ಭಾರತದ ಸಿಖ್‌ ಭಕ್ತಾದಿಗಳಿಗೆ ಪಾಕಿಸ್ತಾನದಲ್ಲಿರುವ ಗುರುದ್ವಾರ ದರ್ಬಾರ್‌ ಸಾಹಿಬ್‌ಗೆ ಭೇಟಿ ನೀಡಲು ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳು ಸೇರಿ ಕರ್ತಾರ್‌ಪುರ ಕಾರಿಡಾರ್‌ ನಿರ್ಮಿಸುತ್ತಿವೆ. ಪಾಕಿಸ್ತಾನವು ಭಾರತದ ಗಡಿಯಿಂದ ಕರ್ತಾರ್‌ಪುರದ ಗುರುದ್ವಾರದ ದರ್ಬಾರ್‌ ಸಾಹಿಬ್‌ ವರೆಗೆ ಕಾರಿಡಾರ್‌ ನಿರ್ಮಿಸುತ್ತಿದೆ.

ಅಂತೆಯೇ ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಡೇರಾ ಬಾಬಾ ನಾನಕ್‌ ದೇಗುಲದಿಂದ ಪಾಕಿಸ್ತಾನದ ಗಡಿ ವರೆಗೆ ಭಾರತವು ಕಾರಿಡಾರ್‌ ನಿರ್ಮಿಸುತ್ತಿದೆ. ಇದೇ ನ.9ರಂದು ಪಾಕಿಸ್ತಾನ ಇದರ ಉದ್ಘಾಟನಾ ಸಮಾರಂಭ ಹಮ್ಮಿಕೊಂಡಿದ್ದು, ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಉದ್ಘಾಟಿಸಲಿದ್ದಾರೆ.

Fact Check: ಅಯೋಧ್ಯೆ ಪೊಲೀಸರಿಂದ ಫೇಸ್ಬುಕ್ ಮೇಲೆ ಕಣ್ಣು!

ಈ ನಡುವೆ, ‘ಕರ್ತಾರ್‌ಪುರ ಗುರುದ್ವಾರದ ಮೇಲ್ಛಾವಣಿ ಮೇಲೆ ಸಿಕ್ಕ ಧ್ವಜದ ಚಿತ್ರ ಬಿಡಿಸುವ ಬದಲಾಗಿ, ಪಾಕಿಸ್ತಾನ ಧ್ವಜದ ಚಿತ್ರವನ್ನು ಬಿಡಿಸಲಾಗಿದೆ. ಸಿಕ್ಕರು ಇದನ್ನು ನೋಡಿ ಸುಮ್ಮನಿದ್ದಾರೆಯೇ, ಅಥವಾ ಅವರೂ ಇಸ್ಲಾಂ ಧರ್ಮಕ್ಕೆ ಸೇರಿದ್ದಾರಾ?’ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇಂಡಿಯಾ ಟುಡೇ ಈ ಸುದ್ದಿ ಸತ್ಯಾಸತ್ಯ ಪರಿಶೀಲನೆಗೆ ಮುಂದಾದಾಗ ಇದೊಂದು ಸುಳ್ಳು ಸುದ್ದಿ ಎಂಬುದು ಖಚಿತವಾಗಿದೆ. ವಾಸ್ತವವಾಗಿ ವೈರಲ್‌ ಆಗಿರುವ ಚಿತ್ರ ಕರ್ತಾರ್‌ಪುರ ಕಾರಿಡಾರ್‌ನದ್ದಲ್ಲ ಪಾಕಿಸ್ತಾನ ವಲಸೆ ಕೇಂದ್ರದ್ದು. ಪಾಕಿಸ್ತಾನಿ ವೆಬ್‌ಸೈಟ್‌ ‘ದ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌’ನಲ್ಲಿ ಈ ಕುರಿತ ಲೇಖನವೊಂದು ಲಭ್ಯವಾಗಿದ್ದು, ಅದರಲ್ಲಿ ವೈರಲ್‌ ಆಗಿರುವ ಫೋಟೋ ಇದೆ.

ಅದರಲ್ಲಿ ಪಾಕಿಸ್ತಾನದ ವಲಸೆ ಕೇಂದ್ರದ ಮೇಲೆ ಇದೇ ರೀತಿ ಪಾಕ್‌ ಧ್ವಜದ ಚಿತ್ರ ಬಿಡಿಸಲಾಗಿದೆ. ಅಲ್ಲದೆ ಇತ್ತೀಚೆಗೆ ಇಮ್ರಾನ್‌ ಖಾನ್‌ ಕರ್ತಾರ್‌ಪುರದ ಚಿತ್ರವನ್ನು ಟ್ವೀಟ್‌ ಮಾಡಿದ್ದರು. ಅವರು ಟ್ವೀಟ್‌ ಮಾಡಿರುವ ಚಿತ್ರಕ್ಕೂ ವೈರಲ್‌ ಆಗಿರುವ ಚಿತ್ರಕ್ಕೂ ಹೋಲಿಕೆಯೇ ಇಲ್ಲ. ಹಾಗಾಗಿ ಇದು ಸುಳ್ಳು ಸುದ್ದಿ ಎಂಬು ಸ್ಪಷ್ಟ.

- ವೈರಲ್ ಚೆಕ್