ಮೋದಿ ಕಾರ್ಯಕ್ರಮ ನಡೆಯೋ 12 ಕಿ. ಮೀ ದೂರದ ಮೈದಾನದಲ್ಲಿ ಸ್ಫೋಟ!
* ಪ್ರಧಾನಿ ನರೇಂದ್ರ ಮೋದಿಯವರ ಜಮ್ಮು-ಕಾಶ್ಮೀರ ಭೇಟಿಗೂ ಮುನ್ನವೇ ಶಾಕಿಂಗ್ ಸುದ್ದಿ
* ಇನ್ನು ಕೆಲವೇ ಗಂಟೆಗಳಲ್ಲಿ, ಪ್ರಧಾನಿ ಮೋದಿಯವರ ರ್ಯಾಲಿ
* ಪ್ಯಾರಿಷ್ ಗ್ರಾಮದಿಂದ ಕೇವಲ 12 ಕಿಮೀ ದೂರದಲ್ಲಿರುವ ಮೈದಾನದಲ್ಲಿ ಸ್ಫೋಟ
ಶ್ರೀನಗರ(ಏ.24): ಪ್ರಧಾನಿ ನರೇಂದ್ರ ಮೋದಿಯವರ ಜಮ್ಮು-ಕಾಶ್ಮೀರ ಭೇಟಿಗೂ ಮುನ್ನವೇ ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಇನ್ನು ಕೆಲವೇ ಗಂಟೆಗಳಲ್ಲಿ, ಪ್ರಧಾನಿ ಮೋದಿಯವರ ರ್ಯಾಲಿ ನಡೆಯಲಿರುವ ಪ್ಯಾರಿಷ್ ಗ್ರಾಮದಿಂದ ಕೇವಲ 12 ಕಿಮೀ ದೂರದಲ್ಲಿರುವ ಮೈದಾನದಲ್ಲಿ ಸ್ಫೋಟ ಸಂಭವಿಸಿದೆ. ಈ ಸುದ್ದಿಯ ನಂತರ ಭದ್ರತಾ ಸಂಸ್ಥೆಗಳು ಅಲರ್ಟ್ ಆಗಿವೆ. ಈ ಶಂಕಿತ ಸ್ಫೋಟ ಬಿಷ್ನಾಹ್‌ನ ಲಾಲಿಯಾನ ಗ್ರಾಮದಲ್ಲಿ ನಡೆದಿದೆಎಂದು ಹೇಳಲಾಗುತ್ತಿದೆ. ಇದಾದ ಬಳಿಕ ಸಾಂಬದ ಪಲ್ಲಿ ಗ್ರಾಮದಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮ ನಡೆಯಲಿರುವ ಸ್ಥಳಕ್ಕೆ ಭದ್ರತೆ ಹೆಚ್ಚಿಸಲಾಗಿದೆ. ರ್ಯಾಲಿ ನಡೆಯುವ ಸ್ಥಳವನ್ನು ಕೂಲಂಕುಷವಾಗಿ ಪರಿಶೀಲಿಸಲಾಗುತ್ತಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿಯೊಬ್ಬರು "ಇದು ಭಯೋತ್ಪಾದನೆಗೆ ಸಂಬಂಧಿಸಿದೆ ಎಂದು ತೋರುತ್ತಿಲ್ಲ. ವಿವರಗಳನ್ನು ಕಂಡುಹಿಡಿಯಲಾಗುತ್ತಿದೆ” ಎಂದು ಹೇಳಿದ್ದಾರೆ.
ವಿವಿಧ ಕಾರ್ಯಕ್ರಮ:
ರಾಷ್ಟ್ರೀಯ ಪಂಚಾಯಿತಿ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಸಾಂಬಾ ಜಿಲ್ಲೆಯ ಪಾಲ್ಲಿ ಪಂಚಾಯತಿ ವ್ಯಾಪ್ತಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ದೇಶಾದ್ಯಂತ ಇರುವ ಪಂಚಾಯಿತಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ 1 ಲಕ್ಷ ಜನರು ಭಾಗಿಯಾಗುವ ನಿರೀಕ್ಷೆ ಇದೆ. 2019ರ ಅಗಸ್ಟ್‌ನಲ್ಲಿ ಜಮ್ಮು ಹಾಗೂ ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆದ ನಂತರ ಮೊದಲನೇ ಬಾರಿ ಮೋದಿ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ.
20000 ಕೋಟಿ ಕಾಮಗಾರಿಗೆ ಶಂಕು, ಚಾಲನೆ
ಜಮ್ಮವಿನಲ್ಲಿ ಪ್ರಧಾನಿ ಮೋದಿ ಭಾನುವಾರ 20,000 ಕೋಟಿ ರು. ಮೊತ್ತದ ಅಭಿವೃದ್ಧಿ ಕಾಮಗಾರಿಯ ಶಂಕು ಸ್ಥಾಪನೆ ನೆರವೇರಿಸಲಿದ್ದು, ಕೆಲವು ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಇದರಲ್ಲಿ ಜಮ್ಮು ಹಾಗೂ ಕಾಶ್ಮೀರದ ನಡುವೆ ಎಲ್ಲ ಹವಾಮಾನದಲ್ಲೂ ಸಂಪರ್ಕ ಕಲ್ಪಿಸುವಂತಹ 3100 ಕೋಟಿ ವೆಚ್ಚದ 8.45 ಕಿಮೀ ಉದ್ದದ ಬನಿಹಾಲ್-ಖ್ವಾಜಿಗುಂಡ್ ರಸ್ತೆ ಸುರಂಗ ಮಾರ್ಗದ ಉದ್ಘಾಟನೆ ಮಾಡಲಿದ್ದಾರೆ. ಇದಲ್ಲದೇ ದೆಹಲಿ-ಅಮೃತಸರ್-ಕರ್ತಾ ಎಕ್ಸ್‌ಪ್ರೆಸ್ ವೇ, ರಾಟ್ಲೇ ಹಾಗೂ ಕ್ವಾರ್ ಹೈಡ್ರೋಎಲೆಕ್ಟ್ರಿಕ್ ಯೋಜನೆಯ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಜಮ್ಮು ಕಾಶ್ಮೀರದಲ್ಲಿ 100 ಜನೌಷಧಿ ಕೇಂದ್ರಗಳನ್ನು ಉದ್ಘಾಟಿಸಲಿದ್ದಾರೆ. æ ಪಾಲ್ಲಿಯಲ್ಲಿ 500 ಕಿಲೋವ್ಯಾಟ್ ಸೌರಶಕ್ತಿ ಘಟಕ ಉದ್ಘಾಟನೆ ಮಾಡಲಿದ್ದಾರೆ. ಈ ಮೂಲಕ ಪಾಲ್ಲಿ ದೇಶದಲ್ಲೇ ಮೊದಲ ಕಾರ್ಬನ್ ತಟಸ್ಥ ಪಂಚಾಯಿತಿ ಎನಿಸಲಿದೆ. ಇದಲ್ಲದೇ ಜಮ್ಮು ಕಾಶ್ಮೀರದ ನಾಗರಿಕರಿಗೆ ಸ್ವಾಮಿತ್ವ ಕಾರ್ಡ್‌ನ್ನು ಮೋದಿ ಹಸ್ತಾಂತರ ಮಾಡಲಿದ್ದಾರೆ.
ಶಿವಮೊಗ್ಗದಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮ
ಈ ಮೊದಲು ಪಂಚಾಯತ್ ರಾಜ್ ದಿವಸ ಕಾರ್ಯಕ್ರಮಕ್ಕೆ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಹೊಳಲೂರು ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಮೋದಿ ಸ್ವಾಗತಕ್ಕೆ ಸಿದ್ಧತೆಯನ್ನು ನಡೆಸಲಾಗಿತ್ತು. ಆದರೆ ಹಂತಿಮದಲ್ಲಿ ಕಾರ್ಯಕ್ರಮದ ಸ್ಥಳ ಬದಲಾಯಿಸಲಾಗಿತ್ತು.