ಚೆನ್ನೈ(j.೨೦): ಭಾರತೀಯ ವೈದ್ಯಕೀಯ ಕ್ಷೇತ್ರದ ಖ್ಯಾತನಾಮರಲ್ಲೊಬ್ಬರಾದ ಆಡ್ಯಾರ್‌ ಕ್ಯಾನ್ಸರ್‌ ಸಂಸ್ಥೆಯ ಅಧ್ಯಕ್ಷೆ ಡಾ.ವಿ.ಶಾಂತಾ (93) ಮಂಗಳವಾರ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ತೀವ್ರ ಉಸಿರಾಟ ತೊಂದರೆ ಮತ್ತು ಎದೆನೋವಿನಿಂದ ಬಳಲುತಿದ್ದ ಶಾಂತಾ ಅವರನ್ನು ಸೋಮವಾರ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅವರಿಗೆ ಕೊರೋನಾ ಸೋಂಕು ಇರಲಿಲ್ಲ ಎಂದು ಸಂಬಂಧಿಕರು ತಿಳಿಸಿದ್ದಾರೆ.

ಭಾರತದಲ್ಲಿ ಕ್ಯಾನ್ಸರ್‌ ರೋಗಿಗಳಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಮಾರ್ಗದರ್ಶಕರಾದ ಡಾ.ಕೃಷ್ಣಮೂರ್ತಿ ಅವರೊಂದಿಗೆ ಸೇರಿ ಚೆನ್ನೈನಲ್ಲಿ 12 ಹಾಸಿಗೆ ಸಾಮರ್ಥ್ಯದ ಆಡ್ಯಾರ್‌ ಕ್ಯಾನ್ಸರ್‌ ಇನ್‌ಸ್ಟಿಟ್ಯೂಟ್‌ ಕಟ್ಟಿಅದನ್ನು ಮಹಾನ್‌ ಸಂಸ್ಥೆಯಾಗಿ ಬೆಳೆಸಿದ ಕೀರ್ತಿ ವಿ.ಶಾಂತಾ ಅವರಿಗೆ ಸಲ್ಲುತ್ತದೆ.

ಈ ಸಂಸ್ಥೆಯು ಕಡು ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿದೆ. ಶಾಂತಾ ಅವರ ನಿಧನಕ್ಕೆ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ, ಚೆಸ್‌ ದಂತಕತೆ ವಿಶ್ವನಾಥನ್‌ ಆನಂದ್‌ ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದಾರೆ.