ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಸಾಕಷ್ಟುಚರ್ಚೆಯಾಗುತ್ತಿದೆ. ಕಾಯ್ದೆಯ ಪರ-ವಿರೋಧ ಚರ್ಚೆಯಾಗುತ್ತಿದೆ. ಈ ನಡುವೆ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಅನೇಕ ಸುಳ್ಳುಸುದ್ದಿಗಳೂ ಹರಿದಾಡುತ್ತಿವೆ.

ಸದ್ಯ ಪ್ರಿಯಾಂಕಾ ಗಾಂಧಿ ಈ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ, ಅವರಿದ್ದ ಗುಂಪಿನಲ್ಲಿ ವ್ಯಕ್ತಿಯೊಬ್ಬ ಸಿಎಎ ತೊಲಗಿಸಿ, ಈ ದೇಶವನ್ನು ಮುಸ್ಲಿಂ ರಾಷ್ಟ್ರ ಮಾಡಿ’ ಎಂದು ಬರೆದ ಫಲಕವನ್ನು ಹಿಡಿದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ರಂಜಿತ್‌ ಝಾ ಹೆಸರಿನ ಫೇಸ್‌ಬುಕ್‌ ಬಳಕೆದಾರರು ಮೊದಲಿಗೆ ಈ ಫೋಟೋವನ್ನು ಪೋಸ್ಟ್‌ ಮಾಡಿದ್ದು, ಇದನ್ನು 400ಕ್ಕೂ ಹೆಚ್ಚು ಜನರು ಇದನ್ನು ಶೇರ್‌ ಮಾಡಿದ್ದಾರೆ.

ಆದರೆ ನಿಜಕ್ಕೂ ಪ್ರತಿಭಟನೆ ವೇಳೆ ಈ ರೀತಿಯ ಫಲಕ ಹಿಡಿಯಲಾಗಿತ್ತೇ ಎಂದು ಇಂಡಿಯಾ ಟು ಡೇ ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂದು ಬಯಲಾಗಿದೆ. ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಇದೇ ರೀತಿ ಚಿತ್ರ ಲಭ್ಯವಾಗದಿದ್ದರೂ, ಇದಕ್ಕೆ ಹೊಂದಾಣಿಕೆಯಾಗುವ ಸಾಕಷ್ಟುಫೋಟೋಗಳು ಲಭ್ಯವಾಗಿವೆ. ವಾಸ್ತವವಾಗಿ ಪ್ರಿಯಾಂಕ ಗಾಂಧಿ ಹಿಂದೆ ಹಿಡಿದಿದ್ದ ಫಲಕದ ಮೇಲೆ, ‘ನಮಗೆ ಉದ್ಯೋಗ, ಊಟ ಕೊಡಿ. ಗುಂಡೇಟು ಅಲ್ಲ’ ಎಂದು ಬರೆಯಲಾಗಿತ್ತು.

Fact Check: ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆಗಿಳಿದ್ರಾ ಪೊಲೀಸರು?

ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳ ಮೇಲಿನ ಪೊಲೀಸ್‌ ದೌರ್ಜನ್ಯವನ್ನು ಖಂಡಿಸಿ ಡಿಸೆಂಬರ್‌ 16ರಂದು ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್‌ ನಾಯಕರೊಂದಿಗೆ ದೆಹಲಿಯಾ ಇಂಡಿಯಾ ಗೇಟ್‌ ಬಳಿ ಪ್ರತಿಭಟನೆಗೆ ಕೂತಿದ್ದರು. ಆ ಸಂದರ್ಭದ ಫೋಟೋವನ್ನು ಎಡಿಟ್‌ ಮಾಡಿ ಸುಳ್ಳುಸುದ್ದಿ ಹರಡಲಾಗುತ್ತಿದೆ.

- ವೈರಲ್ ಚೆಕ್