24 ಗಂಟೆಗಳ ಭೂಕಂಪಕ್ಕೆ ಬೆಚ್ಚಿದ ಲಡಾಖ್!
ಭೂಕಂಪಕ್ಕೆ ಬೆಚ್ಚಿದ ಲಡಾಖ್: 24 ಗಂಟೆಗಳ ಕಂಪನ ಅನುಭವ| ರಿಕ್ಟರ್ ಮಾಪಕದಲ್ಲಿ 5.4ರಷ್ಟುತೀವ್ರತೆ ದಾಖಲು
ಶ್ರೀನಗರ(ಸೆ.29): ಲಡಾಖ್‌ನಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಲಘು ಭೂಕಂಪ ಅಲ್ಲಿನ ಜನರನ್ನು ಬೆಚ್ಚಿ ಬೀಳಿಸಿದೆ. ಭೂಕಂಪ ನಡೆದ 24 ಗಂಟೆಗಳ ವರೆಗೂ ಕಂಪನದ ಅನುಭವವಾಗಿದ್ದಾಗಿ ಸ್ಥಳೀಯರು ಹೇಳಿದ್ದಾರೆ.
ಶುಕ್ರವಾರ ಸಂಜೆ 4.27ಕ್ಕೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.4ರಷ್ಟುತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಇಲಾಖೆ ಹೇಳಿದೆ. ಕಂಪನದ ತೀವ್ರತೆಗೆ ಲಡಾಖ್‌ನ ಬ್ಯಾರೆನ್ ಹಾಗೂ ಬ್ರಿಟಲ್ ಪರ್ವತದಲ್ಲಿ ದಟ್ಟಹೊಗೆ ಎದ್ದಿದ್ದು, ಬೆಟ್ಟದ ಬುಡದಲ್ಲಿದ್ದ ಗಡಿ ರಸ್ತೆ ಸಂಸ್ಥೆಯ ಕಟ್ಟಡ ಹಾನಿಯಾಗಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
18380 ಅಡಿ ಎತ್ತರದಲ್ಲಿರುವ ವಿಶ್ವದ ಅತೀ ಎತ್ತರದ ಕಾಂದುಂಗ್ಲಾ ರಸ್ತೆ ಎದುರಿನ ನುಬ್ರಾ ಕಣಿವೆಯ ಸಮೀಪದ ಶಯೋಕ್ ಪ್ರದೇಶದಲ್ಲಿ ಸೆರೆಯಾದ ವಿಡಿಯೋ ಒಂದರಲ್ಲಿ ಸ್ಥಳೀಯರು ಕಂಪನದ ಬಗ್ಗೆ ಭಯಭೀತರಾಗಿ ಮಾತನಾಡುವುದು ದಾಖಲಾಗಿದೆ.