Asianet Suvarna News Asianet Suvarna News

ಲಸಿಕೆ ಫಲಾನುಭವಿಗಳ ಪತ್ತೆಗೆ ಮತದಾರರ ಪಟ್ಟಿ ಬಳಕೆ!

ಲಸಿಕೆ ಫಲಾನುಭವಿಗಳ ಪತ್ತೆಗೆ ಮತದಾರರ ಪಟ್ಟಿಬಳಕೆ| ಮತದಾರರ ವಿವರ ಕೇಳಿದ ಕೇಂದ್ರ| ನೀಡಲು ಒಪ್ಪಿದ ಆಯೋಗ

Election Commission Nods To Home Ministry Request Of Sharing Voter Data For Vaccination Drive pod
Author
Bangalore, First Published Jan 16, 2021, 11:21 AM IST

ನವದೆಹಲಿ(ಜ.16): ಕೊರೋನಾ ವಾರಿಯರ್‌ಗಳು, ಮುಂಚೂಣಿ ಸಿಬ್ಬಂದಿ ಬಳಿಕ 50 ವರ್ಷ ಮೇಲ್ಪಟ್ಟವರಿಗೂ ಕೊರೋನಾ ಲಸಿಕೆ ವಿತರಿಸಲು ಸಿದ್ಧತೆ ಆರಂಭಿಸಿರುವ ಕೇಂದ್ರ ಸರ್ಕಾರ, ಇದಕ್ಕಾಗಿ ಮತದಾರರ ಪಟ್ಟಿಯನ್ನು ಬಳಸಿಕೊಳ್ಳಲು ಮುಂದಾಗಿದೆ.

ನಿರ್ದಿಷ್ಟವಯೋಮಾನದವರ ಪತ್ತೆಗಾಗಿ ಮತದಾರರ ಪಟ್ಟಿಯಲ್ಲಿನ ಮಾಹಿತಿ ಒದಗಿಸುವಂತೆ ಕೇಂದ್ರ ಗೃಹ ಸಚಿವಾಲಯವು ಕೇಂದ್ರ ಚುನಾವಣಾ ಆಯೋಗಕ್ಕೆ ಮೊರೆ ಇಟ್ಟಿದೆ. ಇದಕ್ಕೆ ಆಯೋಗ ಕೂಡ ಒಪ್ಪಿದ್ದು, ಯಾವ ನಿರ್ದಿಷ್ಟಮಾಹಿತಿ ಬೇಕು ಎಂದು ಸಚಿವಾಲಯದಿಂದ ಬರುವ ಪ್ರತಿಕ್ರಿಯೆಗಾಗಿ ಎದುರು ನೋಡುತ್ತಿದೆ.

ಸರ್ಕಾರದ ಕಾರ್ಯ ಯೋಜನೆಗಳ ಪ್ರಕಾರ, ಕೊರೋನಾ ಲಸಿಕೆ ವಿತರಣೆಯ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಸಿಬ್ಬಂದಿ, 50 ವರ್ಷ ಮೇಲ್ಪಟ್ಟವರು ಹಾಗೂ 50 ವರ್ಷದೊಳಗಿನ ವಿವಿಧ ಕಾಯಿಲೆಪೀಡಿತರಿಗೆ ಲಸಿಕೆ ವಿತರಿಸುವ ಉದ್ದೇಶವಿದೆ. 50 ವರ್ಷ ಮೇಲ್ಪಟ್ಟವರನ್ನು ಎರಡು ವರ್ಗೀಕರಣ ಮಾಡಲಾಗುತ್ತದೆ. 50ರಿಂದ 60 ವರ್ಷದವರ ಒಂದು ಗುಂಪು, 60 ವರ್ಷ ಮೇಲ್ಪಟ್ಟವರ ಇನ್ನೊಂದು ಗುಂಪನ್ನು ರಚಿಸಲಾಗುತ್ತದೆ.

ಪ್ರತಿ ಮತಗಟ್ಟೆಯಲ್ಲಿ 50 ವರ್ಷ ಮೇಲ್ಪಟ್ಟ ಎಷ್ಟು ವ್ಯಕ್ತಿಗಳಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಮತದಾರರ ಪಟ್ಟಿಯನ್ನು ಬಳಸಿಕೊಳ್ಳಲು ಸರ್ಕಾರ ಮುಂದಾಗಿದೆ. ಇಡೀ ಮತದಾರರ ಪಟ್ಟಿಯನ್ನೇ ಒಂದು ಸಂಸ್ಥೆಗೆ ನೀಡುವ ಬದಲು, ಮತಗಟ್ಟೆವಾರು 50 ವರ್ಷ ಮೇಲ್ಪಟ್ಟ ವ್ಯಕ್ತಿಗಳ ವಿವರವನ್ನಷ್ಟೇ ನೀಡಲು ಚುನಾವಣಾ ಆಯೋಗ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.

Follow Us:
Download App:
  • android
  • ios