Asianet Suvarna News Asianet Suvarna News

ಪ್ರಖ್ಯಾತ ವಕೀಲ, ಬಾಬ್ರಿ ಮಸೀದಿ ಕ್ರಿಯಾ ಸಮಿತಿಯ ಜಫರ್ಯಾಬ್ ಜಿಲಾನಿ ನಿಧನ!

ಅಯೋಧ್ಯೆ ಪ್ರಕರಣದಲ್ಲಿ ಪ್ರಮುಖರಾಗಿದ್ದ ಹಾಗೂ ಬಾಬ್ರಿ ಮಸೀದಿ ಕ್ರಿಯಾ ಸಮಿತಿಯಲ್ಲಿದ್ದ ಎಐಎಂಪಿಎಲ್‌ಬಿ ಕಾರ್ಯದರ್ಶಿ ಹಾಗೂ ಪ್ರಖ್ಯಾತ ವಕೀಲ ಜಫರ್ಯಾಬ್ ಜಿಲಾನಿ ಬುಧವಾರ ನಿಧನರಾದರು.
 

Face of Babri Masjid Action Committee and Renowned Advocate Zafaryab Jilani Passes Away san
Author
First Published May 17, 2023, 6:40 PM IST | Last Updated May 17, 2023, 6:40 PM IST

ನವದೆಹಲಿ (ಮೇ. 17): ಖ್ಯಾತ ವಕೀಲ ಮತ್ತು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಕಾರ್ಯದರ್ಶಿ ಜಫರ್ಯಾಬ್ ಜಿಲಾನಿ ಬುಧವಾರ ಲಕ್ನೋದಲ್ಲಿ 73 ನೇ ವಯಸ್ಸಿನಲ್ಲಿ ನಿಧನರಾದರು. 73 ವರ್ಷದ ಜಿಲಾನಿ ಅವರು ಬಾಬರಿ ಮಸೀದಿ ಕ್ರಿಯಾ ಸಮಿತಿಯ ಸಂಚಾಲಕರಾಗಿದ್ದರು ಮತ್ತು ಅಯೋಧ್ಯೆ ಪ್ರಕರಣದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು. 2021ರಲ್ಲಿ ಬ್ರೈನ್‌ಸ್ಟ್ರೋಕ್‌ಗೆ ಒಳಗಾಗಿದ್ದ ಇವರು ಕಳೆದ ಎರಡು ವರ್ಷದಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು. ಬುಧವಾರ ಲಕ್ನೋದ ನಿಶಾತ್‌ಗಂಜ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಅವರ ಕುಟುಂಬ ತಿಳಿಸಿದೆ.

ಫೆಬ್ರವರಿ 1986 ರಲ್ಲಿ, ಬಾಬ್ರಿ ಮಸೀದಿಯ ಬೀಗಗಳನ್ನು ತೆರೆಯಲು ಫೈಜಾಬಾದ್ ಜಿಲ್ಲಾ ನ್ಯಾಯಾಧೀಶರ ಆದೇಶದ ನಂತರ, ದೇಗುಲವನ್ನು ಬೆಂಬಲಿಸುವ ಅಭಿಯಾನವನ್ನು ಪ್ರಾರಂಭಿಸಲು ಮತ್ತು ಹಿಂದುತ್ವದ ಅಲೆಯನ್ನು ಹೆಚ್ಚಿಸುವ ಉದ್ದೇಶದಿಂದ ಬಾಬರಿ ಮಸೀದಿ ಕ್ರಿಯಾ ಸಮಿತಿಯನ್ನು ರಚಿಸಲಾಯಿತು. ಜಿಲಾನಿ ಸಮಿತಿಯ ಸಂಚಾಲಕರಾದರು.

ಅಂದಿನಿಂದ, ಜಿಲಾನಿಯವರ ಜೀವನವು ಸಂಪೂರ್ಣವಾಗಿ ಬಾಬರಿ ಮಸೀದಿಯ ಉದ್ದೇಶಕ್ಕಾಗಿ ಸಮರ್ಪಿತವಾಗಿತ್ತು.ಕಲ್ಯಾಣ್‌ ಸಿಂಗ್‌ ನೇತೃತ್ವದ ಬಿಜೆಪಿ ಸರ್ಕಾರ ಹಾಗೂ ಕೇಂದ್ರದ ಕಾಂಗ್ರೆಸ್‌ ಸರ್ಕಾರದ ಸಂಶಯಾಸ್ಪದ ಮೌನದ ಆರೋಪದ ನಡುವೆ  1992 ರ ಡಿಸೆಂಬರ್ 6 ರಂದು ಬಾಬ್ರಿ ಮಸೀದಿಯನ್ನು ಕೆಡವಿ ಹಾಕಲಾಯಿತು. ಇದಾದ ಬಳಿಕ ಜಿಲಾನಿ ಅವರ ಪಾತ್ರ ಕೂಡ ಬದಲಾಯಿತು. ಬಾಬ್ರಿ ಮಸೀದಿ ಧ್ವಂಸಕ್ಕೂ ಮುನ್ನ ಕಾರ್ಯಕರ್ತರಾಗಿ ಮಾತ್ರವೇ ಗುರುತಿಸಿಕೊಂಡಿದ್ದ ಜಿಲಾನಿ ಆ ಬಳಿಕ ಹೆಚ್ಚಾಗಿ ವಿವಿಧ ಕೋರ್ಟ್‌ಗಳಲ್ಲಿ ಬಾಬ್ರಿ ಮಸೀದಿ ಕುರಿತಾಗಿ ವಾದವನ್ನು ಮಂಡಿಸಿದ್ದರು.

2019 ರಲ್ಲಿ, ಭೂ ವಿವಾದದ ಪ್ರಕರಣವನ್ನು ಸುಪ್ರೀಂ ಕೋರ್ಟ್ ಅಂತಿಮವಾಗಿ ಇತ್ಯರ್ಥಪಡಿಸಿದಾಗ, ಜಿಲಾನಿ ಅವರು ಪ್ರಕರಣಕ್ಕೆ ಇಷ್ಟು ಸಮಯವನ್ನು ಮೀಸಲಿಟ್ಟಿದ್ದಕ್ಕಾಗಿ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಹೇಳಿದ್ದರು. ಇಡೀ ಪ್ರಕರಣದಲ್ಲಿ ಜಿಲಾನಿಗೆ ದೊಡ್ಡ ಮಟ್ಟದ ಹೆಸರು ಹಾಗೂ ಪ್ರಖ್ಯಾತಿ ತಂದುಕೊಡಲು ಲಾಭದಾಯಕವಾಗಿದ್ದರೂ, ಅವರಿಗೆ ಇದರಿಂದ ಹಣಕಾಸು ವಿಚಾರದಲ್ಲಿ ಯಾವುದೇ ಲಾಭವಾಗಿರಲಿಲ್ಲ.

ರಾಮ ಮಂದಿರ ಸ್ಫೋಟಿಸಿ ಬಾಬ್ರಿ ಮಸೀದಿ ಕಟ್ಟಲು ಸಂಚು, ನಿಷೇಧಿತ PFI ಸಂಘಟನೆ ಸದಸ್ಯರ ಬಂಧನ!

ಬಾಬ್ರಿ ಮಸೀದಿ ವಿಚಾರದಲ್ಲಿ ದೇಶಾದ್ಯಂತ ವಿವಿಧ ನ್ಯಾಯಾಲಯದಲ್ಲಿ ದಾಖಲಾದ ಹಲವು ಕೇಸ್‌ಗಳಲ್ಲಿ ಹೋರಾಟ ನಡೆಸಿದ್ದ ಜಿಲಾನಿ, ಉತ್ತರ ಪ್ರದೇಶದ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಕೂಡ ಆಗಿದ್ದರು. ಬುಧವಾರ ಸಂಜೆ ಲಕ್ನೋದ ಐಶ್‌ ಬಾಗ್‌ ಖಬರ್‌ಸ್ತಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಜಿಲಾನಿ ಅವರ ಮಗ ನಜಮ್‌ ಜಫರ್ಯಾಬ್‌ ತಿಳಿಸಿದ್ದಾರೆ. ಜಿಲಾನಿಯವರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಬಾಬ್ರಿ ಧ್ವಂಸ: ಅಡ್ವಾಣಿ ಸೇರಿ 32 ಜನರ ಖುಲಾಸೆ ಪ್ರಶ್ನಿಸಿ ಸುಪ್ರೀಂಗೆ ಮನವಿ

Latest Videos
Follow Us:
Download App:
  • android
  • ios