ದೋತಿ ಮತ್ತು ಕುರ್ತಾ ಧರಿಸಿರುವ ತಾತ ಡ್ಯಾನ್ಸ್‌ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಇದನ್ನು ಪೋಸ್ಟ್‌ ಮಾಡಿ ಜಾರ್ಖಂಡ್‌ನ ಜೇಮ್‌ಶೆಡ್‌ಪುರದಿಂದ ಜಾರ್ಖಂಡ್‌ ಮುಖ್ಯಮಂತ್ರಿ ರಘುಬರ್‌ ದಾಸ್‌ ವಿರುದ್ಧ ಸ್ಪರ್ಧಿಸಿದ್ದ ಸ್ವತಂತ್ರ ಅಭ್ಯರ್ಥಿ ಸರ್ಯು ರಾಯ್‌ ಗೆದ್ದ ಖುಷಿಗೆ ಕುಣಿಯುತ್ತಿದ್ದಾರೆ ಎಂದು ಹೇಳಲಾಗಿದೆ.

ರಾಯ್‌ ಮೊದಲಿಗೆ ರಘುಬರ್‌ ದಾಸ್‌ ಅವರ ಸಂಪುಟದಲ್ಲಿ ಇದ್ದರು. ಆದರೆ ಪಕ್ಷದಿಂದ ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ದಾಸ್‌ ಸ್ಪರ್ಧಿಸಿದ್ದ ಕ್ಷೇತ್ರದಿಂದಲೇ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

Fact Check: ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆಗಿಳಿದ್ರಾ ಪೊಲೀಸರು?

ಫೇಸ್‌ಬುಕ್‌ ಬಳಕೆದಾರರಾದ ಮಹ್ತಬ್‌ ಹುಸೇನ್‌ ಮೊದಲಿಗೆ ಈ ವಿಡಿಯೋ ಅಪ್‌ಲೋಡ್‌ ಮಾಡಿದ್ದಾರೆ. ಆದರೆ ವಿಡಿಯೋದಲ್ಲಿರುವ ವ್ಯಕ್ತಿ ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ರಘುಬರ್‌ ದಾಸ್‌ ವಿರುದ್ಧ ಚುನಾವಣೆಗೆ ಸ್ಪರ್ಧಿಸಿದ್ದವರೇ ಎಂದು ಇಂಡಿಯಾ ಟುಡೇ ಪರಿಶೀಲಿಸಿದಾಗ, ವಿಡಿಯೋದಲ್ಲಿರುವ ವ್ಯಕ್ತಿ ಸರ್ಯು ರಾಯ್‌ ಅಲ್ಲ, ಇದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ.

 

ಅಲ್ಲದೆ ಈ ವಿಡಿಯೋ 3 ವರ್ಷ ಹಳೆಯದ್ದು. ಯುಟ್ಯೂಬ್‌ನಲ್ಲಿ 2017 ಜನವರಿ 18ರಂದು ಇದೇ ರೀತಿಯ ವಿಡಿಯೋ ಅಪ್‌ಲೋಡ್‌ ಆಗಿರುವುದು ಪತ್ತೆಯಾಗಿದೆ. ಅಲ್ಲಿಗೆ ಇದು ಜಾರ್ಖಂಡ್‌ನ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ್ದಲ್ಲ ಎಂಬುದು ಸ್ಪಷ್ಟ. ಜೊತೆಗೆ ಸರ್ಯು ರಾಯ್‌ ಕೂಡ ಈ ಬಗ್ಗೆ ಸ್ಪಷ್ಟೀಕರಣ ನೀಡಿ, ‘ವಿಡಿಯೋದಲ್ಲಿ ಡ್ಯಾನ್ಸ್‌ ಮಾಡುತ್ತಿರುವ ವ್ಯಕ್ತಿ ನಾನಲ್ಲ. ನನಗೆ ಡ್ಯಾನ್ಸ್‌ ಬರುವುದೇ ಇಲ್ಲ. ವಿಡಿಯೋದಲ್ಲಿರುವ ವ್ಯಕ್ತಿಯ ಹಾಸ್ಯ ಪ್ರವೃತ್ತಿ ನನಗೆ ತುಂಬಾ ಇಷ್ಟವಾಯಿತು’ ಎಂದು ಹೇಳಿದ್ದಾರೆ. ಆದರೆ ವಿಡಿಯೋದಲ್ಲಿರುವ ವ್ಯಕ್ತಿ ಯಾರು ಎಂಬುದು ತಿಳಿದುಬಂದಿಲ್ಲ.