ಸೊಳ್ಳೆಗಳಿಂದ ಡೆಂಘೀ, ಚಿಕನ್‌ ಗುನ್ಯದಂತಹ ಕಾಯಿಲೆಗಳು ಹರಡುತ್ತವೆ. ಇತ್ತೀಚಿನ ವರ್ಷಗಳಲ್ಲಿ ಈ ರೋಗ ತಗುಲಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚಿನ ವರದಿಯೊಂದರ ಪ್ರಕಾರ ಭಾರತದಲ್ಲಿ ಈ ವರ್ಷ ಅಕ್ಟೋಬರ್‌ ವರೆಗೆ 67,377 ಡೆಂಘೀ ಪ್ರಕರಣಗಳು ದಾಖಲಾಗಿದ್ದು, 48 ಜನರು ಸಾವನ್ನಪ್ಪಿದ್ದಾರೆಂದು ಹೇಳಲಾಗಿದೆ.

ಈ ಸಂದರ್ಭದಲ್ಲಿ ಡೆಂಘೀ ನಿಯಂತ್ರಣ ಹೇಗೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶವೊಂದು ಹರಿದಾಡುತ್ತಿದೆ. ಅದರಲ್ಲಿ ‘ಇತ್ತೀಚೆಗೆ ಡೆಂಘೀ ಕಾಯಿಲೆಯಿಂದ ಸಾವನ್ನಪ್ಪುವವರ ಸಂಖ್ಯೆ ಜಾಸ್ತಿಯಾಗಿದೆ. ಡೆಂಘೀಯಿಂದ ಪಾರಾಗಲು ಸುಲಭ ವಿಧಾನವೊಂದಿದೆ. ಮೊಣಕಾಲಿನಿಂದ ಪಾದದ ವರೆಗೆ ತೆಂಗಿನ ಎಣ್ಣೆಯನ್ನು ಹಚ್ಚುವುದರಿಂದ ಸೊಳ್ಳೆ ನಿಮ್ಮನ್ನು ಕಚ್ಚುವುದಿಲ್ಲ. ಸೊಳ್ಳೆ ನಿಮ್ಮ ಮೊಣಕಾಲಿನಿಂದ ಮೇಲಕ್ಕೆ ಹಾರುವುದಿಲ್ಲ. ಇದನ್ನು ಗಮನದಲ್ಲಿಸಿಕೊಂಡು ಇಂದಿನಿಂದಲೇ ಕೊಬ್ಬರಿ ಎಣ್ಣೆ ಹಚ್ಚಲು ಆರಂಭಿಸಿ’ ಎಂದು ಹೇಳಲಾಗಿದೆ.

 

ಆದರೆ ಹೀಗೆ ಮಾಡುವುದರಿಂದ ನಿಜಕ್ಕೂ ಡೆಂಘೀ ಹರಡುವುದಿಲ್ಲವೇ ಎಂದು ಪರಿಶೀಲಿಸಿದಾಗ ಇದು ಸುಳ್ಳು ಕೊಬ್ಬರಿ ಎಣ್ಣೆಗೆ ಡೆಂಘೀ ತಡೆಯುವ ಗುಣಗಳಿಲ್ಲ ಎನ್ನುವುದು ಸಾಬೀತಾಗಿದೆ. ಅಥವಾ ಸೊಳ್ಳೆ ಕಚ್ಚುವುದನ್ನು ತಡೆಯುವುತ್ತದೆ ಎಂಬುದೂ ಯಾವುದೇ ವೈಜ್ಞಾನಿಕ ಸಶೋಧನೆಗಳಲ್ಲಿ ಸಾಬೀತಾಗಿಲ್ಲ. ಹಾಗಾಗಿ ಇದು ಸಂಪೂರ್ಣ ಸುಳ್ಳು ಸುದ್ದಿ.