‘ತಾಯಿಯೊಬ್ಬಳು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರೆ ಮತ್ತು ಆ ಮಕ್ಕಳಲ್ಲಿ ಒಂದು ಗಂಡು ಮತ್ತು ಒಂದು ಹೆಣ್ಣಾಗಿದ್ದರೆ ಆಗ ತಾಯಿಯ ಒಂದು ಸ್ತನ ಒಂದು ರೀತಿಯ ಹಾಲು ಉತ್ಪತ್ತಿ ಮಾಡುತ್ತದೆ, ಇನ್ನೊಂದು ಸ್ತನ ಇನ್ನೊಂದು ರೀತಿಯ ಹಾಲು ಉತ್ಪತ್ತಿ ಮಾಡುತ್ತದೆ ಎಂದು ಸದ್ಗುರು ಜಗ್ಗಿ ವಾಸುದೇವ್‌ ಹೇಳಿಕೆ ನೀಡಿದ್ದಾರೆ. ಈ ಮನುಷ್ಯನನ್ನು ಸ್ತ್ರೀರೋಗತಜ್ಞರ ರಾಷ್ಟ್ರೀಯ ಸಮಾವೇಶದಲ್ಲಿ ಮಾತಾಡಲು ಕರೆದಿದ್ದರು’ ಎಂಬ ಟ್ವೀಟ್‌ ವೈರಲ್‌ ಆಗುತ್ತಿದೆ.

 

ಈ ಹೇಳಿಕೆಯನ್ನು ಗಮನಿಸಿ, ನಿಮಗೆ ಗೊತ್ತಿರುವ ವಿಷಯದ ಬಗ್ಗೆ ಮಾತ್ರ ಮಾತಾಡಬೇಕು. ಗೊತ್ತಿಲ್ಲದ ವಿಷಯದ ಬಗ್ಗೆ ಮಾತಾಡಲು ಹೋದರೆ ಹೀಗೇ ಆಗುತ್ತದೆ. ಎಷ್ಟೂಅಂತ ಸುಳ್ಳು ಹೇಳುತ್ತೀರಾ ಎಂದೆಲ್ಲ ನೇಟಿಜನ್‌ಗಳು ಸದ್ಗುರು ಅವರನ್ನು ಆಡಿಕೊಂಡು ನಕ್ಕಿದ್ದಾರೆ.

Fact Check| ಶಾಹೀನ್‌ ಬಾಗ್‌ ಹಿಂಭಾಗದಲ್ಲಿ ಕಾಂಡೋಮ್‌ಗಳ ರಾಶಿ!

ನಿಜಕ್ಕೂ ಸದ್ಗುರು ಹೀಗೆ ಹೇಳಿದ್ದರಾ ಎಂದು ಪರಿಶೀಲಿಸಿದಾಗ ಇದು 2017ರಲ್ಲಿ ದೆಹಲಿ ಐಐಟಿ ಕಾರ್ಯಕ್ರಮದಲ್ಲಿ ಅವರು ನೀಡಿದ್ದ ಹೇಳಿಕೆ ಹೌದೆಂಬುದು ಗೊತ್ತಾಗಿದೆ. ಆದರೆ, ಅವರು ಈ ಹೇಳಿಕೆಯ ಜೊತೆಗೆ, ತಾಯಿ ಗಂಡುಮಗುವಿಗೆ ಜನ್ಮ ನೀಡಿದರೆ ಆಕೆಯ ಸ್ತನ ಒಂದು ರೀತಿಯ ಪೋಷಕಾಂಶವಿರುವ ಹಾಲನ್ನು ಉತ್ಪತ್ತಿ ಮಾಡುತ್ತದೆ, ಹೆಣ್ಣುಮಗುವಿಗೆ ಜನ್ಮ ನೀಡಿದರೆ ಇನ್ನೊಂದು ರೀತಿಯ ಹಾಲು ಉತ್ಪತ್ತಿ ಮಾಡುತ್ತದೆ. ನಿಸರ್ಗದ ಸೌಂದರ್ಯವಿದು ಎಂದೂ ಅವರು ಹೇಳಿದ್ದರು. ಇದು ವೈಜ್ಞಾನಿಕವಾಗಿ ಸಾಬೀತಾಗಿರುವ ಸತ್ಯ ಎಂದು ವೈದ್ಯರೂ ತಿಳಿಸಿದ್ದಾರೆ. ಆದರೆ, ಅದರ ನಂತರ ಸದ್ಗುರು ಹೇಳಿದ ಅವಳಿ ಮಕ್ಕಳ ಕುರಿತ ಮಾಹಿತಿಯನ್ನು ವೈದ್ಯರು ದೃಢಪಡಿಸಿಲ್ಲ. ಹೀಗಾಗಿ ಸದ್ಗುರು ಕುರಿತಾದ ವೈರಲ್‌ ಹೇಳಿಕೆ ಅರ್ಧ ಸತ್ಯ, ಅರ್ಧ ಸುಳ್ಳು.

- ವೈರಲ್ ಚೆಕ್