ನವದೆಹಲಿ[ನ.23]: ಇತ್ತೀಚೆಗೆ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಪತ್ನಿ ಸೋನಿಯಾ ಗಾಂಧಿ ಹಾಗೂ ಮಕ್ಕಳಾದ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಅವರಿಗೆ ನೀಡಲಾಗಿದ್ದ ಎಸ್‌ಪಿಜಿ (ವಿಶೇಷ ಭದ್ರತಾ ಪಡೆ) ಭದ್ರತೆಯನ್ನು ಹಿಂಪಡೆದ ಬೆನ್ನಲ್ಲೇ, ಎಸ್‌ಪಿಜಿ ಕಾಯ್ದೆಗೆ ಮಹತ್ವದ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಮಾಜಿ ಪ್ರಧಾನಿಗಳ ಕುಟುಂಬದವರಿಗೆ ಎಸ್‌ಪಿಜಿ ಭದ್ರತೆ ನೀಡುವ ಅಂಶವನ್ನು ಎಸ್‌ಪಿಜಿ ಕಾಯ್ದೆಯಿಂದ ತೆಗೆದುಹಾಕಲು ಮುಂದಿನ ವಾರ ಲೋಕಸಭೆಯಲ್ಲಿ ಸರ್ಕಾರ ತಿದ್ದುಪಡಿ ಮಸೂದೆ ಮಂಡಿಸಲಿದೆ.

‘ಎಸ್‌ಪಿಜಿ (ತಿದ್ದುಪಡಿ) ಮಸೂದೆಯು ಮುಂದಿನ ವಾರ ಮಂಡನೆಯಾಗುವ ಮಸೂದೆಗಳ ಪಟ್ಟಿಗೆ ಸೇರಿದೆ’ ಎಂದು ಲೋಕಸಭೆಗೆ ಶುಕ್ರವಾರ ಸಂಸದೀಯ ಖಾತೆ ರಾಜ್ಯ ಸಚಿವ ಅರ್ಜುನ್‌ ರಾಮ್‌ ಮೇಘ್ವಾಲ್‌ ತಿಳಿಸಿದರು.

ಎಸ್‌ಪಿಜಿ ಕಾಯ್ದೆಯ ಪ್ರಕಾರ ಹಾಲಿ ಪ್ರಧಾನಿ ಹಾಗೂ ಅವರ ಕುಟುಂಬದ ಸದಸ್ಯರು, ಮಾಜಿ ಪ್ರಧಾನಿ ಹಾಗೂ ಅವರ ಕುಟುಂಬದ ಸದಸ್ಯರಿಗೆ ಎಸ್‌ಪಿಜಿ ಭದ್ರತೆ ನೀಡಲಾಗುತ್ತದೆ. ಆದರೆ ಈಗ ಮಸೂದೆಗೆ ತಿದ್ದುಪಡಿ ತರಲಾಗುತ್ತಿದ್ದು, ಅದರಲ್ಲಿ ಮಾಜಿ ಪ್ರಧಾನಿಗಳ ಕುಟುಂಬದವರಿಗೆ ಎಸ್‌ಪಿಜಿ ಭದ್ರತೆ ನೀಡುವ ಅಂಶವನ್ನು ಕೈಬಿಡಲಾಗಿದೆ. ಇದಕ್ಕೆ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೇಂದ್ರದಿಂದ ಶಾಕ್; ಸೋನಿಯಾ ಗಾಂಧಿ ಕುಟುಂಬದ SPG ಭದ್ರತೆ ವಾಪಾಸ್!

1991ರಲ್ಲಿ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆಯಾದ ನಂತರ ಮಾಜಿ ಪ್ರಧಾನಿಗಳ ಕುಟುಂಬದವರಿಗೂ ಎಸ್‌ಪಿಜಿ ಭದ್ರತೆ ನೀಡುವ ತಿದ್ದುಪಡಿ ತರಲಾಗಿತ್ತು. ಎಸ್‌ಪಿಜಿ ಭದ್ರತೆ ಪಡೆದವರಿಗೆ ಎಸ್‌ಪಿಜಿ ಯೋಧರು, ಹೈಟೆಕ್‌ ಗುಂಡುನಿರೋಧಕ ವಾಹನಗಳು, ಜಾಮರ್‌ಗಳು ಹಾಗೂ ಆ್ಯಂಬುಲೆನ್ಸ್‌ ಸೌಲಭ್ಯ ನೀಡಲಾಗುತ್ತದೆ.

ದೇಶದಲ್ಲಿ ಈಗ ಎಸ್‌ಪಿಜಿ ಭದ್ರತೆ ಪಡೆಯುತ್ತಿರುವ ಗಣ್ಯರೆಂದರೆ ಪ್ರಧಾನಿ ನರೇಂದ್ರ ಮೋದಿ ಮಾತ್ರ. ಮಾಜಿ ಪ್ರಧಾನಿಗಳಾದ ಮನಮೋಹನ ಸಿಂಗ್‌ ಹಾಗೂ ಎಚ್‌.ಡಿ. ದೇವೇಗೌಡ ಅವರಿಗೂ ಕೆಲವು ತಿಂಗಳುಗಳ ಹಿಂದೆ ಎಸ್‌ಪಿಜಿ ಭದ್ರತೆ ಹಿಂಪಡೆಯಲಾಗಿತ್ತು.

ಈಗಿನ ಕಾಯ್ದೆಯಲ್ಲಿ ಏನಿದೆ?

ಹಾಲಿ ಪ್ರಧಾನಮಂತ್ರಿ ಹಾಗೂ ಅವರ ಕುಟುಂಬ ಸದಸ್ಯರಿಗೆ ಎಸ್‌ಪಿಜಿ ಸಿಬ್ಬಂದಿ ಭದ್ರತೆ ನೀಡಬೇಕು. ಪ್ರಧಾನಮಂತ್ರಿಗಳು ಅಧಿಕಾರ ತ್ಯಜಿಸಿ ಮಾಜಿ ಪ್ರಧಾನಿಗಳಾದ ದಿನದಿಂದ ಒಂದು ವರ್ಷದವರೆಗೆ ಅವರಿಗೆ ಹಾಗೂ ಅವರ ಕುಟುಂಬಕ್ಕೆ ಭದ್ರತೆ ಕೊಡಬಹುದು. ಆನಂತರವೂ ಭದ್ರತೆ ಮುಂದುವರಿಸುವ ಮುನ್ನ ಅವರಿಗಿರುವ ಅಪಾಯ ಆಧರಿಸಿ ನಿರ್ಧಾರ ಕೈಗೊಳ್ಳಬೇಕು.

ಸಚಿವರು ಕೂಡಾ ಇನ್ಮುಂದೆ ಪ್ರಧಾನಿ ಮೋದಿಯನ್ನು ಸುಲಭವಾಗಿ ಭೇಟಿಯಾಗುವಂತಿಲ್ಲ!

ಬದಲಾವಣೆ ಏನಾಗಲಿದೆ?

ಹಾಲಿ, ಮಾಜಿ ಪ್ರಧಾನಿಗಳಿಗೆ ಈಗ ಇರುವ ನಿಯಮವೇ ಅನ್ವಯವಾಗಲಿದೆ. ಆದರೆ ಅವರ ಕುಟುಂಬ ಸದಸ್ಯರಿಗೆ ಎಸ್‌ಪಿಜಿ ಭದ್ರತೆ ಇರುವುದಿಲ್ಲ.