ಸಾವರ್ಕರ್ ಮಾದರಿಯಲ್ಲಿ ಕ್ಷಮೆ ಕೇಳಿದ್ದಾರೆ: ಕೃಷಿ ಕಾಯ್ದೆ ಹಿಂಪಡೆದಿದ್ದಕ್ಕೆ ನೆಟ್ಟಿಗರ ರಿಯಾಕ್ಷನ್!
*ವಿವಾದಿತ ಕೃಷಿ ಕಾಯ್ದೆ ಹಿಂಪಡೆದ ಕೇಂದ್ರ ಸರ್ಕಾರ
*ಸಾಮಾಜಿಕ ಜಾಲತಾಣದಲ್ಲಿ ಪರ ವಿರೊಧದ ಚರ್ಚೆ
*ಸರ್ಕಾರದ ನಿರ್ಧಾರವನ್ನು ಟ್ರೋಲ್ ಮಾಡಿದ ನೆಟ್ಟಿಗರು.
ನವದೆಹಲಿ(ನ.19); ಪ್ರಧಾನಿ ನರೇಂದ್ರ ಮೋದಿ ಅವರು ಇಂದು(ನ.19) ವಿವಾದಿತ 3 ಕೃಷಿ ಕಾಯ್ದೆಗಳನ್ನ (Farm Laws) ವಾಪಸ್ ತೆಗೆದುಕೊಳ್ಳುವ ನಿರ್ಧಾರ ಪ್ರಕಟಿಸಿದ್ದಾರೆ. ಬಿಜೆಪಿ ನಾಯಕರು ಮತ್ತು ಆಡಳಿತಾರೂಢ ಬಿಜೆಪಿ ಸರ್ಕಾರದ ಮಂತ್ರಿಗಳು ಪ್ರಧಾನಿ ನರೇಂದ್ರ ಮೋದಿ (Narendra Modi) ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಸರ್ಕಾರ ಅಂತಿಮವಾಗಿ ರೈತರ ಪ್ರತಿಭಟನೆಗೆ ತಲೆಬಾಗಿದ್ದಕ್ಕೆ ವಿರೋಧ ಪಕ್ಷಗಳು ಪ್ರತಿಕ್ರಿಯಿಸಿದ್ದು ಅಭಿನಂದನೆ ಕೂಡ ಸಲ್ಲಿಸಿವೆ. ಅಲ್ಲದೇ ರೈತರ ಹೋರಾಟಕ್ಕೆ ಸಿಕ್ಕ ಪ್ರತಿಫಲ ಎಂದು ಹಲವರು ಹೇಳಿದ್ದಾರೆ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧದ ಚರ್ಚೆಗಳು ನಡೆದಿವೆ. ಕೆಲವರು ಮೋದಿ ಸರ್ಕಾರವನ್ನು ಟ್ರೋಲ್ ಮಾಡಿದ್ರೆ ಇನ್ನೂ ಕೆಲವರು ಇದು ದಲ್ಲಾಳಿಗಳಿಗೆ ಸಂದ ಜಯ ಎಂದು ಹೇಳಿದ್ದಾರೆ. ಕೆಲವರು ಯುದ್ಧದಿಂದ ಹಿಂದೆ ಸರಿಯುವುದು ಗೆಲುವಿನ ತಂತ್ರದ ಭಾಗವೇ ಅಗಿದೆ ಎಂದು ಹೇಳಿದ್ದಾರೆ
ನಾವು ಎಲ್ಲಾ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದೇವೆ. ಈ ತಿಂಗಳ ಕೊನೆಯಲ್ಲಿ ಪ್ರಾರಂಭವಾಗುವ ಸಂಸತ್ ಅಧಿವೇಶನದಲ್ಲಿ, ಈ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಸಾಂವಿಧಾನಿಕ ಪ್ರಕ್ರಿಯೆಗಳನ್ನು ನಾವು ಪೂರ್ಣಗೊಳಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಮೋದಿ ಒಂದು ತೀರ್ಮಾನ ತೆಗೆದುಕೊಂಡರೆ ಎಷ್ಟೇ ಅಡ್ಡಿ ಆತಂಕಗಳು ಎದುರಾದರೂ ಅದರಿಂದ ಹಿಂದೆ ಸರಿಯುವುದಿಲ್ಲ ಎನ್ನುವ ಮಾತು ಇದೀಗ ಹುಸಿಯಾಗಿದೆ. ಈ ಬೆನ್ನಲ್ಲೇ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರವನ್ನು ಕ್ರಷಿ ಕಾಯ್ದೆ ಅಂಗೀಕಾರವಾದಾಗಿನಿಂದ ಬೆಂಬಲಿಸಿದವರಿಗೆ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮೋದಿ ಸರ್ಕಾರ ವಿರುದ್ಧ ಕೀಡಿಕಾರಿದ ವ್ಯಕ್ತಿಯೊಬ್ಬರು "ಕೃಷಿ ಕಾಯ್ದೆ ಹಿಂಪಡೆದಿದ್ದೀರಿ ಆದರೆ ಹೋರಾಟದಲ್ಲಿ ಸತ್ತವರ ಪ್ರಾಣವನ್ನ ಯಾವಾಗ ವಾಪಾಸ್ಸು ಕೊಡುವಿರಿ?? ಎಂದು ಪ್ರಶ್ನಿಸಿದ್ದಾರೆ.
ಇನ್ನು, ಕೆಲವೊಮ್ಮೆ ಯುದ್ದ ಭೂಮಿಯಿಂದ ಹಿಂದೆ ಸರಿಯುವುದು ಸಹ ಯುದ್ಧದ ಗೆಲುವಿನ ತಂತ್ರದ ಭಾಗವೇ ಆಗಿದೆ ಎಂದು ಶ್ರೀಕೃಷ್ಣ ಹೇಳಿದ್ದಾರೆ ಎಂದು ಟ್ವೀಟ್ ಮಾಡುವ ಮೂಲಕ ಮೋದಿ ಸರ್ಕಾರದ ನಡೆಯನ್ನು ಹಲವರು ಸಮರ್ಥಿಸಿದ್ದಾರೆ. ಈ ಮೂಲಕ ಪ್ರಧಾನಿ ಮೋದಿ ಯುದ್ಧದಿಂದ ಹಿಂದೆ ಸರಿದಿರಬಹುದು ಆದರೆ ಸೋತಿಲ್ಲ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಬಿಜೆಪಿ ಸರ್ಕಾರವನ್ನು ಹಲವರು ಟ್ರೋಲ್ ಮಾಡಿದ್ದು ಸಾವರ್ಕರ್ ಮಾದರಿಯಲ್ಲಿ ಕ್ಷಮೆ ಕೋರಿ ಮೂರು ಕೃಷಿ ಕಾಯ್ದೆಗಳನ್ನು ಪ್ರಧಾನಿ ವಾಪಾಸ್ ಪಡೆದಿರುವರರು ಎಂದು ಟ್ವೀಟರ್‌ನಲ್ಲಿ ಬರೆದಿದ್ದಾರೆ. ಈ ಮೂಲಕ ರೈತ ಹೋರಾಟದಲ್ಲಿ ಅಸುನೀಗಿದ 600ಕ್ಕೂ ಹೆಚ್ಚು ರೈತರ ಪ್ರಾಣಕ್ಕೆ ಬೆಲೆ ಇಲ್ಲವೇ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಕೃಷಿ ಕಾಯ್ದೆಗಳನ್ನು ಹಿಂಪಡೆದಿದ್ದಕ್ಕಾಗಿ ನೆಟ್ಟಿಗರೊಬ್ಬರು ಐಕಾನಿಕ್ ಬಾಲಿವುಡ್ ಚಲನಚಿತ್ರವಾದ ಲಗಾನ್ (Lagan) ಪೋಸ್ಟರ್‌ವೊಂದನ್ನು ಟ್ವೀಟ್ ಮಾಡಿದ್ದು "ಹಮ್ ಜೀತ್ ಗಯೆ" (Hum Jeet gaye ̲- ನಾವು ಗೆದ್ದಿದ್ದೇವೆ) ಎಂದು ಬರೆದಿದ್ದಾರೆ. ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿದ್ದಕ್ಕೆ ರೈತರು ಸಂತಸ ವ್ಯಕ್ತಪಡಿಸಿದ್ದಾರೆ ಹಾಗೆಯೇ ಇದು ಅವರಿಗೆ ಸಂದ ಜಯ ಎಂದು ಬರೆದಿದ್ದಾರೆ. ಹೀಗೆ ಸಾಮಾಜಿಕ ಜಾಲತಾಣಾದಾದ್ಯಂತ ಈ ಚರ್ಚೆ ಕೋಲಾಹಾಲ ಸೃಷ್ಟಿಸಿದ್ದು ಪರ ವಿರೋಧದ ಚರ್ಚೆಯ ಅಬ್ಬರ ಜೋರಾಗಿದೆ.
ಇನ್ನು ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ರಾಜಕೀಯ ನಾಯಕರು, ಸಿನಿ ತಾರೆಯರು, ಕ್ರೀಡಾಪಟುಗಳು, ಪತ್ರಕರ್ತರು ಸೇರಿದಂತೆ ಹಲವು ಹಿರಿಯ ವ್ಯಕ್ತಿಗಳು ಪ್ರತಿಕ್ರಿಯಿಸಿದ್ದಾರೆ. ಕೃಷಿ ಕಾಯ್ದೆ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಪ್ರಬಲವಾಗಿ ಧ್ವನಿ ಎತ್ತಿದ್ದರು. ರೈತ ಹೋರಾಟದಲ್ಲಿಯೂ ಭಾಗಿಯಾಗಿದ್ದರು. 'ನನ್ನ ಮಾತನ್ನು ಬರೆದಿಟ್ಟುಕೊಳ್ಳಿ. ಸರ್ಕಾರ ರೈತ ವಿರೋಧಿ ಕೃಷಿ ಕಾಯ್ದೆಯನ್ನು ಹಿಂಪಡೆಯುತ್ತದೆ' ಎಂದು ಜನವರಿ 14 ರಂದು ಟ್ವೀಟ್ ಮಾಡಿದ್ದರು. ಆ ಟ್ವೀಟನ್ನು ಇಂದು ಪುನರುಚ್ಚರಿಸಿದ್ದಾರೆ. 'ದೇಶದ ಅನ್ನದಾತ ಸತ್ಯಾಗ್ರಹದ ಮೂಲಕ ಅಹಂಕಾರದ ತಲೆ ಬಗ್ಗಿಸಿದ್ದಾರೆ. ಜೈ ಹಿಂದ್, ಭಾರತದ ಕೃಷಿಕನಿಗೆ ಜಯವಾಗಲಿ' ಎಂದು ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ ರಾಹುಲ್ ಗಾಂಧಿ!