ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ) ಜಾರಿ ಖಂಡಿಸಿ ದೇಶಾದ್ಯಂತ ಪ್ರತಿಭಟನೆ ನಡೆಸಲಾಗಿತ್ತು. ವಿದ್ಯಾರ್ಥಿಗಳೂ ಸೇರಿದಂತೆ ಲಕ್ಷಾಂತರ ಜನರು ಬೀದಿಗಿಳಿದು ಹೋರಾಟ ಮಾಡಿದ್ದರು. ಈ ನಡುವೆ ಕಾಯ್ದೆ ಬೆಂಬಲಿಸಿಯೂ ಪ್ರತಿಭಟನೆಗಳು ನಡೆದಿದ್ದವು. ಆದರೆ ಪೌರತ್ವ ಕಾಯ್ದೆ ಬೆಂಬಲಿಸಿ ನಡೆಸಿದ್ದ ಪ್ರತಿಭಟನೆ ವೇಳೆ ಬರೀ ಕೇಸರಿ ಬಾವುಟಗಳೇ ರಾರಾಜಿಸುತ್ತಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

 

ಈ ವಿಡಿಯೋ ರಾಜಸ್ತಾನದ ಭಿಲ್ವಾರದಲ್ಲಿ ಸಿಎಎ ಬೆಂಬಲಿಸಿ ನಡೆದ ಪ್ರತಿಭಟನೆಯದ್ದು ಎಂದು ಹೇಳಲಾಗಿದೆ. ಫೇಸ್‌ಬುಕ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್‌ ಮಾಡಿ, ‘ ಭಿಲ್ವಾರದಲ್ಲಿ ಎನ್‌ಆರ್‌ಸಿ ಮತ್ತು ಸಿಎಎ ಬೆಂಬಲಿಸಿ ನಡೆದ ಪ್ರತಿಭಟನೆಯಲ್ಲಿನ ವಾತಾವರಣ ಹೀಗಿತ್ತು. ಮೋದಿ ಜಿ ನೀವು ಒಂದು ಹೆಜ್ಜೆಯನ್ನೂ ಹಿಂದಿಡಬೇಡಿ. ಪ್ರತಿಯೊಬ್ಬ ಹಿಂದುಗಳೂ ನಿಮ್ಮ ಪರ ಇದ್ದಾರೆ’ ಎಂದು ಒಕ್ಕಣೆ ಬರೆಯಲಾಗಿದೆ. ಈ ಪೋಸ್ಟ್‌ 4000ಕ್ಕೂ ಅಧಿಕ ಬಾರಿ ಶೇರ್‌ ಆಗಿದೆ.

Fact Check: ಪೌರತ್ವ ವಿರೋಧಿ ಪ್ರತಿಭಟನೆ ವೇಳೆ ಹಿಂದು ದೇವರ ಫೋಟೋಗೆ ಬೆಂಕಿ?

ಆದರೆ ನಿಜಕ್ಕೂ ಇದು ಪೌರತ್ವ ಕಾಯ್ದೆ ಪರ ಪ್ರತಿಭಟನೆಯದ್ದೇ ಎಂದು ಇಂಡಿಯಾ ಟುಡೇ ಪರಿಶೀಲಿಸಿದಾಗ ವೈರಲ್‌ ಆಗಿರುವ ಸುದ್ದಿ ಸುಳ್ಳು, ವಿಡಿಯೋವು ಕರ್ನಾಟಕದ ಕಲಬುರಗಿ ಜಿಲ್ಲೆಯಲ್ಲಿ ನಡೆದ ರಾಮನವಮಿಯ ಶೋಭಾ ಯಾತ್ರೆಯದ್ದು ಎಂದು ತಿಳಿದುಬಂದಿದೆ. ಅಲ್ಲಿಗೆ ಇದು ಎನ್‌ಆರ್‌ಸಿ ಮತ್ತು ಸಿಎಎಗೆ ಸಂಬಂಧಿಸಿದ್ದೇ ಅಲ್ಲ ಎಂಬುದು ಸ್ಪಷ್ಟ. ಯುಟ್ಯೂಬ್‌ನಲ್ಲಿ 2018ರ ಏಪ್ರಿಲ್‌ನಲ್ಲಿ ಈ ವಿಡಿಯ ಅಪ್ಲೋಡ್‌ ಆಗಿದೆ. ಇದೇ ವಿಡಿಯೋವನ್ನು ಅಯೋಧ್ಯೆ ಹೆಸರಿನಲ್ಲಿಯೂ ಸೋಷಿಯಲ್‌ ಮೀಡಿಯಾದಲ್ಲಿ ಹರಡಲಾಗಿತ್ತು.

- ವೈರಲ್ ಚೆಕ್