ನವದೆಹಲಿ[ನ.02]: ಪೌರತ್ವ ತಿದುಪಡಿ ಕಾಯ್ದೆ, ರಾಷ್ಟ್ರೀಯ ನಾಗರಿಕ ನೋಂದಣಿ ಜಾರಿ ಕುರಿತಂತೆ ಸಾಕಷ್ಟುಪರ-ವಿರೋಧ ಚರ್ಚೆಯಾಗುತ್ತಿದೆ. ಈ ನಡುವೆ ಅಕ್ರಮ ನಿವಾಸಿಗಳ ಬಂಧನಕ್ಕೆ ಕೇಂದ್ರ ಸರ್ಕಾರ ಬಂಧನ ಕೇಂದ್ರಗಳನ್ನು ತೆರೆದಿದೆ ಎಂಬ ಬಗ್ಗೆಯೂ ಸುದ್ದಿಯಾಗುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಭಾರತದಲ್ಲಿ ಬಂಧನ ಕೇಂದ್ರಗಳಿವೆ ಎಂಬುದನ್ನು ಅಲ್ಲಗಳೆದಿದ್ದಾರೆ.

ಇದೇ ವೇಳೆ ಬಂಧನ ಕೇಂದ್ರದಲ್ಲಿ ತಾಯಿಯು ಕಂಬಿಯ ಹಿಂದೆ ನಿಂತು ಮಗುವಿಗೆ ಹಾಲುಣಿಸುತ್ತಿರುವ ಮನಕಲಕುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಅದನ್ನು ಪೋಸ್ಟ್‌ ಮಾಡಿ ಭಾರತದ ಬಂಧನ ಕೇಂದ್ರಗಳ ವಾಸ್ತವ ಚಿತ್ರಣ ಎಂದು ಹೇಳಲಾಗಿದೆ. ಚೋಟು ಖಾನ್‌ ಎಂಬ ಫೇಸ್‌ಬುಕ್‌ ಬಳಕೆದಾರರು ಈ ಫೋಟೋವನ್ನು ಪೋಸ್ಟ್‌ ಮಾಡಿ, ‘ಕಾಳಜಿ ಕೇಂದ್ರವೂ ಇಲ್ಲ!’ ಎಂದು ಫೋಟೋ ಮೇಲೆ ಬರೆದಿದ್ದಾರೆ. ಜೊತೆಗೆ ‘ದಂಪತಿಗಳಿಬ್ಬರೂ ಬಾಂಗ್ಲಾ ದೇಶದಿಂದ ಬಂದವರು. ಪತ್ನಿ ಮುಸ್ಲಿಂ ಸಮುದಾಯಕ್ಕೆ ಸೇರಿದ್ದು ಎನ್‌ಆರ್‌ಸಿ ಪಟ್ಟಿಯಲ್ಲಿ ಹೆಸರಿಲ್ಲದ ಕಾರಣ ಬಂಧನ ಕೇಂದ್ರದಲ್ಲಿ ಇರಿಸಲಾಗಿದೆ. ಆದರೆ ದಂಪತಿಗಳು ತಮ್ಮ ಮಗುವಿಗೆ ಸಮಯಕ್ಕೆ ಸರಿಯಾಗಿ ಹಲುಣಿಸಲೇ ಬೇಕು. ಮುಂದಿನ ದಿನಗಳಲ್ಲಿ ಮೋದಿಯವರು ಹೇಳುವ ಅಚ್ಚೇ ದಿನಕ್ಕೆ ಇನ್ನೂ ಉತ್ತಮ ಉದಾಹರಣೆಗಳು ಸಿಗಲಿವೆ’ ಎಂದು ಒಕ್ಕಣೆ ಬರೆದಿದ್ದಾರೆ.

ಆದರೆ ನಿಜಕ್ಕೂ ಇದು ಭಾರತದ ಬಂಧನ ಕೇಂದ್ರಗಳೇ ಎಂದು ಇಂಡಿಯಾ ಟುಡೇ ಪರಿಶೀಲಿಸಿದಾಗ ಇದು ಭಾರತ ಬಂಧನ ಕೇಂದ್ರ ಅಲ್ಲ ಅರ್ಜೆಂಟೈನಾದ್ದು ಎಂದು ತಿಳಿದುಬಂದಿದೆ. ಕಳೆದ 6 ವರ್ಷಗಳಿಂದ ಈ ಫೋಟೋ ಸೋಷಿಯಲ್‌ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.