ಮೋದಿ ಭದ್ರತೆಗೆ ಶೀಘ್ರ ಬರಲಿದೆ ಡ್ರೋನ್ ಕಿಲ್ಲರ್!| ಮೋದಿ ಮನೆ, ಸಂಚಾರದ ವೇಳೆಯೂ ಬಳಕೆಗೆ ನಿರ್ಧಾರ| ಡಿಆರ್‌ಡಿಒದಿಂದ ಸ್ವದೇಶಿ ಭದ್ರತಾ ವ್ಯವಸ್ಥೆ ಅಭಿವೃದ್ಧಿ
ನವದೆಹಲಿ(ನ.30): ಬಾಹ್ಯ ಮತ್ತು ಆಂತರಿಕ ಶಕ್ತಿಗಳಿಂದ ಸದಾ ದಾಳಿಯ ಭೀತಿ ಎದುರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಡ್ರೋನ್ ದಾಳಿಯಿಂದ ರಕ್ಷಣೆ ನೀಡುವ ಸ್ವದೇಶಿ ಭದ್ರತಾ ವ್ಯವಸ್ಥೆಯನ್ನು ಶೀಘ್ರವೇ ಕಲ್ಪಿಸಲಾಗುತ್ತದೆ.
ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಈಗಾಗಲೇ ಡ್ರೋನ್‌ಗಳ ದಾಳಿ ತಡೆಯುವ ದೇಶೀಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದು ಅದನ್ನು ಇನ್ನಷ್ಟುಅಭಿವೃದ್ಧಿಪಡಿಸುವ ಮತ್ತು ಉತ್ಪಾದಿಸುವ ಹೊಣೆಯನ್ನು ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆಗೆ ನೀಡಿದೆ.
ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದ ಉಗ್ರರು ಮತ್ತು ಅಲ್ಲಿನ ಗುಪ್ತಚರ ಸಂಸ್ಥೆಯಾದ ಐಎಸ್‌ಐ ಚೀನಾ ನಿರ್ಮಿತ ಡ್ರೋನ್‌ಗಳನ್ನು ಬಳಸಿ ಭಾರತದ ಗಡಿಯೊಳಗೆ ಮಾದಕ ವಸ್ತು, ಶಸ್ತಾ್ರಸ್ತ್ರ ಮತ್ತು ಸ್ಫೋಟಕ ವಸ್ತುಗಳನ್ನು ರವಾನಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಡ್ರೋನ್ ದಾಳಿ ತಡೆ ವ್ಯವಸ್ಥೆಯನ್ನು ಆದಷ್ಟುಶೀಘ್ರ ಉತ್ಪಾದಿಸಿ ಬಳಕೆಗೆ ಬಿಡುಗಡೆ ಮಾಡಲು ಸರ್ಕಾರ ಮುಂದಾಗಿದೆ.
ಪ್ರಧಾನಿ ಅವರ ಗೃಹ ಕಚೇರಿಗೆ ಈ ಭದ್ರತೆ ಒದಗಿಸಲಾಗುವುದು ಮತ್ತು ಅವರ ಸಂಚಾರದ ವೇಳೆ ಬೆಂಗಾವಲು ವಾಹನದ ಭಾಗವಾಗಿಯೂ ಈ ವ್ಯವಸ್ಥೆ ಬಳಕೆಯಾಗಲಿದೆ. ಜೊತೆಗೆ ಭಾರತೀಯ ಸೇನೆಗೂ ಕೂಡಾ ಇಂಥ ವ್ಯವಸ್ಥೆ ಅಭಿವೃದ್ಧಿಪಡಿಸಿರುವ ಮತ್ತು ಬಳಕೆಗೆ ಲಭ್ಯವಿರುವ ಮಾಹಿತಿಯನ್ನು ಡಿಆರ್‌ಡಿಒ ರವಾನಿಸಲು ನಿರ್ಧರಿಸಿದೆ.
ಹೇಗಿದೆ ವ್ಯವಸ್ಥೆ?:
ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಆ್ಯಂಟಿ ಡ್ರೋನ್ ವ್ಯವಸ್ಥೆಯು, 2-3 ಕಿ.ಮೀ. ದೂರದಿಂದಲೇ ಡ್ರೋನ್‌ಗಳ ಆಗಮನವನ್ನು ಪತ್ತೆ ಹಚ್ಚುವ ರಾಡಾರ್ ಹೊಂದಿರುತ್ತದೆ. ಸೂಕ್ತ ತರಂಗಾತರ ಬಳಸಿ ಡ್ರೋನ್‌ಗಳನ್ನು ಜ್ಯಾಮ್ ಮಾಡಬಲ್ಲದಾಗಿದೆ. ಇನ್ನೊಂದು ಮಾದರಿಯಲ್ಲಿ ಡ್ರೋನ್‌ಗಳನ್ನು ರಾಡಾರ್ ಮೂಲಕ ಪತ್ತೆ ಹಚ್ಚಿ ಬಳಿಕ ಲೇಸರ್ ಕಿರಣಗಳ ಮೂಲಕ ಅವು ಪತನಗೊಳ್ಳುವಂತೆ ಮಾಡಬಹುದಾಗಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Nov 30, 2020, 8:15 AM IST