ರಾಷ್ಟ್ರ ರಾಜಧಾನಿ, ಸುತ್ತಮುತ್ತಲ ಪ್ರದೇಶಗಳಲ್ಲಿ 30 ಸೆಕೆಂಡುಗಳ ಕಾಲ ಕಂಪಿಸಿದ ಭೂಮಿ: ಭಯಭೀತರಾದ ಜನ..!
ಭೂಕಂಪನದ ಕೇಂದ್ರಬಿಂದು ನೇಪಾಳದ ಕಲಿಕಾ ಎಂದು ಹೇಳಲಾಗಿದ್ದು, ರಿಕ್ಟರ್ ಮಾಪಕದಲ್ಲಿ 5.8 ರ ತೀವ್ರತೆಯಲ್ಲಿ ಭೂಕಂಪವಾಗಿದೆ ಎಂದು ವರದಿಯಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮಂಗಳವಾರ ಮಧ್ಯಾಹ್ನ ಭೂಕಂಪನವಾಗಿರುವ ವರದಿಯಾಗಿದೆ. ಭೂಮಿ ಗಢಗಢ ಎಂದು ನಡುಗಿದ್ದು, ಇದರಿಂದ ಜನರು ಗಾಬರಿಯಿಂದ ತಮ್ಮ ಮನೆ, ಕಚೇರಿಗಳಿಂದ ಹೊರಗೆ ಬಂದಿದ್ದಾರೆ ಎಂದು ತಿಳಿದುಬಂದಿದೆ. ದೆಹಲಿ - ಎನ್‌ಸಿಆರ್ ಪ್ರದೇಶದಲ್ಲಿ ಮಧ್ಯಾಹ್ನ ಸುಮಾರು 2.30ರ ವೇಳೆಗೆ 30 ಸೆಕೆಂಡುಗಳಿಗೂ ಹೆಚ್ಚು ಕಾಲ ಭೂಮಿ ಕಂಪಿಸಿದೆ. ಇದರಿಂದ ಮನೆಯ ಸೀಲಿಂಗ್ ಫ್ಯಾನ್‌ಗಳು, ಮನೆಯ ವಸ್ತುಗಳು ಅಲ್ಲಾಡಿದ್ದು, ಕೆಲ ಜನರು ಈ ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
ದೆಹಲಿ - ಎನ್‌ಸಿಆರ್ ಮಾತ್ರವಲ್ಲದೆ, ಉತ್ತರಾಖಂಡದಲ್ಲೂ ಭೂಮಿ ಕಂಪಿಸಿದ್ದು, ಇನ್ನು, ಭಾರತವಲ್ಲದೆ, ಚೀನಾ ಹಾಗು ನೇಪಾಳದಲ್ಲೂ ಭೂಕಂಪನವಾಗಿರುವ ವರದಿಯಾಗಿದೆ. ಭೂಕಂಪನದ ಕೇಂದ್ರಬಿಂದು ನೇಪಾಳದ ಕಲಿಕಾ ಎಂದು ಹೇಳಲಾಗಿದ್ದು, ರಿಕ್ಟರ್ ಮಾಪಕದಲ್ಲಿ 5.8 ರ ತೀವ್ರತೆಯಲ್ಲಿ ಭೂಕಂಪವಾಗಿದೆ ಎಂದು ವರದಿಯಾಗಿದೆ.
ಇದನ್ನು ಓದಿ: ಇಂಡೋನೇಷ್ಯಾದಲ್ಲಿ 6.0 ತೀವ್ರತೆಯ ಪ್ರಬಲ ಭೂಕಂಪ: ಸುನಾಮಿ ಎಚ್ಚರಿಕೆ ಇಲ್ಲ..!
ಮಧ್ಯಾಹ್ನ 2.28 ರ ವೇಳೆಯಲ್ಲಿ ನೇಪಾಳದಲ್ಲಿ ರಿಕ್ಟರ್ ಮಾಪಕದಲ್ಲಿ 5.8ರ ತೀವ್ರತೆಯಲ್ಲಿ ಭೂಕಂಪವಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (ಎನ್‌ಸಿಎಸ್) ತಿಳಿಸಿದೆ. ಉತ್ತರಾಖಂಡದ ಪಿಥೋರಘಡದಿಂದ 148 ಕಿ.ಮೀ. ಪೂರ್ವದ ನೇಪಾಳದಲ್ಲಿ ಭೂಕಂಪನದ ಕೇಂದ್ರಬಿಂದು ವರದಿಯಾಗಿದೆ ಎಂದೂ ಹೇಳಿದೆ.
ಆದರೆ, ಭೂಕಂಪನದಿಂದ ಈವರೆಗೆ ಯಾವುದೇ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ.
ಇದನ್ನೂ ಓದಿ: ವಿಜಯಪುರ, ಕಲಬುರಗಿಯಲ್ಲಿ ಭೂ ಕಂಪನ : ಕುಸಿದ ಗೋಡೆಗಳು