ಲಸಿಕೆ ಪಡೆಯುವ ಮುನ್ನ ಮೋದಿ ಎಚ್ಚರಿಕೆ, ಈ ತಪ್ಪು ಮಾಡಬೇಡಿ ಎಂದ ಪಿಎಂ!
ದೇಶಾದ್ಯಂತ ಕೊರೋನಾ ಲಸಿಕೆ ಕಾರ್ಯ ಆರಂಭ| ಕೊರೋನಾ ಲಸಿಕೆ ಅಭಿಯಾನ ಆರಂಭಕ್ಕೂ ಮುನ್ನ ಜನರನ್ನು ಎಚ್ಚರಿಸಿದ ಮೋದಿ| ಯಾವುದೇ ಕಾರಣಕ್ಕೂ ಈ ತಪ್ಪು ಮಾಡಬೇಡಿ ಎಂದ ಪಿಎಂ
ನವದೆಹಲಿ(ಜ.16):ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಇಂದು ದೇಶಾದ್ಯಂತ ಕೊರೋನಾ ಲಸಿಕೆ ಅಭಿಯಾನ ಆರಂಭವಾಗಿದೆ. ಹೀಗಿರುವಾಗ ಪಿಎಂ ಮೋದಿ ಈ ಅಭಿಯಾನ ಆರಂಭವಾಗುವುದಕ್ಕೂ ಮೊದಲು ದೇಶದ ಜನರನ್ನುದ್ದೇಶಿಸಿ ಮಾತನಾಡಿದ್ದಾರೆ. ಅವರು ಕೊರೋನಾ ಲಸಿಕೆ ವಿಚಾರವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಯತ್ನ ನಡೆಸಿದ್ದಾರೆ. ಲಸಿಕೆ ಸಂಬಂಧಿತ ಎಲ್ಲಾ ಪ್ರಶ್ನೆಗಳ ಉತ್ತರ ಅವರ ಈ ಭಾಷಣದಲ್ಲಿತ್ತು. ಅವರು ಒಂದು ಬಾರಿ ಲಸಿಕೆ ಹಾಕಿಸಿಕೊಂಡ ಬಳಿಕ ಎರಡನೇ ಡೋಸ್ ಪಡೆಯುವ ಮೊದಲು ತೆಗೆದುಕೊಳ್ಳಬೇಕಾದ ಎಚ್ಚರಿಕೆ ಬಗ್ಗೆ ಉಲ್ಲೇಖಿಸಿದರು.
"
ಮೊದಲ ಡೋಸ್ ಪಡೆದ ಬಳಿಕ ಜನರು ನಿಶ್ಚಿಂತರಾಗುವುದು ಬೇಡ, ಎರಡನೇ ಡೋಸ್‌ಗೆ ತಯಾರಾಗಿ. ಈ ಬಗ್ಗೆ ನಿಮ್ಮ ಮೊಬೈಲ್‌ಗೆ ಸಂದೇಶ ಬರಲಿದೆ ಎಂದಿದ್ದಾರೆ.
ಅಭಿಯಾನ ಉದ್ಘಾಟಿಸಿ ಮಾತನಾಡಿದ ಮೋದಿ 'ಭಾರತದಲ್ಲಿ ಆರಂಭವಾದ ಲಸಿಕೆ ಅಭಿಯಾನ ಮಾನವೀಯ ಹಾಗೂ ಮಹತ್ವಪೂರ್ಣ ಸಿದ್ಧಾಂತದ ಮೇಲೆ ಆಧಾರವಾಗಿದೆ. ಯಾರಿಗೆ ಅತೀ ಅಗತ್ಯವೋ ಅವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಕೊರೋನಾ ಲಸಿಕೆಯ ಎರಡು ಡೋಸ್ ಪಡೆಯುವುದು ಅತೀ ಅಗತ್ಯ. ಇವೆರಡರ ನಡುವೆ ಸರಿ ಸುಮಾರು ಒಂದು ವಾರದ ಅಂತರವಿರುತ್ತದೆ. ಎರಡನೇ ಡೋಸ್ ಹಾಕಿಸಿದ ಎರಡು ವಾರದ ಬಳಿಕವೇ ನಿಮ್ಮ ದೇಹದಲ್ಲಿ ಕೊರೋನಾ ವಿರುದ್ಧ ಹೋರಾಡಬಲ್ಲ ರೋಗ ನಿರೋಧಕ ಶಕ್ತಿ ಅಭಿವೃದ್ಧಿಯಾಗಲಿದೆ. ಭಾರತ ಮೊದಲ ಹಂತದಲ್ಲೇ ದೇಶದ ಮೂರು ಕೋಟಿ ಮಂದಿಗೆ ಲಸಿಕೆ ಹಾಕಿಸಲಿದೆ. ಹೀಗಿರುವಾಗ ಮೊದಲ ಡೋಸ್ ಪಡೆದವರು ಎರಡನೇ ಡೋಸ್ ಪಡೆಯಲು ಹಿಂದೇಟು ಹಾಕಬೇಡಿ ಎಂದಿದ್ದಾರೆ.
ಸಾಮಾನ್ಯವಾಗಿ ಲಸಿಕೆ ಒಂದನ್ನು ತಯಾರಿಸಲು ಅನೇಕ ವರ್ಷಗಳು ತಗುಲುತ್ತವೆ. ಆದರೀಗ ಅತ್ಯಂತ ಕಡಿಮೆ ಸಮಯದಲ್ಲಿ ಒಂದಲ್ಲ ಬದಲಾಗು ಎರಡು ಮೇಡ್ ಇನ್ ಇಂಡಿಯಾ ಲಸಿಕೆಗಳು ತಯಾರಾಗಿವೆ. ಇನ್ನೂ ಅನೇಕ ಕಂಪನಿಗಳು ಲಸಿಕೆ ಅಭಿವೃದ್ಧಿಪಡಿಸುತ್ತಿದ್ದು, ಅತ್ಯಂತ ಶೀಘ್ರದಲ್ಲೇ ಲಭ್ಯವಾಗಲಿವೆ. ಇವೆಲ್ಲವೂ ಭಾರತದ ಸಾಮರ್ಥ್ಯ, ವೈಜ್ಞಾನಿಕ ಕ್ಷೇತ್ರದ ಕ್ಷಮತೆ ಹಾಗೂ ಪ್ರತಿಭೆಗೆ ಜೀವಂತ ಉದಾಹರಣೆ ಎಂದು ಮೋದಿ ಹೇಳಿದ್ದಾರೆ.
ಕೊರೋನಾ ಕಾಲದ ಸಂಕಷ್ಟ ನೆನೆದು ಭಾವುಕರಾದ ಮೋದಿ
ಕೊರೋನಾ ಲಸಿಕೆ ಅಭಿಯಾನ ಆರಂಭಿಸುವ ಹಂತದಲ್ಲಿ ಪಿಎಂ ಮೋದಿ ಕೊರೋನಾ ಕಾಲವನ್ನೂ ನೆನಪಿಸಿಕೊಂಡಿದ್ದಾರೆ. ಲಾಕ್‌ಡೌನ್, ಜನರ ಸಂಕಷ್ಟ ನೆನೆದು ಭಾವುಕರಾದರು. ಕೊರೋನಾ ಮಹಾಮಾರಿ ಮಕ್ಕಳನ್ನು ತಾಯಿಯಿಂದ ದೂರ ಮಾಡಿತ್ತು. ತಾಯಿ ಮಗುವಿನ ಬಳಿ ಹೋಗಲಿಚ್ಛಿಸಿದರೂ ಹೋಗಲಾಗದ ಪರಿಸ್ಥಿತಿ. ಮೃತರಿಗೆ ಸೂಕ್ತ ಅಂತ್ಯ ಸಂಸ್ಕಾರ ನೆರವೇರಿಸಲೂ ಅವಕಾಶವಿರಲಿಲ್ಲ. ಅನೇಕ ಮಂದಿ ಕೊರೋನಾ ವಾರಿಯರ್ಸ್‌ಗೆ ತಮ್ಮ ಮನೆಗೆ ತೆರಳಲೂ ಸಾಧ್ಯವಾಗಲಿಲ್ಲ ಎಂದಿದ್ದಾರೆ.