ನವದೆಹಲಿ[ಜ.11]: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಸಿಐಸಿಐ ಬ್ಯಾಂಕಿನ ಮಾಜಿ ಮುಖ್ಯಸ್ಥೆ ಚಂದಾ ಕೋಚರ್‌ ಹಾಗೂ ಇತರರಿಗೆ ಸೇರಿದ 78 ಕೋಟಿ ರು. ಮೊತ್ತದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.

ಕೋಚರ್‌ ಅವರ ಮುಂಬೈನಲ್ಲಿರುವ ಮನೆ ಮತ್ತು ಅವರಿಗೆ ಸಂಬಂಧಿಸಿದ ಕಂಪನಿಯೊಂದರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಲುವಾಗಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಆದೇಶವೊಂದನ್ನು ಹೊರಡಿಸಲಾಗಿತ್ತು. ಜಪ್ತಿ ಮಾಡಲಾದ ಆಸ್ತಿಗಳ ಮೌಲ್ಯ 78 ಕೋಟಿ ರು.ಗಳದ್ದಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಸ್ಥಾನ ತ್ಯಜಿಸಿದ ಚಂದಾ ಕೊಚ್ಚಾರ್, ಐಸಿಐಸಿಯ ಷೇರು ದಿಢೀರ್ ಏರಿಕೆ

ಏನಿದು ಪ್ರಕರಣ?:

ಐಸಿಐಸಿಐ ಬ್ಯಾಂಕ್‌, ವಿಡಿಯೋಕಾನ್‌ ಗ್ರೂಪ್‌ಗೆ ಸಾಲ ಮಂಜೂರು ಮಾಡುವ ವೇಳೆ ನಡೆದ ಅವ್ಯವಹಾರ ಆರೋಪಗಳಿಗೆ ಸಂಬಂಧಿಸಿದಂತೆ ಚಂದಾ ಕೋಚರ್‌ ಮತ್ತು ಇತರ 8 ಮಂದಿಯ ವಿರುದ್ಧ 2019ರಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಅಂದು ಬ್ಯಾಂಕಿನ ಮುಖ್ಯಸ್ಥೆ ಆಗಿದ್ದ ಚಂದಾ ಕೋಚರ್‌ ಮತ್ತು ಕುಟುಂಬ ಸದಸ್ಯರು ಈ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಮತ್ತು ಪ್ರತಿಫಲಾಫೇಕ್ಷೆಯಿಂದ ವಿಡಿಯೋಕಾನ್‌ ಗ್ರೂಪ್‌ಗೆ ಸಾಲದ ಹಣ ಮಂಜೂರು ಮಾಡಲಾಗಿದೆ. ಸಾಲ ನೀಡಿದಕ್ಕೆ ಪ್ರತಿಯಾಗಿ, ವಿಡಿಯೋಕಾನ್‌ ಗ್ರೂಪ್‌, ಚಂದಾ ಕೋಚರ್‌ ಪತಿ ದೀಪಕ್‌ ಕೋಚರ್‌ ಒಡೆತನದ ನುಪವರ್‌ ರಿನ್ಯುವೇಬಲ್ಸ್‌ನಲ್ಲಿ ಹಣ ಹೂಡಿಕೆ ಮಾಡಿದೆ ಎಂಬ ಆರೋಪವಿದೆ.