ಪಿಎಂಸಿ ಮಾಜಿ ಎಂಡಿ ಥಾಮಸ್‌ ಕರ್ಮಕಾಂಡ ಬಯಲು | ಎರಡನೇ ಮದುವೆಗಾಗಿ ಜುನೈದ್‌ ಖಾನ್‌ ಆಗಿದ್ದ ಥಾಮಸ್‌ ಎರಡನೇ ಪತ್ನಿ ಹೆಸರಲ್ಲಿ ಪುಣೆಯಲ್ಲಿ 9 ಫ್ಲ್ಯಾಟ್‌ |  ವಿಚಾರಣೆಯಿಂದ ಬಯಲಾಯ್ತು ಜಾಯ್‌ ಕರ್ಮಕಾಂಡ

ಮುಂಬೈ (ಅ. 15): ಬಹುಕೋಟಿ ಪಂಜಾಬ್‌ ಹಾಗೂ ಮಹಾರಾಷ್ಟ್ರ ಸಹಕಾರಿ ಬ್ಯಾಂಕ್‌ ಹಗರಣ ಸಂಬಂಧ ಅಮಾನತಾಗಿರುವ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಜಾಯ್‌ ಥಾಮಸ್‌, ತನ್ನ ಆಪ್ತ ಸಹಾಯಕಿಯನ್ನು ವಿವಾಹವಾಗಲು ಇಸ್ಲಾಂಗೆ ಮತಾಂತರಗೊಂಡಿದ್ದ ಎಂಬ ಮಾಹಿತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಪಂಜಾಬ್- ಮಹಾರಾಷ್ಟ್ರ ಸಹಕಾರ ಬ್ಯಾಂಕ್ ತಾತ್ಕಾಲಿಕ ಬಂದ್; ಮುಂದೇನು?

ಬ್ಯಾಂಕ್‌ ಲೂಟಿ ಸಂಬಂಧ ಮುಂಬೈ ಪೊಲೀಸ್‌ ಆರ್ಥಿಕ ಅಪರಾಧ ದಳದ ವಶದಲ್ಲಿರುವ 62 ವರ್ಷದ ಜಾಯ್‌, ತಾನು 2005ರಲ್ಲಿ ಎರಡನೇ ಮದುವೆಯಾಗಿದ್ದಾಗಿ ಹೇಳಿಕೊಂಡಿದ್ದಾನೆ. ಅಲ್ಲದೇ ಪುಣೆಯಲ್ಲಿ ಆಕೆಯ ಹೆಸರಲ್ಲಿ 9 ಫ್ಲ್ಯಾಟ್‌ಗಳಿರುವುದು ತಿಳಿದು ಬಂದಿದೆ.

ವಿಚಾರಣೆ ವೇಳೆ ತನ್ನ ಎರಡನೇ ಮದುವೆ ಬಗ್ಗೆ ಬಾಯಿ ಬಿಟ್ಟಿರುವ ಥಾಮಸ್‌, ತನ್ನ ಆಪ್ತ ಸಹಾಕಿಯೊಂದಿಗೆ ಸಂಬಂಧ ಬೆಳೆಸಿ ಮದುವೆಯಾಗಿದ್ದಾನೆ. ಅದಕ್ಕಾಗಿ ತನ್ನ ಹೆಸರನ್ನು ಜುನೈದ್‌ ಖಾನ್‌ ಎಂದು ಬದಲಿಸಿಕೊಂಡಿದ್ದ. ತಾನು ದುಬೈಗೆ ಹೋಗುವುದಾಗಿ ಮಹಿಳೆ ಕೆಲಸ ತೊರೆದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲಸಕ್ಕೆ ರಾಜೀನಾಮೆ ನೀಡಿದ ಬಳಿಕ ಪುಣೆಯಲ್ಲಿ ನೆಲೆಸಿದ್ದ ಆಕೆಯನ್ನು ಮದುವೆಯಾದ ಜಾಯ್‌, ಅಲ್ಲಿಯೇ ಆಕೆಯ ಹೆಸೆರಲ್ಲಿ ಆಸ್ತಿ ಖರೀದಿ ಮಾಡಿದ್ದಾನೆ. ಆದರೆ ಅಧೀಕೃತ ದಾಖಲೆಗಳಲ್ಲಿ ಎಲ್ಲಿಯೂ ತನ್ನ ಮುಸ್ಲಿಂ ಹೆಸರನ್ನು ಜಾಯ್‌ ಹೇಳಿಕೊಂಡಿರಲಿಲ್ಲ. ಎರಡನೇ ಪತ್ನಿ ದತ್ತು ಪಡೆದುಕೊಂಡ ಹೆಣ್ಣು ಮಗುವಿಗೆ ಈಗ 11 ವಯಸ್ಸಾಗಿದ್ದು, 10 ವರ್ಷದ ಮಗ ಕೂಡ ಇದ್ದಾನೆ. ಎರಡನೇ ಪತ್ನಿ ಚಾಕಲೇಟ್‌, ಹೂಗುಚ್ಛ ಮಾರಿ ಆದಾಯ ಗಳಿಸುವುದರ ಜತೆಗೆ ಫ್ಲಾಟ್‌ ಬಾಡಿಗೆಯಿಂದ ಬರುವ ಬಾಡಿಗೆ ಕೂಡ ಆಕೆಯ ಖಾತೆಗೆ ಜಮೆಯಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಲ್ಲದೇ ಥಾಮಸ್‌ ಎರಡನೇ ಮದುವೆ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಮೊದಲನೇ ಪತ್ನಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.