ನವದೆಹಲಿ[ಡಿ.30]: ಕ್ಯಾಮೆರಾ ಆ್ಯಂಡ್ ಆ್ಯಕ್ಷನ್ ಎಂಬ ಜಗತ್ತು. ಮೇಕಪ್ ಹಾಗೂ ಫ್ಯಾಷನ್ ಜಗತ್ತು. ಇವೆರಡೂ ಕ್ಷೇತ್ರಗಳ ನಡುವೆ ಅಜಗಜಾಂತರ ವ್ಯತ್ಯಾಸ, ಪರಸ್ಪರ ವಿಭಿನ್ನ ಕ್ಷೇತ್ರಗಳು. ಆದರೆ 47 ವರ್ಷದ ನಿತಿನ್ ಮೆಹ್ತಾ ಈ ಎರಡೂ ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದಾರೆ. ಇಷ್ಟೇ ಅಲ್ಲದೇ ಮಾಡೆಲಿಂಗ್ ವಯಸ್ಸಾದವರಿಗೆ ಹೇಳಿ ಮಾಡಿದ ಕ್ಷೇತ್ರವಲ್ಲ ಎಂಬ ಯೋಚನೆ ಇಟ್ಟುಕೊಂಡವರಿಗೂ ಅಚ್ಚರಿಗೀಡು ಮಾಡಿದ್ದಾರೆ.

ನೀವು ಸೂಪರ್ ಮಾಡೆಲ್ಸ್ ನ್ನು ಗಮನಿಸಿರಬಹುದು. ರ್ಯಾಂಪ್ ಮೇಲೆ ಝಗಮಗಿಸುವ ಬೆಳಕಿನ ನಡುವೆ ಬೆಲೆ ಬಾಳುವ ಬಟ್ಟೆ ಧರಿಸಿ ಕ್ಯಾಟ್ ವಾಕ್. ಹುಡುಗನಾಗಲೀ ಅಥವಾ ಹುಡುಗಿಯಾಗಲಿ ಆದರೆ ಮಾಡೆಲ್ ಗಳ ವಯಸ್ಸು ಕಡಿಮೆಯೇ ಇರುತ್ತದೆ. ಕಟ್ಟುಮಸ್ತಾದ ಶರೀರವುಳ್ಳ ಯುವಕ, ಯುವತಿಯರೇ ಇಲ್ಲಿ ಸ್ಟಾರ್ ಗಳಾಗುತ್ತಾರೆ. ಆದರೆ ಇತರ ಮಾಡೆಲ್ ಗಳು ಹಣ ಸಂಪಾದಿಸಲು ಮಾಡೆಲಿಂಗ್ ಬಿಟ್ಟು ಬೇರೆ ಕ್ಷೇತ್ರದತ್ತ ಮುಖ ಮಾಡುವ ವಯಸ್ಸಲ್ಲಿ, ನಿತಿನ್ ಮೆಹ್ತಾ ತಮ್ಮ ಮಾಡೆಲಿಂಗ್ ವೃತ್ತಿ ಆರಂಭಿಸಿದ್ದರು. 

ನಿತಿನ್ ಮೆಹ್ತಾ ಇನ್ಸ್ಟಾಗ್ರಾಂನಲ್ಲಿ ಬಹಳ ಆ್ಯಕ್ಟಿವ್. ಇವರು ತಮ್ಮ ಖಾತೆಯಲ್ಲಿರುವ ಬಯೋದಲ್ಲಿ ತಾವೊಬ್ಬ ಮಾಜಿ ಸೈನ್ಯಾಧಿಕಾರಿ, ನಟ, ಮಾಡೆಲ್ ಹಾಗೂ ಬೈಕರ್ ಎಂದು ಬರೆದಿದ್ದಾರೆ.

ಕಳೆದ 3 ವರ್ಷದಿಂದ ಮಾಡೆಲಿಂಗ್

ನಿತಿನ್ ಮೆಹ್ತಾ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ ಒಂದರಲ್ಲಿ '21 ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಬಳಿಕ 2016ರ ಮೇ 20 ರಂದು ನಾನು ನಿವೃತ್ತಿ ಪಡೆದೆ. ಬಳಿಕ ನಾನು ವಿಭಿನ್ನ ಕ್ಷೇತ್ರ ಆರಿಸಿಕೊಂಡೆ. ಕಳೆದ 3 ವರ್ಷಗಳಿಂದ ನನ್ನ ಕುಟುಂಬ ಹಾಗೂ ಮಿತ್ರರು ಹೇಳಿದಂತೆ ಹೊಸ ಜೀವನ ಆರಂಭಿಸಿದ್ದೇನೆ. ಈ ಮೂರು ವರ್ಷಗಳಲ್ಲಿ ನನ್ನನ್ನು ಮುನ್ನಡೆಸಿದವರಿಗೆ ನನ್ನ ಧನ್ಯವಾದ' ಎಂದಿದ್ದಾರೆ.

ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್

ಸೇನೆಯಲ್ಲಿ ಸೇವೆ ಸಲ್ಲಿಸುವಾಗ ನಿತಿನ್ ಮೆಹ್ತಾ ಕ್ಲೀನ್ ಶೇವ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಮಾಡೆಲಿಂಗ್ ಕ್ಷೇತ್ರಕ್ಕಾಗಿ ಅವರು ಬಹಳಷ್ಟು ತಯಾರಿ ನಡೆಸಿದರು. ತಮ್ಮ ಲುಕ್ ಬದಲಾಯಿಸುವುದಷ್ಟೇ ಅಲ್ಲದೇ, ಫ್ಯಾಷನ್ ಜಗತ್ತಿನ್ನು ಅರಿತುಕೊಂಡರು. ಗಡ್ಡ ಬೆಳೆಸಿಕೊಂಡ ಅವರು ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್ ತಮ್ಮದಾಗಿಸಿಕೊಂಡರು.

ದೀಪಿಕಾ ಪಡುಕೋಣೆ ಜೊತೆ ನಟನೆ

ನಿತಿನ್ ಮೆಹ್ತಾ ಹಲವಾರು ದುಬಾರಿ ಹಾಗೂ ಲಕ್ಸುರಿ ಬ್ರ್ಯಾಂಡ್ ಗೆ ಮಾಡೆಲಿಂಗ್ ಮಾಡಿದ್ದಾರೆ. ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆಯೊಂದಿಗೆ 'ತನಿಷ್ಕ್ ಜ್ಯುವೆಲ್ಲರಿ' ಜಾಹೀರಾತಿನಲ್ಲೂ ಅವರು ಕಾಣಿಸಿಕೊಂಡಿದ್ದಾರೆ.

ಫಿಟ್ನೆಸ್ ಗಾಗಿ ವ್ಯಾಯಾಮ

ತಮ್ಮನ್ನು ತಾವು ಫಿಟ್ ಆಗಿಟ್ಟುಕೊಳ್ಳಲು ನಿತಿನ್ ಮೆಹ್ತಾ ಬಹಳಷ್ಟು ವ್ಯಾಯಾಮ ಮಾಡುತ್ತಾರೆ. ತಾವು ವ್ಯಾಯಾಮ ಮಾಡುವ ಕೆಲ ಫೋಟೋಗಳನ್ನು ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲೂ ಶೇರ್ ಮಾಡಿಕೊಂಡಿದ್ದಾರೆ.

ನಿತಿನ್ ಮೆಹ್ತಾಗೆ ಬೈಕ್ ಕ್ರೇಜ್ ಕೂಡಾ ಇದೆ. ಈ ವಿಚಾರ ಅವರು ಶೇರ್ ಮಾಡಿಕೊಂಡಿರುವ ಫೋಟೋಗಳಲ್ಲಿ ತಿಳಿದು ಬಂದಿದೆ.