ನವದೆಹಲಿ(ಮೇ.31): ರಷ್ಯಾದಲ್ಲಿ ಸಿಲುಕಿದ್ದ ಭಾರತೀಯರನ್ನು ಕರೆತರಲು ಪ್ರಯಾಣ ಬೆಳೆಸಿದ್ದ ಏರ್‌ ಇಂಡಿಯಾ ವಿಮಾನದ ಪೈಲಟ್‌ವೊಬ್ಬರಿಗೆ ಕೊರೋನಾ ವೈರಸ್‌ ಇರುವುದು ದೃಢಪಟ್ಟಹಿನ್ನೆಲೆಯಲ್ಲಿ ವಿಮಾನವನ್ನು ಮಾರ್ಗ ಮಧ್ಯದಿಂದಲೇ ವಾಪಸ್‌ ಕರೆಸಿದ ಘಟನೆ ಶನಿವಾರ ನಡೆದಿದೆ.

ವಂದೇ ಭಾರತ್‌ ಕಾರ್ಯಾಚರಣೆಯ ಭಾಗವಾಗಿ ಭಾರತೀಯರನ್ನು ಕರೆತರಲು ಏರ್‌ಬಸ್‌ ಎ320 ಖಾಲಿ ವಿಮಾನ ಶನಿವಾರ ಮುಂಜಾನೆ 7.15ಕ್ಕೆ ಮಾಸ್ಕೋಗೆ ಪ್ರಯಾಣ ಬೆಳೆಸಿತ್ತು. ಈ ನಡುವೆ, ಪರೀಕ್ಷಾ ವರದಿ ಪರಿಶೀಲಿಸುವಾಗ ಪೈಲಟ್‌ಗೆ ಕೊರೋನಾ ಇರುವುದು ಸಿಬ್ಬಂದಿಗೆ ಗೊತ್ತಾಗಿದೆ. ಅಷ್ಟರಲ್ಲಿ ವಿಮಾನ ಉಜ್ಬೇಕಿಸ್ತಾನದ ವಾಯು ಮಾರ್ಗದಲ್ಲಿ ಪ್ರಯಾಣಿಸುತ್ತಿತ್ತು. ಕೂಡಲೇ ತುರ್ತು ಕರೆಯನ್ನು ಮಾಡಿ ವಿಮಾನವನ್ನು ವಾಪಸ್‌ ಕರೆಸಲಾಗಿದ್ದು, ಮಧ್ಯಾಹ್ನ 12.30ಕ್ಕೆ ವಿಮಾನ ಪುನಃ ದೆಹಲಿಗೆ ಬಂದಿಳಿದಿದೆ. ಇನ್ನೊಂದು ವಿಮಾನವನ್ನು ಮಾಸ್ಕೋಗೆ ಕಳುಹಿಸಲಾಗಿದೆ.

ಅತಂತ್ರ ಕಾರ್ಮಿಕರನ್ನು ವಿಮಾನದಲ್ಲಿ ಕರೆಸಿದ ಮುಖ್ಯಮಂತ್ರಿ!

ನಿಯಮಾವಳಿಯಂತೆ ವಿಮಾನ ಹಾರಾಟಕ್ಕೂ ಮುನ್ನ ಪೈಲಟ್‌ ಹಾಗೂ ವಿಮಾನ ಸಿಬ್ಬಂದಿಗೆ ಕೊರೋನಾ ವೈರಸ್‌ ಪರೀಕ್ಷೆ ನಡೆಸಿ, ರೋಗದ ಲಕ್ಷಣಗಳು ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಆದರೆ, ವಿಮಾನ ಹಾರಾಟ ಕೈಗೊಂಡ ಬಳಿಕ ವರದಿಯನ್ನು ಪರಿಶೀಲಿಸುವಾಗ ಅಚಾತುರ್ಯ ಬೆಳಕಿಗೆ ಬಂದಿದೆ.

ಒಬ್ಬ ಪೈಲಟ್‌ಗೆ ಕೊರೋನಾ ಇರುವುದು ಗೊತ್ತಾಗಿದ್ದರಿಂದ ವಿಮಾನವನ್ನು ಅರ್ಧಕ್ಕೇ ವಾಪಸ್‌ ಕರೆಸುವ ನಿರ್ಧಾರ ಕೈಗೊಳ್ಳಲಾಗಿದೆ. ಬಳಿಕ ಇನ್ನೊಂದು ವಿಮಾನವನ್ನು ಮಾಸ್ಕೋಗೆ ಕಳುಹಿಸಿಕೊಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.