ನವದೆಹಲಿ(ಮೇ.20):  ಇತ್ತೀಚೆಗೆ ಕೊನೆಗೊಂಡ ಪಂಚರಾಜ್ಯ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್‌ಗಳ ಮೂಲಕ ಭರ್ಜರಿ ಹಣ ಸಂದಾಯವಾಗಿದೆ. ಏ.1ರಿಂದ ಏ.10ರ ಅವಧಿಯಲ್ಲಿ ಎಸ್‌ಬಿಐ 695.34 ಕೋಟಿ ರು. ಮೊತ್ತದ ಚುನಾವಣಾ ಬಾಂಡ್‌ಗಳನ್ನು ಮಾರಾಟ ಮಾಡಿದೆ ಎಂಬ ಸಂಗತಿ ಆರ್‌ಟಿಐ ಅರ್ಜಿಯಿಂದ ತಿಳಿದುಬಂದಿದೆ.

2018ರಲ್ಲಿ ಬಾಂಡ್‌ ನೀಡಿಕೆ ಯೋಜನೆ ಆರಂಭವಾದಾಗಿನಿಂದ ಯಾವುದೇ ವಿಧಾನಸಭೆ ಚುನಾವಣೆಗಳ ಸಂದರ್ಭದಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಚುನಾವಣಾ ಬಾಂಡ್‌ಗಳು ಮಾರಾಟವಾಗಿದ್ದು ಇದೇ ಮೊದಲು. ಅದರಲ್ಲೂ ಕೋಲ್ಕತಾದ ಎಸ್‌ಬಿಐ ಶಾಖೆಯೊಂದರಲ್ಲಿಯೇ 176.1 ಕೋಟಿ ರು. ಮೊತ್ತದ ಬಾಂಡ್‌ಗಳು ಮಾರಾಟವಾಗಿವೆ.

ನಂತರದಲ್ಲಿ ದೆಹಲಿ ಶಾಖೆಯಿಂದ 167.5 ಕೋಟಿ ರು. ಹಾಗೂ ಚೆನ್ನೈ ಶಾಖೆಯಿಂದ 141.5 ಕೋಟಿ ರು.ಮೊತ್ತದ ಬಾಂಡ್‌ಗಳು ಮಾರಾಟವಾಗಿವೆ ಎಂದು ಎಸ್‌ಬಿಐ ಮಾಹಿತಿ ನೀಡಿದೆ. ಆದರೆ, ಖರೀದಿಯಾದ ಬಾಂಡ್‌ಗಳ ಪೈಕಿ ಯಾವ ಪಕ್ಷಕ್ಕೆ ಎಷ್ಟುಹಣ ಸಂದಾಯವಾಗಿದೆ ಎಂಬ ಸಂಗತಿ ಬಹಿರಂಗಗೊಂಡಿಲ್ಲ.