ಚೆನ್ನೈ(ಏ.11): ದೇಶದಲ್ಲಿ ಕೊರೋನಾ ಸೋಂಕು ದಿನೇ ದಿನೇ ಹೆಚ್ಚುತ್ತಲೇ ಇದೆ. ಮೊದಲ ಅಲೆಗಿಂತ ಎರಡನೇ ಅಲೆ ವೇಗವಾಗಿ ಹಬ್ಬುತ್ತಿದ್ದು, ಇಡೀ ದೇಶವನ್ನೇ ಮತ್ತೆ ಆತಂಕಕ್ಕೀಡು ಮಾಡಿದೆ. ಈಗಾಗಲೇ ಅನೇಕ ರಾಜ್ಯಗಳು ಕೊರೋನಾ ಸೋಂಕು ಹೆಚ್ಚುತ್ತಿರುವ ಪ್ರದೇಶಗಳಲ್ಲಿ ಲಾಕ್‌ಡೌನ್, ನೈಟ್‌ ಕರ್ಫ್ಯೂನಂತಹ ನಿರ್ಬಂಧ ಹೇರಿದೆ. ಹೀಗಿದ್ದರೂ ಈ ಮಹಾಮಾರಿ ನಿಯಂತ್ರಿಸಲು ಸರ್ಕಾರಗಳು ಹರಸಾಹಸ ಪಡುತ್ತಿವೆ. ಸದ್ಯ ಕರ್ನಾಟಕ ಸಿಂಗಂ ಖ್ಯಾತಿಯ ಮಾಜಿ ಐಪಿಎಸ್‌ ಆಫೀಸರ್ ಅಣ್ಣಾಮಲೈಗೆ ಈ ಕೊರೋನಾ ಸೋಂಕು ತಗುಲಿದೆ.

ಹೌದು ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಸಿಂಗಂ ಅಣ್ಣಾಮಲೈ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ವಿಷಯವನ್ನು ಸ್ವತಃ  ಅಣ್ಣಾಮಲೈ ಟ್ವೀಟ್ ಮೂಲಕ ತಿಳಿಸಿದ್ದಾರೆ. ತನಗೆ ಕೋವಿಡ್​ ಪಾಸಿಟಿವ್ ಬಂದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ.    

ಕೊರೋನಾ ಸೋಂಕು ತಗುಲಿರುವ ಅಣ್ಣಾಮಲೈ ಅವರನ್ನು ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ತನ್ನ ಸಂಪರ್ಕಕ್ಕೆ ಬಂದವರು ಕೂಡಲೇ ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಅಣ್ಣಾಮಲೈ ಅವರು ಮನವಿ ಮಾಡಿಕೊಂಡಿದ್ದಾರೆ.

 ಅಣ್ಣಾಮಲೈ ತಮಿಳುನಾಡಿನ ರಾಜಕೀಯಕ್ಕೆ ಧುಮುಕಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಣ್ಣಾಮಲೈ ಅವರು ಕೆಲ ದಿನಗಳ ಹಿಂದೆ, ಸ್ಥಳೀಯ ಎಐಎಡಿಎಂಕೆ ನಾಯಕರೊಂದಿಗೆ ತಮ್ಮ ಚುನಾವಣಾ ಕ್ಷೇತ್ರದ ಪ್ರತಿಯೊಂದು ಮನೆಗೂ ಭೇಟಿ ನೀಡಿ ಪ್ರಚಾರ ನಡೆಸಿದ್ದರು. ಜೊತೆಗೆ ಅನೇಕ ಸಭೆಗಳಲ್ಲಿ ಭಾಗಿಯಾಗಿ, ಸಾವಿರಾರು ಜನರನ್ನು ಭೇಟಿಯಾಗಿದ್ದರು. ಈಗ ಅಣ್ಣಾಮಲೈ ಅವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಇದರ ಜೊತೆಗೆ ಅವರ ಸಂಪರ್ಕಕ್ಕೆ ಬಂದಿದ್ದವರಲ್ಲಿ ಆತಂಕ ಮನೆಮಾಡಿದೆ.