ನವದೆಹಲಿ[ಜ.23]: ಮಹಿಳೆಯೊಬ್ಬರು ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮಾತನಾಡುತ್ತಿರುವ ವಿಡಿಯೋವೊಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿ, ಹೀಗೆ ಮಾತನಾಡುತ್ತಿರುವವರು ಮಾಜಿ ಪ್ರಧಾನಿ ದಿವಂಗತ ಅಟಲ್‌ ಬಿಹಾರಿ ವಾಜಪೇಯಿ ಅವರ ಸೊಸೆ ಎಂದು ಬರೆಯಲಾಗಿದೆ.

‘ವಾಜಪೇಯಿ ಸೊಸೆ ಕೊನೆಗೂ ಮೌನ ಮುರಿದಿದ್ದಾರೆ. ಅವರು ಏನು ಹೇಳುತ್ತಿದ್ದಾರೆ ಒಮ್ಮೆ ಕೇಳಿ’ ಎಂದು ಅದಕ್ಕೆ ಕ್ಯಾಪ್ಷನ್‌ ಬರೆಯಲಾಗಿದೆ. 4 ನಿಮಿಷವಿರುವ ಈ ವಿಡಿಯೋದಲ್ಲಿ, ‘ಬ್ರಿಟಿಷರು ಸಾಕಷ್ಟುಕೆಟ್ಟಕೆಲಸ ಮಾಡಿದ್ದಾರೆ. ಆದರೆ ಅವರು ಹೊರಗಿನವರು. ಅವರು ನಮ್ಮವರಲ್ಲವೇ ಅಲ್ಲ, ಈ ಭೂಮಿಯಲ್ಲಿ ಹುಟ್ಟಿದವರಲ್ಲ. ವ್ಯತ್ಯಾಸ ಏನೆಂದರೆ ಅವರು ಅಕ್ಷರಸ್ಥರಾಗಿದ್ದರು, ಇವರುಗಳಂತೆ ಅನಕ್ಷರಸ್ಥರಾಗಿರಲಿಲ್ಲ. ಇವರು ನಮ್ಮ ದೇಶದ ಚಿಂತೆ ಬಿಟ್ಟು ಯಾವಾಗಲೂ ಪಾಕಿಸ್ತಾನದ ಬಗ್ಗೆಯೇ ಚಿಂತೆ ಮಾಡುತ್ತಿರುತ್ತಾರೆ. ಹೀಗೆ ಪಾಕ್‌ ಬಗ್ಗೆ ಯೋಚಿಸುತ್ತಿದ್ದರೆ ಭಾರತದ ಬಗ್ಗೆ ಮಾತನಾಡುವವರು ಯಾರು. ನಿಮ್ಮನ್ನು ಚುನಾಯಿಸಿದ್ದಕ್ಕೆ ವಿಷಾದಿಸುತ್ತೇವೆ’ ಎಂದು ಮಹಿಳೆ ಹೇಳುತ್ತಾರೆ.

ಹೀಗೆ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವವರು ವಾಜಪೇಯಿ ಸೊಸೆಯೇ ಎಂದು ಪರಿಶೀಲಿಸಿದಾಗ ವಿಡಿಯೋದಲ್ಲಿರುವ ಮಹಿಳೆ ವಾಜಪೇಯಿ ಸೊಸೆ ಅಲ್ಲ ಎಂದು ತಿಳಿದುಬಂದಿದೆ. ವಿಡಿಯೋದಲ್ಲಿರುವ ಮಹಿಳೆ ಹೆಸರು ಅತೀವಾ ಅಲ್ವಿ .

ಈ ವಿಡಿಯೋ 2020ರ ಜನವರಿ 3ರಂದು ಯುಟ್ಯೂಬ್‌ನಲ್ಲಿ ಅಪ್‌ಲೋಡ್‌ ಆಗಿದೆ. ಬೂಮ್‌ ಅತೀವಾ ಅವರನ್ನು ಫೇಸ್‌ಬುಕ್‌ ಮೂಲಕ ಸಂಪರ್ಕಿಸಿ ಈ ಬಗ್ಗೆ ಸ್ಪಷ್ಟೀಕರಣವನ್ನೂ ಪಡೆದಿದೆ.