ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ರೈತರ ರಣಕಹಳೆ!
ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ರೈತರ ರಣಕಹಳೆ| ಕರ್ನಾಟಕಕ್ಕೂ ಎಸ್ಕೆಎಂ ಮುಖಂಡರ ಭೇಟಿ, ಪ್ರಚಾರ| ಬಿಜೆಪಿ ಸೋಲಿಸುವ ಅನ್ಯ ಪಕ್ಷಕ್ಕೆ ಮತ ನೀಡಿ: ಎಸ್ಕೆಎಂ
ನವದೆಹಲಿ(ಮಾ.03): ನೂತನ 3 ಕೃಷಿ ಕಾಯ್ದೆಗಳನ್ನು ಹಿಂಪಡೆಯದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೊಶಗೊಂಡಿರುವ ರೈತ ಹೋರಾಟಗಾರರು, ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಕರೆ ನೀಡುವುದಾಗಿ ಗುಡುಗಿದ್ದಾರೆ. ಏತನ್ಮಧ್ಯೆ, ವಿವಿಧ ಬೆಳೆಗಳಿಗೆ 1000 ರು.ಗಿಂತ ಕಡಿಮೆ ಬೆಂಬಲ ಬೆಲೆ ನೀಡುತ್ತಿರುವ ಕರ್ನಾಟಕಕ್ಕೂ ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡರು ಭೇಟಿ ನೀಡಿ, ಈ ಬಗ್ಗೆ ರೈತರಿಗೆ ಅರಿವು ಮೂಡಿಸಲಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ(ಎಸ್ಕೆಎಂ) ಮುಖಂಡ ಯೋಗೇಂದ್ರ ಯಾದವ್ ತಿಳಿಸಿದ್ದಾರೆ.
ಈ ಸಂಬಂಧ ಮಂಗಳವಾರ ಮಾತನಾಡಿದ ಎಸ್ಕೆಎಂ ಮುಖಂಡ ರಾಜೇವಾಲ್, ‘ಚುನಾವಣೆ ನಿಗದಿಯಾಗಿರುವ 5 ರಾಜ್ಯಗಳಿಗೆ ನಮ್ಮ ಪ್ರತಿನಿಧಿಗಳನ್ನು ಕಳುಹಿಸುತ್ತೇವೆ. ಆದರೆ ನಾವು ಇಂಥದ್ದೇ ಪಕ್ಷಕ್ಕೆ ಮತ ಹಾಕುವಂತೆ ರೈತರಿಗೆ ಕೋರಿಕೊಳ್ಳಲ್ಲ. ಬದಲಾಗಿ ಬಿಜೆಪಿಯನ್ನು ಸೋಲಿಸಲು ಸಮರ್ಥವಿರುವ ಯಾವುದೇ ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ಕೇಳಿಕೊಳ್ಳುತ್ತೇವೆ. ತನ್ಮೂಲಕ ರೈತರಿಗೆ ಮರಣ ಶಾಸನವಾಗಲಿರುವ ನೂತನ 3 ಕೃಷಿ ಕಾಯ್ದೆ ಹಿಂಪಡೆಯದ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಪಾಠ ಕಲಿಸುವುದಾಗಿ’ ಹೇಳಿದ್ದಾರೆ.
ದಿಲ್ಲಿ ಗಡಿಗಳಲ್ಲಿ ರೈತರ ಪ್ರತಿಭಟನೆಗೆ 100 ದಿನ ತುಂಬಲಿರುವ ಕಾರಣ ಮಾ.6ರಂದು ಕೆಎಂಪಿ ಹೆದ್ದಾರಿಯನ್ನು 5 ಗಂಟೆಗಳ ಕಾಲ ತಡೆಯಲಾಗುತ್ತದೆ. ಮಹಿಳಾ ದಿನಾಚರಣೆಯಾದ ಮಾ.8ರಂದು ಮಹಿಳಾ ಪ್ರತಿಭಟನಾಕಾರರೇ ದಿಲ್ಲಿ ಗಡಿಗಳಲ್ಲಿ ಪ್ರತಿಭಟನೆ ನೇತೃತ್ವ ವಹಿಸಲಿದ್ದಾರೆ. ಮಾ.12ರಂದು ರೈತ ಮುಖಂಡರು ಕೋಲ್ಕತಾಗೆ ತೆರಳಿ ಬಿಜೆಪಿ ಮತ ಹಾಕದಂತೆ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿಸಿದರು.