ಆಂಧ್ರದಲ್ಲಿ ವೋಟಿಂಗ್ ದಿನವೇ ಮತದಾರನ ಕೆನ್ನೆಗೆ ಬಾರಿಸಿದ ಶಾಸಕನಿಗೆ ಸೋಲು
ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿಯಲ್ಲಿ ಮತದಾನದ ದಿನವೇ ವೋಟು ಹಾಕಲು ನಿಂತ ಮತದಾರನ ಕೆನ್ನೆಗೆ ಬಾರಿಸಿ ದುರಂಕಾರ ಮೆರೆದು ಸುದ್ದಿಯಾಗಿದ್ದ ವೈಎಸ್‌ಆರ್ ಹಾಲಿ ಶಾಸಕನನ್ನು ಈ ಬಾರಿಯ ಚುನಾವಣೆಯಲ್ಲಿ ಜನ ನೇರವಾಗಿ ಮನೆಗೆ ಕಳುಹಿಸಿದ್ದಾರೆ.
ಅಮರಾವತಿ: ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿಯಲ್ಲಿ ಮತದಾನದ ದಿನವೇ ವೋಟು ಹಾಕಲು ನಿಂತ ಮತದಾರನ ಕೆನ್ನೆಗೆ ಬಾರಿಸಿ ದುರಂಕಾರ ಮೆರೆದು ಸುದ್ದಿಯಾಗಿದ್ದ ವೈಎಸ್‌ಆರ್ ಹಾಲಿ ಶಾಸಕನನ್ನು ಈ ಬಾರಿಯ ಚುನಾವಣೆಯಲ್ಲಿ ಜನ ನೇರವಾಗಿ ಮನೆಗೆ ಕಳುಹಿಸಿದ್ದಾರೆ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿ ವಿಧಾನಸಭಾ ಕ್ಷೇತ್ರದಲ್ಲಿ ಈ ಘಟನೆ ನಡೆದಿತ್ತು.
ಅಂದು ಏನಾಗಿತ್ತು?
ಅಂದು ಮೇ.13 ದೇಶದ ಕೆಲವೆಡೆ 4ನೇ ಹಂತದ ಲೋಕಸಭಾ ಚುನಾವಣೆ ನಡೆದರೆ ಆಂಧ್ರಪ್ರದೇಶದಲ್ಲಿ ಲೋಕಸಭೆಯ ಜೊತೆಗೆ ವಿಧಾನಸಭೆಗೂ ಅಂದು ಚುನಾವಣೆ ನಡೆದಿತ್ತು. ಈ ವೇಳೆ ಎಲ್ಲರಂತೆ ಸಾಮಾನ್ಯ ವ್ಯಕ್ತಿಯೊಬ್ಬರು ತಮ್ಮ ಹಕ್ಕು ಚಲಾಯಿಸಲು ಸರತಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆ ಅಲ್ಲಿಗೆ ಬಂದ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಪಕ್ಷದ ಹಾಲಿ ಶಾಸಕ ಎ ಶಿವಕುಮಾರ್, ಎಲ್ಲರಂತೆ ತಾನು ಸಾಲಿನಲ್ಲಿ ನಿಲ್ಲುವ ಬದಲು ಮುಂದೆ ಹೋಗಿ ತಮ್ಮ ಶಾಸಕತ್ವದ ದರ್ಪದಲ್ಲಿ ಮತ ಹಾಕಲು ಮುಂದಾಗಿದ್ದಾರೆ. ಆದರೆ ಉದ್ದುದ್ದ ಕ್ಯೂನಲ್ಲಿ ಗಂಟೆಗಟ್ಟಲೇ ಮತ ಚಲಾಯಿಸುವುದಕ್ಕಾಗಿ ಕಾಯುತ್ತಿದ್ದ ಸಾಮಾನ್ಯ ಮತದಾರರನ್ನು ಇದು ಕೆರಳಿಸಿದೆ. ಕೂಡಲೇ ಓರ್ವ ಮತದಾರರು ಶಾಸಕನ ಈ ನಡೆಗೆ ವಿರುದ್ಧ ವ್ಯಕ್ತಪಡಿಸಿದ್ದಾರೆ. ಆದರೆ ತಾನು ಶಾಸಕ ಈ ಜನ ಮತ ಹಾಕಿದರೆ ಮಾತ್ರ ನಾನು ಗೆದ್ದು ಬರುವೆ ಎಂಬ ಸಣ್ಣ ಯೋಚನೆಯನ್ನು ಮಾಡದ ಶಾಸಕ ಶಿವಕುಮಾರ್ ತನ್ನ ವಿರೋಧಿಸಿದ ಮತದಾರನ ಕೆನ್ನೆಗೆ ಬಾರಿಸಿದ್ದರು. ಈ ವೇಳೆ ಮತದಾರನೂ ಶಾಸಕನಿಗೆ ತಿರುಗಿಸಿ ಒಂದೇಟು ಹಾಕಿದ್ದಾರೆ. ಆದರೆ ಈ ವೇಳೆ ತೋಳಗಳಂತೆ ಮುಗಿಬಿದ್ದ ಶಾಸಕನ ಬೆಂಬಲಿಗರು ಆ ಬಡಪಾಯಿ ಮತದಾರನಿಗೆ ಹಿಗ್ಗಾಮುಗ್ಗಾ ಥಳಿಸಿ ಎಳೆದಾಡಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಏಟು ತಿಂದ ಮತದಾರ ಗೊಟ್ಟಿಮುಕ್ಕುಲ ಸುಧಾಕರ್ ಪೊಲೀಸರಿಗೆ ದೂರು ನೀಡಿದ್ದರು.
ಮತದಾರನ ಕೆನ್ನೆಗೆ ಬಾರಿಸಿದ ಶಾಸಕ: ತಿರುಗಿಸಿ ಕೊಟ್ಟ ವೋಟರ್ ಮೇಲೆ ಮುಗಿಬಿದ್ದ YSR ಶಾಸಕನ ಬೆಂಬಲಿಗರು
ಕರ್ಮಕ್ಕೆ ತಕ್ಕ ಫಲ
ಆದರೆ ಕರ್ಮಕ್ಕೆ ತಕ್ಕ ಫಲ ಎಂಬ ನಿಯಮದಂತೆ ಮತದಾರನ ಕೆನ್ನೆಗೆ ಬಾರಿಸಿದ ಶಾಸಕ ಶಿವಕುಮಾರ್ ಈಗ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ತೆನಾಲಿಯ ಇದೊಂದು ಘಟನೆ ವೈಎಸ್‌ಆರ್ ಪಕ್ಷಕ್ಕೆ ತೀವ್ರ ಹಿನ್ನಡೆ ನೀಡಿತ್ತು. ಇಲ್ಲಿ ಜನಸೇನಾದಿಂದ ಸ್ಪರ್ಧಿಸಿದ್ದ ಹಿರಿಯ ನಾಯಕ ಮಾಜಿ ಸ್ಪೀಕರ್ ನಾದೆಂದ್ಲ ಮನೋಹರ್ ಅವರು 1,23,961 ಮತಗಳನ್ನು ಗಳಿಸಿ ವೈಎಸ್‌ಆರ್‌ನ ಶಿವಕುಮಾರ್ ಅವರನ್ನು 48,112 ಮತಗಳ ಅಂತರದಿಂದ ಸೋಲಿಸಿದ್ದಾರೆ. ಮತದಾರನ ಕೆನ್ನೆಗೆ ಹೊಡೆದ ಶಾಸಕ ಶಿವಕುಮಾರ್‌ಗೆ ಸಿಕ್ಕಿದ್ದು, ಬರೀ 75,849 ಮತಗಳು. ಒಟ್ಟಿನಲ್ಲಿ ದುರಂಕಾರದಿಂದ ಮತದಾರನ ಕೆನ್ನೆಗೆ ಹೊಡೆದ ಶಾಸಕನಿಗೆ ಈ ಕ್ಷೇತ್ರದಲ್ಲಿ ಮತದಾರರು ಸರಿಯಾಗಿ ಪಾಠ ಕಲಿಸಿದ್ದಾರೆ.
Andhra Pradesh results 2024: ಆಂಧ್ರದಲ್ಲಿ ಜಗನ್‌ಗೆ ಶಾಕ್ ನೀಡಿದ ಬಿಜೆಪಿ-ಟಿಡಿಪಿ-ಜೆಎಸ್‌ಪಿ ಮೈತ್ರಿ!
ತೆನಾಲಿಯ ಕುಟುಂಬ ರಾಜಕಾರಣ
ಈ ತೆನಾಲಿ ವಿಧಾನಸಭಾ ಕ್ಷೇತ್ರದ ರಾಜಕಾರಣದ ಬಗ್ಗೆ ಹೇಳುವುದಾದರೆ ಇಲ್ಲಿ 1952ರಿಂದಲೂ ಸ್ವಾತಂತ್ರ್ಯ ಹೋರಾಟಗಾರ ಆಲಪತಿ ವೆಂಕಟರಾಮಯ್ಯ ಅವರ ಕುಟುಂಬದ್ದೇ ಪಾರುಪತ್ಯವಾಗಿದೆ. ಆಲಪತಿ ವೆಂಕಟರಾಮಯ್ಯ ಅವರು 1952 ರಿಂದ 1965 ರವರೆಗೆ ಇಲ್ಲಿ ನಿರಂತರವಾಗಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ ಅವರ ಪುತ್ರಿ ದೊಡ್ಡಪನೇನಿ ಇಂದಿರಾ ಮೂರು ಬಾರಿ ಹಾಗೂ ಮೊಮ್ಮಗಳು ಗೋಗಿನೇನಿ ಉಮಾ ಒಮ್ಮೆ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಇವರ ನಂತರ ನಾದೆಂದ್ಲಾ ಮತ್ತು ಅಣ್ಣಾಬಟುನಿ ಕುಟುಂಬಗಳೂ ತೆನಾಲಿ ರಾಜಕಾರಣವನ್ನು ಆಳುತ್ತಿವೆ. ಈ ಮೂರು ಕುಟುಂಬದ ಸದಸ್ಯರು ಇದುವರೆಗೆ ತೆನಾಲಿ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ.
ಅಂದು ವೈರಲ್ ಆದ ವೀಡಿಯೋ ಇಲ್ಲಿದೆ ನೋಡಿ: