ನವದೆಹಲಿ(ಮಾ.03): ತಮ್ಮ ಅಜ್ಜಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತುಸ್ಥಿತಿ ‘ತಪ್ಪು ನಿರ್ಧಾರ’ ಆಗಿತ್ತು ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಹೇಳಿದ್ದಾರೆ. ಈ ಮೂಲಕ ತುರ್ತುಪರಿಸ್ಥಿತಿ ಹೇರಿಕೆ ತಪ್ಪು ಎಂದು ಮೊದಲ ಬಾರಿ ಗಾಂಧಿ ಕುಟುಂಬ ಹಾಗೂ ಕಾಂಗ್ರೆಸ್‌ ಪಕ್ಷ ಒಪ್ಪಿಕೊಂಡಂತಾಗಿದೆ.

ಅಮೆರಿಕದಲ್ಲಿರುವ ಪ್ರಾಧ್ಯಾಪಕ ಹಾಗೂ ಭಾರತದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಕೌಶಿಕ್‌ ಬಸು ಅವರ ಜತೆ ಮಂಗಳವಾರ ವಿಡಿಯೋ ಸಂವಾದ ನಡೆಸಿದ ರಾಹುಲ್‌ ಗಾಂಧಿ, ‘ಆ ಸಮಯದಲ್ಲಿ (ತುರ್ತುಸ್ಥಿತಿ ವೇಳೆ) ನಡೆದಿದ್ದು ತಪ್ಪು ಎಂಬುದು ನನ್ನ ಅನಿಸಿಕೆ. ನನ್ನ ಅಜ್ಜಿ (ಇಂದಿರಾ) ಕೂಡ ಇದನ್ನೇ ಹೇಳಿದ್ದರು’ ಎಂದರು.

‘ಆದರೆ, ಅಂದಿನ ತುರ್ತುಪರಿಸ್ಥಿತಿಗೂ ಇಂದಿನ ಪರಿಸ್ಥಿತಿಗೂ ವ್ಯತ್ಯಾಸವಿದೆ. ಯಾವತ್ತೂ ಕಾಂಗ್ರೆಸ್‌ ಪಕ್ಷ ದೇಶದ ಸಾಂವಿಧಾನಿಕ ಚೌಕಟ್ಟನ್ನು ಆಕ್ರಮಿಸಿಕೊಳ್ಳಲು ಯತ್ನಿಸಿರಲಿಲ್ಲ. ಅಂಥ ಸಾಮರ್ಥ್ಯವೂ ಪಕ್ಷಕ್ಕಿಲ್ಲ. ಇಂದು ಆರೆಸ್ಸೆಸ್‌ ತನ್ನ ಜನರನ್ನು ಪ್ರಮುಖ ಸಾಂವಿಧಾನಿಕ ಸಂಸ್ಥೆಗಳಲ್ಲಿ ಸೇರಿಸುತ್ತಿದೆ. ಬಿಜೆಪಿಯನ್ನು ಸೋಲಿಸಿದರೂ ಸಂಘದವರು ಸರ್ಕಾರದಲ್ಲಿ ಇರುತ್ತಾರೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಆಗಿದ್ದ ಕಮಲ್‌ನಾಥ್‌ಗೆ ಇದೇ ಅನುಭವವಾಗಿತ್ತು. ‘ನನ್ನ ಆದೇಶವನ್ನು ಸರ್ಕಾರದಲ್ಲಿರುವ ಆರೆಸ್ಸೆಸ್‌ ಬೆಂಬಲಿತ ಅಧಿಕಾರಿಗಳು ಪಾಲಿಸುತ್ತಿಲ್ಲ’ ಎಂದು ಬೇಸತ್ತಿದ್ದರು’ ಎಂದರು.