Asianet Suvarna News Asianet Suvarna News

ಪೋಲಿಯೂ ತೊಡೆದ ಹರ್ಷವರ್ಧನ್‌ಗೆ WHO ಅಧಿಪತ್ಯ!

ಪೋಲಿಯೂ ತೊಡೆದ ಹರ್ಷವರ್ಧನ್‌ಗೆ ಡಬ್ಲ್ಯುಎಚ್‌ಒ ಅಧಿಪತ್ಯ| 34 ಸದಸ್ಯರ ಕಾರ್ಯಕಾರಿ ಮಂಡಳಿ ಅಧ್ಯಕ್ಷರಾಗಿ ಭಾರತದ ಹರ್ಷವರ್ಧನ್‌ ನಾಳೆ ಪದಗ್ರಹಣ| 1 ವರ್ಷ ಅಧಿಕಾರ: ಕೊರೋನಾ ವಿಷಯದಲ್ಲಿ ಚೀನಾ ವಿರುದ್ಧ ತನಿಖೆಗೆ ಆದೇಶಿಸುತ್ತಾರಾ?

Dr Harsh Vardhan to take charge as WHO Executive Board chairman
Author
Bangalore, First Published May 21, 2020, 10:49 AM IST

ನವದೆಹಲಿ(ಮಾ.21):  ವಿಶ್ವಸಂಸ್ಥೆಯ ಅಂಗವಾಗಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯ ಕಾರ್ಯಕಾರಿ ಮಂಡಳಿಯ ಚೇರ್ಮನ್‌ ಆಗಿ ಮೇ 22ರಂದು ಭಾರತದ ಆರೋಗ್ಯ ಸಚಿವ, ಭಾರತದಲ್ಲಿ ಪೋಲಿಯೋ ಪಿಡುಗು ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಾ| ಹರ್ಷವರ್ಧನ್‌ ಅಧಿಕಾರ ಸ್ವೀಕರಿಸಲಿದ್ದಾರೆ. ಅವರ ಅಧಿಕಾರಾವಧಿ 1 ವರ್ಷವಾಗಿದ್ದು, ಜಾಗತಿಕ ಮಟ್ಟದಲ್ಲಿ ಕೊರೋನಾ ವಿರುದ್ಧ ದೊಡ್ಡ ಹೋರಾಟ ನಡೆಯುತ್ತಿರುವಾಗಲೇ ಭಾರತಕ್ಕೆ ಈ ಮಹತ್ವದ ಹುದ್ದೆ ಒಲಿದು ಬಂದಿರುವುದು ವಿಶೇಷವಾಗಿದೆ.

ಕಾರ್ಯಕಾರಿ ಮಂಡಳಿಯ ಹಾಲಿ ಅಧ್ಯಕ್ಷರಾಗಿರುವ ಜಪಾನ್‌ನ ಡಾ| ಹಿರೋಕಿ ನಕಟಾನಿ ಅವರ ಜಾಗವನ್ನು ಹರ್ಷವರ್ಧನ್‌ ಅಲಂಕರಿಸಲಿದ್ದಾರೆ. ಅವರನ್ನು ಈ ಹುದ್ದೆಗೆ ನೇಮಕ ಮಾಡುವ ಪ್ರಸ್ತಾಪಕ್ಕೆ ಡಬ್ಲ್ಯುಎಚ್‌ಒದ 194 ದೇಶಗಳ 73ನೇ ಜಾಗತಿಕ ಆರೋಗ್ಯ ಸಮಾವೇಶದಲ್ಲಿ ಮಂಗಳವಾರ ಒಪ್ಪಿಗೆ ದೊರಕಿದೆ. ಈ ಸಮಾವೇಶದಲ್ಲಿ ನಿಯೋಜಿತ ಚೇರ್ಮನ್‌ ಹರ್ಷವರ್ಧನ್‌ ಭಾಷಣ ಕೂಡ ಮಾಡಿದ್ದಾರೆ. ಮೇ 22ರಂದು ಕಾರ್ಯಕಾರಿ ಮಂಡಳಿಯ 147ನೇ ಸಭೆ ನಡೆಯಲಿದ್ದು, ಅಲ್ಲಿ ಚೇರ್ಮನ್‌, ಉಪಾಧ್ಯಕ್ಷರು ಹಾಗೂ ಇತರ ಸದಸ್ಯರ ಆಯ್ಕೆಯನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ.

ಕೊರೋನಾ ವೈರಸ್‌ ಚೀನಾದ ವುಹಾನ್‌ ನಗರದಲ್ಲಿ ಹೇಗೆ ಹುಟ್ಟಿತು ಹಾಗೂ ನಂತರ ಚೀನಾ ಮಾಡಿದ್ದೇನು ಎಂಬ ಬಗ್ಗೆ ತನಿಖೆ ನಡೆಯಬೇಕೆಂದು ಅಮೆರಿಕವೂ ಸೇರಿದಂತೆ ಅನೇಕ ದೇಶಗಳು ಆಗ್ರಹಿಸುತ್ತಿವೆ. ಈ ವಿಷಯದಲ್ಲಿ ಹರ್ಷವರ್ಧನ್‌ ಯಾವ ನಿಲುವು ತಾಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಆಯ್ಕೆ ಹೇಗೆ?

ಡಬ್ಲ್ಯುಎಚ್‌ಒದ ಸದಸ್ಯ ರಾಷ್ಟ್ರಗಳು ಸರದಿಯ ಪ್ರಕಾರ 1 ವರ್ಷದ ಅವಧಿಗೆ 34 ಸದಸ್ಯರ ಕಾರ್ಯಕಾರಿ ಮಂಡಳಿಯ ಚೇರ್ಮನ್‌ ಹುದ್ದೆಯನ್ನು ನಿಭಾಯಿಸುತ್ತವೆ. ಸಂಸ್ಥೆಯ ಪ್ರಾದೇಶಿಕ ಗುಂಪುಗಳು ಮುಂದಿನ ಅವಧಿಗೆ ಚೇರ್ಮನ್‌ ಯಾವ ದೇಶದವರಾಗಬೇಕು ಎಂಬುದನ್ನು ನಿರ್ಧರಿಸುತ್ತವೆ. ಆಗ್ನೇಯ ಏಷ್ಯಾ ದೇಶಗಳ ಗುಂಪು ಕಳೆದ ವರ್ಷವೇ 2020ರಲ್ಲಿ ಈ ಹುದ್ದೆಯನ್ನು ಭಾರತಕ್ಕೆ ನೀಡುವಂತೆ ಶಿಫಾರಸು ಮಾಡಿದ್ದವು. ಅದರಂತೆ ಭಾರತ ಹರ್ಷವರ್ಧನ್‌ ಅವರನ್ನು ನಾಮನಿರ್ದೇಶನ ಮಾಡಿತ್ತು. ಅದಕ್ಕೆ ಮಂಗಳವಾರ ನಡೆದ ವಿಶ್ವ ಆರೋಗ್ಯ ಸಮಾವೇಶದಲ್ಲಿ ಒಪ್ಪಿಗೆ ನೀಡಲಾಗಿದೆ.

ಕೆಲಸ ಏನು?

ಡಬ್ಲ್ಯಎಚ್‌ಒ ಚೇರ್ಮನ್‌ ಹುದ್ದೆಗೆ ಪೂರ್ಣಾವಧಿ ಕೆಲಸವಿರುವುದಿಲ್ಲ. 34 ಸದಸ್ಯರ ಕಾರ್ಯಕಾರಿ ಮಂಡಳಿಯು ವರ್ಷದಲ್ಲಿ ಎರಡು ಬಾರಿ ಸಭೆ ನಡೆಸುತ್ತದೆ. ಜನವರಿಯಲ್ಲಿ ಒಂದು ಸಭೆ ಹಾಗೂ ಮೇ ತಿಂಗಳಲ್ಲಿ ಡಬ್ಲ್ಯುಎಚ್‌ಒದ ಜಾಗತಿಕ ಸಮಾವೇಶ ಮುಗಿದ ನಂತರ ಒಂದು ಸಣ್ಣ ಸಭೆ ನಡೆಸುತ್ತದೆ. ಅದರ ನೇತೃತ್ವವನ್ನು ಚೇರ್ಮನ್‌ ವಹಿಸುತ್ತಾರೆ. ಡಬ್ಲ್ಯುಎಚ್‌ಒದ ಜಾಗತಿಕ ಸಮಾವೇಶದಲ್ಲಿ ಕೈಗೊಂಡ ನೀತಿ ಹಾಗೂ ನಿರ್ಣಯಗಳನ್ನು ಜಾರಿಗೊಳಿಸುವುದು ಹಾಗೂ ಅದಕ್ಕೆ ಬೇಕಾದ ಸಲಹೆ ನೀಡುವುದು ಕಾರ್ಯಕಾರಿ ಮಂಡಳಿಯ ಪ್ರಮುಖ ಕೆಲಸ.

Follow Us:
Download App:
  • android
  • ios