ಪಶ್ಚಿಮ ಬಂಗಾಳದಲ್ಲಿ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ, ರಾಜಕೀಯ ಸಲಹಾ ಸಂಸ್ಥೆ I-PAC ನಿರ್ದೇಶಕರ ಮೇಲೆ ಇಡಿ ದಾಳಿ ನಡೆದಿದೆ. ಈ ದಾಳಿಯನ್ನು ರಾಜಕೀಯ ಪಿತೂರಿ ಎಂದು ಆರೋಪಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ಕೋಲ್ಕತ್ತಾ (ಜ. 9): ಪಶ್ಚಿಮ ಬಂಗಾಳದಲ್ಲಿ ಜಾರಿ ನಿರ್ದೇಶನಾಲಯ (ED) ಗುರುವಾರ ನಡೆಸಿದ ಕಾರ್ಯಾಚರಣೆ ಈಗ ದೇಶಾದ್ಯಂತ ರಾಜಕೀಯ ಸಂಚಲನ ಮೂಡಿಸಿದೆ. ಪ್ರಖ್ಯಾತ ರಾಜಕೀಯ ಸಲಹಾ ಸಂಸ್ಥೆ I-PAC ನ ನಿರ್ದೇಶಕ ಪ್ರತೀಕ್ ಜೈನ್ ಅವರ ಕಚೇರಿ ಮತ್ತು ನಿವಾಸದ ಮೇಲೆ ನಡೆದ ದಾಳಿ, ತೃಣಮೂಲ ಕಾಂಗ್ರೆಸ್ ಮತ್ತು ಕೇಂದ್ರ ಸರ್ಕಾರದ ನಡುವಿನ ದೊಡ್ಡ ಸಮರಕ್ಕೆ ನಾಂದಿ ಹಾಡಿದೆ.

I-PAC ಮೇಲೆ ಇಡಿ ದಾಳಿ: ಆಘಾತ ವ್ಯಕ್ತಪಡಿಸಿದ ಸಂಸ್ಥೆ

ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಐ-ಪಿಎಸಿ (I-PAC) ನಿರ್ದೇಶಕ ಪ್ರತೀಕ್ ಜೈನ್ ಅವರ ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಸಂಸ್ಥೆ, ಇದು ಅತ್ಯಂತ ದುರದೃಷ್ಟಕರ ದಿನ. ವೃತ್ತಿಪರ ಸಂಸ್ಥೆಯ ಮೇಲೆ ಈ ರೀತಿ ದಾಳಿ ನಡೆಸಿರುವುದು ಕಳವಳಕಾರಿ. ಆದರೂ ನಾವು ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಮತ್ತು ಸಮಗ್ರತೆಯಿಂದ ನಮ್ಮ ಕೆಲಸವನ್ನು ಮುಂದುವರಿಸುತ್ತೇವೆ, ಎಂದು ಹೇಳಿಕೆ ಬಿಡುಗಡೆ ಮಾಡಿದೆ.

ಮಮತಾ ಬ್ಯಾನರ್ಜಿ ಎಂಟ್ರಿ: ಕಣಕ್ಕಿಳಿದ 'ದೀದಿ'

ದಾಳಿ ನಡೆದ ಸುದ್ದಿ ತಿಳಿಯುತ್ತಿದ್ದಂತೆ ಕೋಲ್ಕತ್ತಾ ಪೊಲೀಸ್ ಆಯುಕ್ತರು ಪ್ರತೀಕ್ ಜೈನ್ ಮನೆಗೆ ಧಾವಿಸಿದ್ದರು. ಬೆನ್ನಲ್ಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ವತಃ ಸ್ಥಳಕ್ಕೆ ಭೇಟಿ ನೀಡುವ ಮೂಲಕ ಈ ಪ್ರಕರಣಕ್ಕೆ ರಾಜಕೀಯ ತಿರುವು ನೀಡಿದರು. ದಾಳಿ ಮುಗಿಸಿ ಹೊರಬರುವಾಗ ಮಮತಾ ಕೈಯಲ್ಲಿದ್ದ 'ಹಸಿರು ಫೈಲ್' ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇಡಿ ಅಧಿಕಾರಿಗಳು ತೃಣಮೂಲದ ಆಂತರಿಕ ಚುನಾವಣಾ ರಣತಂತ್ರಗಳನ್ನು ಕದಿಯಲು ಈ ಸಂಚು ರೂಪಿಸಿದ್ದಾರೆ ಎಂದು ಸಿಎಂ ಆರೋಪಿಸಿದ್ದಾರೆ.

ನನ್ನನ್ನು ನಾನು ರಕ್ಷಿಸಿಕೊಳ್ಳಬಾರದೇ? ಮಮತಾ ಆಕ್ರೋಶ

ಘಟನೆಯ ಕುರಿತು ಗುಡುಗಿರುವ ಮಮತಾ ಬ್ಯಾನರ್ಜಿ, 'ಯಾರಾದರೂ ನನ್ನನ್ನು ಕೊಲ್ಲಲು ಪ್ರಯತ್ನಿಸಿದರೆ, ನನ್ನನ್ನು ನಾನು ರಕ್ಷಿಸಿಕೊಳ್ಳುವ ಹಕ್ಕು ನನಗಿಲ್ಲವೇ? ನನಗೆ ಪಕ್ಷವೇ ಇಲ್ಲದಿದ್ದರೆ ಜನರಿಗಾಗಿ ಹೇಗೆ ಹೋರಾಡಲಿ? ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ಟಿಎಂಸಿ ತೊರೆದು ಬಿಜೆಪಿಗೆ ಸೇರಿದ 'ದೇಶದ್ರೋಹಿಗಳ' ಮೂಲಕ ಹಣ ವರ್ಗಾವಣೆಯಾಗಿದೆ ಎಂದು ಅವರು ನೇರ ವಾಗ್ದಾಳಿ ನಡೆಸಿದ್ದಾರೆ.

ಹೈಕೋರ್ಟ್‌ನಲ್ಲಿ ಭಾರಿ ಜನಸಂದಣಿ: ವಿಚಾರಣೆ ಮುಂದೂಡಿಕೆ

ಈ ದಾಳಿಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ಕಲ್ಕತ್ತಾ ಹೈಕೋರ್ಟ್‌ನಲ್ಲಿ ನಡೆಯಬೇಕಿತ್ತು. ಆದರೆ ನ್ಯಾಯಾಲಯದ ಕೊಠಡಿಯಲ್ಲಿ ಜನಸಂದಣಿ ಮಿತಿಮೀರಿದ್ದರಿಂದ ನ್ಯಾಯಮೂರ್ತಿ ಸುಭಾರ ಘೋಷ್ ಅವರು ಅಸಮಾಧಾನ ವ್ಯಕ್ತಪಡಿಸಿದರು. ಜನರು ಹೊರಹೋಗಲು ನಿರಾಕರಿಸಿದ ಹಿನ್ನೆಲೆಯಲ್ಲಿ, ವಿಚಾರಣೆಯನ್ನು ಜನವರಿ 14 ಕ್ಕೆ ಮುಂದೂಡಲಾಗಿದೆ.