ಅಕ್ಬರ್, ಬಾಬರ್ ರಸ್ತೆ ಹೆಸರು ಬದಲಿಗೆ ಬಿಜೆಪಿ ಪಟ್ಟು
* ಅಕ್ಬರ್, ಹುಮಾಯೂನ್ ರಸ್ತೆ ಹೆಸರು ಬದಲಿಗೆ ಬಿಜೆಪಿ ಪಟ್ಟು
* ಇವು ಮುಸ್ಲಿಂ ಗುಲಾಮಗಿರಿ ಸಂಕೇತ: ಪಕ್ಷದ ಆರೋಪ
* ಪರ್ಯಾಯ ಹೆಸರುಗಳನ್ನು ಸೂಚಿಸಿದ ಬಿಜೆಪಿ ರಾಜ್ಯಾಧ್ಯಕ್ಷ
* ದಿಲ್ಲಿ ಬಿಜೆಪಿ ಮುಖ್ಯಸ್ಥನಿಂದ ಮಹಾನಗರ ಪಾಲಿಕೆಗೆ ಪತ್ರ
ನವದೆಹಲಿ(ಮೇ.11): ಉತ್ತರ ಪ್ರದೇಶ ಸರ್ಕಾರದಂತೇ ದೆಹಲಿ ಬಿಜೆಪಿ ಘಟಕವು ಇಲ್ಲಿನ ಪ್ರಮುಖ ರಸ್ತೆಗಳಾದ ತುಘಲಕ್ ರಸ್ತೆ, ಅಕ್ಬರ್ ರಸ್ತೆ, ಔರಂಗಜೇಬ್ ರಸ್ತೆ, ಹುಮಾಯೂನ್ ರಸ್ತೆ ಹಾಗೂ ಶಹಜಹಾನ್ ರಸ್ತೆಯ ಹೆಸರನ್ನು ಬದಲಾಯಿಸುವಂತೆ ಆಗ್ರಹಿಸಿದೆ. ಈ ಬಗ್ಗೆ ದೆಹಲಿ ಬಿಜೆಪಿ ಅಧ್ಯಸ್ಥ ಆದೇಶ್ ಗುಪ್ತಾ ನವದೆಹಲಿ ಮಹಾನಗರ ಪಾಲಿಕೆಗೆ ಪತ್ರ ಬರೆದಿದ್ದಾರೆ.
ದೆಹಲಿಯ ಪ್ರಮುಖ ರಸ್ತೆಗಳು ಮುಸ್ಲಿಮರ ಗುಲಾಮಗಿರಿಯ ಸಂಕೇತವಾಗಿದೆ ಹೀಗಾಗಿ ತುಘಲಕ್ ರಸ್ತೆಯ ಹೆಸರನ್ನು ಗುರುಗೋವಿಂದ್ ಸಿಂಗ್ ಮಾರ್ಗ, ಅಕ್ಬರ್ ರಸ್ತೆಯನ್ನು ಮಹಾರಾಣಾ ಪ್ರತಾಪ ರಸ್ತೆ, ಔರಂಗಜೇಬ್ ರಸ್ತೆಯನ್ನು ಅಬ್ದುಲ್ ಕಲಾಂ ಮಾರ್ಗ, ಹುಮಾಯೂನ್ ರಸ್ತೆಯನ್ನು ಮಹರ್ಷಿ ವಾಲ್ಮೀಕಿ ರಸ್ತೆ, ಶಹಜಹಾನ್ ರಸ್ತೆ ಹೆಸರನ್ನು ಜನರಲ್ ಬಿಪಿನ್ ರಾವತ್ ಮಾರ್ಗ, ಬಾಬರ್ ಗಲ್ಲಿಯನ್ನು ಸ್ವಾತಂತ್ರ್ಯ ಯೋಧ ಖುದಿರಾಂ ಬೋಸ್ ಗಲ್ಲಿ ಎಂದು ಮರುನಾಮಕರಣ ಮಾಡಬೇಕು ಎಂದು ಗುಪ್ತಾ ಸಲಹೆ ನೀಡಿದ್ದಾರೆ. ಅಕ್ಬರ್ ರಸ್ತೆಯಲ್ಲೇ ಕಾಂಗ್ರೆಸ್ ಮುಖ್ಯ ಕಚೇರಿ ಕೂಡಾ ಇದೆ.
ನವದೆಹಲಿ ಮಹಾನಗರ ಪಾಲಿಕೆಯು ಸಾಮಾನ್ಯವಾಗಿ ಸ್ಥಳೀಯ ಇತಿಹಾಸ, ಭಾವನೆಗಳು ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ರಸ್ತೆಗಳ ನಾಮಕರಣ ಮಾಡುತ್ತದೆ
ಕುತುಬ್ ಮಿನಾರ್ ಮುಂದೆ ಚಾಲೀಸಾ ಪ್ರತಿಭಟನೆ
ಹಿಂದೂ ಸಂಘಟನೆಗಳ ಸದಸ್ಯರು ಕುತುಬ್ ಮಿನಾರ್ ಸಂಕೀರ್ಣದ ಮುಂದೆ ಮಂಗಳವಾರ ಹನುಮಾನ್ ಚಾಲೀಸಾ ಪಠಣ ಮಾಡಿದ್ದು, ಐತಿಹಾಸಿಕ ಸ್ಮಾರಕದ ಹೆಸರನ್ನು ವಿಷ್ಣು ಸ್ತಂಭ ಎಂದು ಬದಲಾಯಿಸಬೇಕು ಎಂದು ಪ್ರತಿಭಟನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುಮಾರು 30 ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದು, ನಂತರ ಬಿಡುಗಡೆ ಮಾಡಿದ್ದಾರೆ.
ಯುನೈಟೆಡ್ ಹಿಂದೂ ಫ್ರಂಟ್‌ನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಭಗವಾನ್ ಗೋಯಲ್ ಅವರು ‘ಕುತುಬ್ ಮಿನಾರ್ ಅನ್ನು ರಾಜಾ ವಿಕ್ರಮಾದಿತ್ಯ ನಿರ್ಮಾಣ ಮಾಡಿದ್ದರು. ಇದನ್ನು ವಿಷ್ಣು ಸ್ತಂಭವೆಂದು ಕರೆಯಲಾಗುತ್ತಿತ್ತು. ನಂತರದ ದಿನಗಳಲ್ಲಿ ಕುತ್ಬುದ್ದೀನ್ ಐಬಕ್ ಇದರ ಸ್ಥಾಪನೆ ತಾನು ಮಾಡಿದ್ದಾಗಿ ಹೇಳಿಕೊಂಡ’ ಎಂದು ಆರೋಪಿಸಿದರು.
ಈ ಸಂಕೀರ್ಣದಲ್ಲಿ 27ಕ್ಕೂ ಹೆಚ್ಚಿನ ದೇವಾಲಯಗಳಿದ್ದವು, ಅವುಗಳನ್ನು ಐಬಕ್ ಧ್ವಂಸಗೊಳಿಸಿದ್ದ. ಇದಕ್ಕೆ ಸಾಕ್ಷಿಯಾಗಿ ಇಂದಿಗೂ ಕುತುಬ್ ಮಿನಾರ್ ಸಂಕೀರ್ಣದಲ್ಲಿ ಹಿಂದೂ ದೇವತೆಗಳ ವಿಗ್ರಹಗಳನ್ನು ಕಾಣಬಹುದಾಗಿದೆ’ ಎಂದರು. ಅಲ್ಲದೇ ಮಿನಾರ್ ಹೆಸರನ್ನು ವಿಷ್ಣು ಸ್ತಂಭವೆಂದು ಬದಲಾಯಿಸಬೇಕು. ಇದರೊಂದಿಗೆ ಹಿಂದೂಗಳಿಗೆ ಕುತುಬ್ ಮಿನಾರ್ ಸಂಕೀರ್ಣದಲ್ಲಿ ಪ್ರಾರ್ಥಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು