭಾರೀ ಪೊಲೀಸ್‌ ಬಂದೋಬಸ್‌್ತ ನಿಯೋಜನೆ ಮಾಡಲಾಗಿತ್ತು. ರೈತರು ರಸ್ತೆಗೆ ಅಡ್ಡಲಾಗಿ ಹಾಕಿದ್ದ ಬ್ಯಾರಿಕೇಡ್‌ಗಳನ್ನು ಕಿತ್ತೆಸೆದು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಹೀಗಾಗಿ ರೈತರನ್ನು ಚದುರಿಸಲು ಪೊಲೀಸರು ಅಶ್ರುವಾಯು ಹಾಗೂ ಜಲಫಿರಂಗಿ ಪ್ರಯೋಗಿಸಿದರು. ಟ್ರ್ಯಾಕ್ಟರ್‌ಗಳು, ಟ್ರಕ್‌ಗಳನ್ನು ಅಡ್ಡ ಇಟ್ಟು ರೈತರ ವಾಹನಗಳು ಬರದಂತೆ ತಡೆಯಲಾಯಿತು. ರೈತ ಮುಖಂಡರ ಜೊತೆ ಪೊಲೀಸರು ಸಂಧಾನ ನಡೆಸಿದ ಬಳಿಕ ರೈತರಿಗೆ ದೆಹಲಿಯನ್ನು ಪ್ರವೇಶಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಅನುಮತಿ ನೀಡಲಾಯಿತು. ಪ್ರತಿಭಟನೆಗೆ ಅನುಮತಿ ನೀಡುತ್ತಿದ್ದಂತೆ ಭಾರೀ ಸಂಖ್ಯೆಯ ವಾಹನಗಳು ಹಾಗೂ ಕಾಲ್ನಡಿಗೆಯಲ್ಲಿ ರೈತರು ಮೈದಾನದಲ್ಲಿ ಜಮಾವಣೆ ಆಗುತ್ತಿದ್ದಾರೆ.

ಇದೇ ವೇಳೆ ದೆಹಲಿಗೆ ಆಗಮಿಸಿ ಪ್ರತಿಭಟನೆ ನಡೆಸುತ್ತಿರುಬ ರೈತರನ್ನು ಬಂಧಿಸಿ ಇಡಲು ಕ್ರೀಡಾಗಂಣಗಳನ್ನು ತಾತ್ಕಾಲಿಕ ಜೈಲುಗಳಾಗಿ ಬಳಕೆ ಮಾಡುವಂತೆ ಪೊಲೀಸರು ಮಾಡಿಕೊಂಡಿರುವ ಮನವಿಯನ್ನು ದೆಹಲಿಯ ಆಮ್‌ ಆದ್ಮಿ ಸರ್ಕಾರ ನಿರಾಕರಿಸಿದೆ. ಭಾರತದ ಎಲ್ಲಾ ನಾಗರಿಕರಿಗೂ ಸಂವಿಧಾನಾತ್ಮಕವಾಗಿ ಪ್ರತಿಭಟಿಸುವ ಹಕ್ಕು ಇದೆ ಎಂದು ದೆಹಲಿ ಗೃಹ ಸಚಿವ ಸತ್ಯೇಂದ್ರ ಜೈನ್‌ ಹೇಳಿದ್ದಾರೆ.