ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಉದ್ಧವ್‌ಠಾಕ್ರೆ ಅವರು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಫೋಟೋಗೆ ತಲೆಬಾಗಿ ನಮಸ್ಕರಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.  ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಉದ್ಧವ್‌ಠಾಕ್ರೆ ಅವರು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಫೋಟೋಗೆ ತಲೆಬಾಗಿ ನಮಸ್ಕರಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಈ ಫೋಟೋವನ್ನು ಪೋಸ್ಟ್‌ ಮಾಡಿ, ‘ಒಕ್ಕೂಟಕ್ಕೆ ಸ್ವಾಗತ. ಕೊನೆಗೂ ನಾವೆಲ್ಲರೂ ಜಾತ್ಯತೀತವಾದಿಗಳು!’ ಎಂದು ಒಕ್ಕಣೆ ಬರೆಯಲಾಗಿದೆ. ಅದರೊಂದಿಗೆ ‘ರಾಮ್‌ಸೇನಾ ಟು ಸೋನಿಯಾಸೇನಾ’, ‘ಶಿವಸೇನಾ ಚೀಟ್ಸ್‌ ಮಹಾರಾಷ್ಟ್ರ’ ಎಂದೆಲ್ಲಾ ಹ್ಯಾಶ್‌ಟ್ಯಾಗ್‌ ಹಾಕಲಾಗಿದೆ.

ಆದರೆ ನಿಜಕ್ಕೂ ಮುಖ್ಯಮಂತ್ರಿ ಉದ್ಧವ್‌ಠಾಕ್ರೆ, ಸೋನಿಯಾ ಗಾಂಧಿ ಅವರ ಫೋಟೋಗೆ ತಲೆಬಾಗಿ ನಮಸ್ಕರಿಸಿದ್ದರೇ ಎಂದು ಪರಿಶೀಲಿಸಿದಾಗ ಇದು ಫೋಟೋಶಾಪ್‌ ಮೂಲಕ ಎಡಿಟ್‌ ಮಾಡಿರುವ ಚಿತ್ರ ಎಂಬುದು ಸಾಬೀತಾಗಿದೆ. ವೈರಲ್‌ ಆಗಿರುವ ಫೋಟೋದ ಮೂಲ ಚಿತ್ರವನ್ನು ‘ಆಫೀಸ್‌ ಆಫ್‌ ಉದ್ಧವ್‌ ಠಾಕ್ರೆ’ ತನ್ನ ಅಧಿಕೃತ ಟ್ವೀಟರ್‌ ಖಾತೆಯಲ್ಲಿ ನವೆಂಬರ್‌ 26ರಂದು ಪೋಸ್ಟ್‌ ಮಾಡಿದ್ದರು.

ಅದರಲ್ಲಿ, ‘ಮಹಾವಿಕಾಸ್‌ ಅಘಾಡಿಯು ಶಿವಸೇನಯ ನಾಯಕ ಉದ್ಧವ್‌ ಠಾಕ್ರೆ ಅವರನ್ನು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಘೋಷಣೆ ಮಾಡಿದ ಬಳಿಕ ಉದ್ಧವ್‌ ಠಾಕ್ರೆ ಬಾಲಾಸಾಹೇಬ್‌ ಠಾಕ್ರೆ ಅವರಿಗೆ ನಮಸ್ಕರಿಸಿದರು’ ಎಂದು ಒಕ್ಕಣೆ ಬರೆಯಲಾಗಿದೆ.

ಮೂಲ ಫೋಟೋದಲ್ಲಿ ಉದ್ಧವ್‌, ತಮ್ಮ ತಂದೆ ಬಾಲಾ ಸಾಹೇಬ್‌ ಠಾಕ್ರೆ ಅವರಿಗೆ ವಂದಿಸುತ್ತಿದ್ದಾರೆ. ಹಲವು ಮುಖ್ಯವಾಹಿನಿಯ ಮಾಧ್ಯಮಗಳೂ ಈ ಮೂಲ ಫೋಟೋವನ್ನು ಬಳಸಿಕೊಂಡು ವರದಿ ಮಾಡಿರುವುದು ಲಭ್ಯವಿದೆ.

Scroll to load tweet…

ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಹಲವು ರಾಜಕೀಯ ಪ್ರಹನಗಳ ಬಳಿಕ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್‌ ಮೈತ್ರಿ ಸರ್ಕಾರ ರಚನೆ ಮಾಡಿದ್ದು, ಉದ್ಧವ್‌ ಠಾಕ್ರೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಅನಂತರ ಸೋಷಿಯಲ್‌ ಮಿಡಿಯಾಗಳಲ್ಲಿ ಹಲವು ಸುಳ್ಳುಸುದ್ದಿಗಳು ಹರಿದಾಡುತ್ತಿವೆ.