ವೀಲ್‌ಚೇರ್ ಸೇವೆ ಇಲ್ಲದೆ ವೃದ್ಧ ಸಾವು, ಏರ್‌ಇಂಡಿಯಾಗೆ 30 ಲಕ್ಷ ದಂಡ ವಿಧಿಸಿದ ಡಿಜಿಸಿಎ!
ಮುಂಬೈ ವಿಮಾನ ನಿಲ್ದಾಣದಲ್ಲಿ ಕುಸಿದುಬಿದ್ದು ಸಾವನ್ನಪ್ಪಿದ ವೃದ್ಧ ಪ್ರಯಾಣಿಕರಿಗೆ ಗಾಲಿಕುರ್ಚಿ ನೀಡಲು ವಿಫಲವಾದ ಕಾರಣಕ್ಕಾಗಿ ಏರ್ ಇಂಡಿಯಾಕ್ಕೆ ವಿಮಾನಯಾನ ನಿಯಂತ್ರಕ ಡಿಜಿಸಿಎ 30 ಲಕ್ಷ ರೂಪಾಯಿ ದಂಡ ವಿಧಿಸಿದೆ.
ನವದೆಹಲಿ (ಫೆ.29): ವೀಲ್‌ಚೇರ್ ಸೇವೆ ಇಲ್ಲದ ಕಾರಣದಿಂದಾಗಿ 80 ವರ್ಷದ ವೃದ್ಧ ಪ್ರಯಾಣಿಕರೊಬ್ಬರು ವಿಮಾನ ನಿಲ್ದಾಣದ ಆಗಮನ ಪ್ರದೇಶದಲ್ಲಿ ಕುಸಿದು ಬಿದ್ದು ಸಾವು ಕಂಡ ಘಟನೆಯಲ್ಲಿ ಡಿಜಿಸಿಎ ಏರ್ ಇಂಡಿಯಾಗೆ 30 ಲಕ್ಷ ರೂಪಾಯಿ ದಂಡ ವಿಧಿಸಿದೆ. ಫೆಬ್ರವರಿ 12 ರಂದು ನಡೆದ ಘಟನೆಯ ಕುರಿತು ಕೈಗೊಂಡ ಕ್ರಮದ ಬಗ್ಗೆ ಮಂಗಳವಾರ ಡಿಜಿಸಿಎ ಮಾಹಿತಿ ನೀಡಿದೆ. ಮುಂಬೈನಲ್ಲಿ ವಿಮಾನ ಇಳಿದ ಕೂಡಲೇ ಹೊರಗಡೆ ಹೋಗುವ ಸಲುವಾಗಿ ವೀಲ್‌ಚೇರ್ ವ್ಯವಸ್ಥೆ ಮಾಡುವಂತೆ ವೃದ್ಧ ಪ್ರಯಾಣಿಕರು ಕೇಳಿಕೊಂಡಿದ್ದರು. 80 ವರ್ಷದ ವೃದ್ಧ ಪ್ರಯಾಣಿಕನ ಪತ್ನಿ ಅದಾಗಲೇ ವೀಲ್‌ಚೇರ್ ಬಳಕೆ ಮಾಡುತ್ತಿದ್ದ ಕಾರಣಕ್ಕಾಗಿ, ಅವರಿಗೆ ಕೆಲ ಸಮಯ ಕಾಯುವಂತೆ ಹೇಳಿದ್ದರು. ವೀಲ್‌ಚೇರ್‌ಗೆ ಸಾಕಷ್ಟು ಬೇಡಿಕೆ ಇರುವ ಕಾರಣ ಸಿಗುವುದು ಸ್ವಲ್ಪ ತಡವಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಪತ್ನಿಯನ್ನು ಕರೆದುಕೊಂಡು ವೃದ್ಧರು ನಡೆದುಕೊಂಡೇ ಹೋಗಲು ತೀರ್ಮಾನ ಮಾಡಿದ್ದರು. ಆದರೆ, ಇಮಿಗ್ರೇಷನ್ ಸಮೀಪ ಬರುವಾಗಲೇ ಅವರು ಅಲ್ಲಿಯೇ ಕುಸಿದು ಬಿದ್ದಿ ಸಾವು ಕಂಡಿದ್ದಾರೆ.
ಈ ಬಗ್ಗೆ ಪರಿಶೀಲನೆ ನಡೆಸಿ ಏರ್ ಇಂಡಿಯಾಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು. ಟಾಟಾ ಒಡೆತನದ ಏರ್‌ಲೈನ್ ಫೆಬ್ರವರಿ 20 ರಂದು ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸಿತು. ವೃದ್ಧ ಪ್ರಯಾಣಿಕರು ಮತ್ತೊಂದು ಗಾಲಿ ಕುರ್ಚಿಗಾಗಿ ಕಾಯುವ ಬದಲು, ಇನ್ನೊಂದು ಗಾಲಿ ಕುರ್ಚಿಯಲ್ಲಿದ್ದ ತನ್ನ ಪತ್ನಿಯೊಂದಿಗೆ ನಡೆದುಕೊಂಡು ಹೋಗಲು ಬಯಸಿದ್ದರು ಎಂದು ವಿಮಾನಯಾನ ಸಂಸ್ಥೆ ತಿಳಿಸಿತ್ತು.
"ಹಾಗಿದ್ದರೂ, ವಿಮಾನಯಾನ ಸಂಸ್ಥೆಯು ವಯಸ್ಸಾದ ಪ್ರಯಾಣಿಕರಿಗೆ ಯಾವುದೇ ಗಾಲಿಕುರ್ಚಿಯನ್ನು ಒದಗಿಸದ ಕಾರಣ ಸಿಎಆರ್‌ನ ನಿಯಮವನ್ನು ಪಾಲಿಸಲ ವಿಫಲವಾಗಿದೆ" ಎಂದು ನಿಯಂತ್ರಕ ಸಂಸ್ಥೆ ಹೇಳಿದೆ. ಇದಲ್ಲದೆ, ಉದ್ಯೋಗಿ(ಗಳ) ವಿರುದ್ಧ ಏರ್‌ಲೈನ್ಸ್ ತೆಗೆದುಕೊಂಡ ಯಾವುದೇ ಕ್ರಮದ ಬಗ್ಗೆ ಏರ್ ಇಂಡಿಯಾ ತಿಳಿಸಲಿಲ್ಲ ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸುವುದನ್ನು ತಡೆಯಲು ಯಾವುದೇ ಸರಿಪಡಿಸುವ ಕ್ರಮಗಳನ್ನು ಸಲ್ಲಿಸಲು ಏರ್‌ಲೈನ್ ವಿಫಲವಾಗಿದೆ' ಎಂದು ಡಿಜಿಸಿಎ ಹೇಳಿದೆ.
ಪ್ರಯಾಣಿಕರಿಗೆ ಸೌಲಭ್ಯ ನೀಡದ ಹಿನ್ನೆಲೆ: ಡಿಜಿಸಿಎನಿಂದ ಏರ್ ಇಂಡಿಯಾಗೆ 10 ಲಕ್ಷ ರು. ದಂಡ
ಈ ಕಾರಣಕ್ಕಾಗಿ ಏರ್ ಇಂಡಿಯಾ ಸಂಸ್ಥೆಯ ಮೇಲೆ 1937ರ ಏರ್‌ಕ್ರಾಫ್ಟ್ ನಿಯಮದ ಅನುಸಾರ 30 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಡಿಜಿಸಿಎ ಮಾಹಿತಿ ನೀಡಿದೆ. ಅದರೊಂದಿಗೆ ಸೂಚನೆಯನ್ನೂ ನೀಡಿರಿವ ಡಿಜಿಸಿಎ, ಪ್ರಯಾಣದ ಸಮಯದಲ್ಲಿ ವಿಮಾನದಿಂದ ಇಳಿಯುವಾಗ ಅಥವಾ ಇಳಿಯುವಾಗ ಸಹಾಯದ ಅಗತ್ಯವಿರುವ ಪ್ರಯಾಣಿಕರಿಗೆ ಸಾಕಷ್ಟು ಸಂಖ್ಯೆಯ ಗಾಲಿಕುರ್ಚಿಗಳು ಲಭ್ಯವಿದೆಯೇ ಎನ್ನುವುದನ್ನು ಎಲ್ಲಾ ವಿಮಾನಯಾನ ಸಂಸ್ಥೆಗಳು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದೆ.
ಹೃದಯಾಘಾತ: ದೆಹಲಿ ಏರ್‌ಪೋರ್ಟ್‌ನಲ್ಲಿ ಏರ್ ಇಂಡಿಯಾದ ಯುವ ಪೈಲಟ್ ಸಾವು