ರೈತರ ಸಿಟ್ಟಿಗೆ ಪಂಜಾಬ್‌ನಲ್ಲಿ 1300 ಮೊಬೈಲ್ ಟವರ್ ಧ್ವಂಸ| ಜಿಯೋ ಟವರ್‌ಗಳನ್ನು ನಾಶಗೊಳಿಸುತ್ತಿರುವ ಕೃಷಿಕರು
ಚಂಡೀಗಢ(ಡಿ.28): ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಭಾರೀ ಪ್ರತಿಭಟನೆಯಲ್ಲಿ ನಿರತವಾಗಿರುವ ಪಂಜಾಬ್ ರೈತರು, ಶನಿವಾರ ರಾತ್ರೋರಾತ್ರಿ ರಾಜ್ಯದಲ್ಲಿರುವ 150ಕ್ಕೂ ಹೆಚ್ಚು ಮೊಬೈಲ್ ಟವರ್‌ಗಳನ್ನು ಧ್ವಂಸ ಮಾಡಿದ್ದಾರೆ. ಇದರೊಂದಿಗೆ ಪಂಜಾಬ್‌ನಲ್ಲಿ ಈವರೆಗೆ ಒಟ್ಟಾರೆ 1338 ಟವರ್‌ಗಳು ಹಾನಿಯಾಗಿವೆ ಎಂದು ಮೂಲಗಳು ತಿಳಿಸಿವೆ.
ನೂತನ ಕೃಷಿ ಕಾಯ್ದೆಗಳಿಂದ ದೇಶದ ಉದ್ಯಮಿಗಳಾದ ಮುಕೇಶ್ ಅಂಬಾನಿ ಹಾಗೂ ಗೌತಮ್ ಅದಾನಿ ಅವರಿಗೆ ಹೆಚ್ಚು ಅನುಕೂಲವಾಗಲಿದೆ ಎಂಬ ಊಹಾಪೋಹಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು. ಇದರಿಂದಾಗಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಟವರ್‌ಗಳನ್ನೇ ರೈತರು ಗುರಿಯಾಗಿಸಿಕೊಂಡಿದ್ದಾರೆ ಎನ್ನಲಾಗಿದೆ.
ಇದರಿಂದಾಗಿ ಜಿಯೋ ಸೇವೆಯಲ್ಲಿ ವ್ಯತ್ಯಯವಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಕಾನೂನು ಸಂಸ್ಥೆಗಳು ಮುಂದಾಗದ ಹಿನ್ನೆಲೆಯಲ್ಲಿ ಸೇವೆಗಳನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ ಎಂದು ಟೆಲಿಕಾಂ ಸಂಸ್ಥೆಗಳು ಅವಲತ್ತುಕೊಂಡಿವೆ. ಜೊತೆಗೆ ಟವರ್‌ಗಳ ಧ್ವಂಸಕ್ಕೆ ಮುಂದಾದ ರೈತರನ್ನು ತಡೆದ ಟವರ್ ಸ್ಥಳದಲ್ಲಿರುವ ವ್ಯವಸ್ಥಾಪಕರ ಮೇಲೆಯೂ ಹಲ್ಲೆ ನಡೆದಿದೆ ಎನ್ನಲಾಗಿದೆ.
ಸಿಎಂ ಅಮರೀಂದರ್ ಮನವೊಲಿಕೆಗೆ ಬಗ್ಗದ ಪ್ರತಿಭಟನಾಕಾರರು:
ಕಳೆದೊಂದು ತಿಂಗಳಿನಿಂದ ದಿಲ್ಲಿ ಗಡಿಗಳಲ್ಲಿ ಶಾಂತಿಯುತವಾಗಿ ನಡೆಯುತ್ತಿರುವ ರೈತ ಪ್ರತಿಭಟನೆಯನ್ನು ಹಾಡಿಹೊಗಳಿದ್ದ ಪಂಜಾಬ್ ಮುಖ್ಯಮಂತ್ರಿ ಕ್ಯಾ.ಅಮರೀಂದರ್ ಸಿಂಗ್ ಅವರು, ಇದೇ ಸಂಯಮವನ್ನು ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ದರು. ಅಲ್ಲದೆ ಯಾವುದೇ ಕಾರಣಕ್ಕೂ ಕಾನೂನನ್ನು ಕೈಗೆತ್ತಿಕೊಂಡು ಜನಸಾಮಾನ್ಯರಿಗೆ ತೊಂದರೆಯಾಗುವಂತೆ ಮಾಡಬಾರದು ಎಂದು ಕೋರಿದ್ದರು. ಅಲ್ಲದೆ ಕೊರೋನಾದಂಥ ಇಂಥ ಸಂದರ್ಭದಲ್ಲಿ ಟೆಲಿಕಾಂ ಟವರ್‌ಗಳು, ಕಚೇರಿಗಳು, ಸಿಬ್ಬಂದಿ ಮತ್ತು ಅಧಿಕಾರಿಗಳ ಮೇಲಿನ ದಾಳಿ ಮತ್ತು ಹಲ್ಲೆಯಿಂದ ಭಾರೀ ತೊಂದರೆಯಾಗಲಿದೆ ಎಂದು ರೈತರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಆದಾಗ್ಯೂ, ರೈತರು ಶನಿವಾರ-ಭಾನುವಾರದ ಮಧ್ಯರಾತ್ರಿ 150ಕ್ಕೂ ಹೆಚ್ಚು ಟವರ್‌ಗಳ ಮೇಲೆ ದಾಳಿ ನಡೆಸಿ ಧ್ವಂಸ ಮಾಡಿದ್ದಾರೆ
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 28, 2020, 7:35 AM IST