ಕೇಂದ್ರದಿಂದ ಪಿಕ್ & ಚೂಸ್ ನೀತಿ: ಜಡ್ಜ್‌ಗಳ ನೇಮಕ ವಿಳಂಬಕ್ಕೆ ಆಕ್ಷೇಪ; ಮತ್ತೆ ಸುಪ್ರೀಂ ಕಿಡಿ
ಕೇಂದ್ರ ಸರ್ಕಾರದ ಪರವಾಗಿ ಉತ್ತರಿಸಿದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ, ಡಿಸೆಂಬರ್ 5ರಂದು ನಡೆಯುವ ಮುಂದಿನ ವಿಚಾರಣೆಯ ವೇಳೆ ನಿಮ್ಮನ್ನು ಬೇಸರಗೊಳಿಸುವುದಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದಾರೆ. ತನ್ಮೂಲಕ ಆ ವೇಳೆಯೊಳಗೆ ಕೊಲಿಜಿಯಂನ ಕಡತಗಳನ್ನು ಇತ್ಯರ್ಥಗೊಳಿಸುವ ಸುಳಿವು ನೀಡಿದ್ದಾರೆ.

ನವದೆಹಲಿ (ನವೆಂಬರ್ 21, 2023): ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇಮಕ ಮತ್ತು ವರ್ಗಾವಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕೊಲಿಜಿಯಂನ ಶಿಫಾರಸುಗಳಲ್ಲಿ ಕೆಲವನ್ನು ಮಾತ್ರ ಒಪ್ಪಿ, ಇನ್ನುಳಿದವುಗಳನ್ನು ದೀರ್ಘಾವಧಿಗೆ ಬಾಕಿಯುಳಿಸಿಕೊಳ್ಳುವ ಕೇಂದ್ರ ಸರ್ಕಾರದ ಧೋರಣೆಯನ್ನು ಸುಪ್ರೀಂಕೋರ್ಟ್ ಮತ್ತೆ ತರಾಟೆ ತೆಗೆದುಕೊಂಡಿದೆ. ‘ಈ ರೀತಿಯ ಪಿಕ್ & ಚೂಸ್ ನೀತಿಯು ಒಳ್ಳೆಯ ಸಂದೇಶ ರವಾನಿಸುವುದಿಲ್ಲ’ ಎಂದು ನ್ಯಾಯಪೀಠ ತೀಕ್ಷ್ಣವಾಗಿ ಹೇಳಿದೆ.
ಇದಕ್ಕೆ ಕೇಂದ್ರ ಸರ್ಕಾರದ ಪರವಾಗಿ ಉತ್ತರಿಸಿದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ, ಡಿಸೆಂಬರ್ 5ರಂದು ನಡೆಯುವ ಮುಂದಿನ ವಿಚಾರಣೆಯ ವೇಳೆ ನಿಮ್ಮನ್ನು ಬೇಸರಗೊಳಿಸುವುದಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದಾರೆ. ತನ್ಮೂಲಕ ಆ ವೇಳೆಯೊಳಗೆ ಕೊಲಿಜಿಯಂನ ಕಡತಗಳನ್ನು ಇತ್ಯರ್ಥಗೊಳಿಸುವ ಸುಳಿವು ನೀಡಿದ್ದಾರೆ.
ಇದನ್ನು ಓದಿ: 3 ವರ್ಷ ತಮಿಳ್ನಾಡು ಗೌರ್ನರ್ ಏನು ಮಾಡ್ತಿದ್ದರು: ಸುಪ್ರೀಂ ಕಿಡಿ; ಮಸೂದೆಗಳಿಗೆ ಅಂಕಿತ ಹಾಕದ ಕ್ರಮಕ್ಕೆ ಆಕ್ಷೇಪ
ಕೊಲಿಜಿಯಂನ ಶಿಫಾರಸುಗಳ ಕುರಿತು ನಿರ್ಧಾರ ಕೈಗೊಳ್ಳುವಲ್ಲಿ ಕೇಂದ್ರ ಸರ್ಕಾರ ಮಾಡುತ್ತಿರುವ ವಿಳಂಬದ ಬಗ್ಗೆ ಕಳೆದೊಂದು ವರ್ಷದಿಂದ ಸುಪ್ರೀಂಕೋರ್ಟ್ ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿದೆ. ಆ ಕುರಿತು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ದಾಖಲಾಗಿದ್ದು, ಅದನ್ನು ನ್ಯಾಯಮೂರ್ತಿ ಎಸ್.ಕೆ.ಕೌಲ್ ಅವರ ಪೀಠ ವಿಚಾರಣೆ ನಡೆಸುತ್ತಿದೆ. ಸೋಮವಾರ ನಡೆದ ವಿಚಾರಣೆಯ ವೇಳೆ ಈ ಕುರಿತು ಪುನಃ ಆಕ್ಷೇಪ ವ್ಯಕ್ತಪಡಿಸಿದ ಪೀಠ, ‘ನೀವು ಐವರು ಹೈಕೋರ್ಟ್ ಜಡ್ಜ್‌ಗಳ ವರ್ಗಾವಣೆ ಶಿಫಾರಸನ್ನು ಒಪ್ಪಿ ಆದೇಶ ಹೊರಡಿಸಿದ್ದೀರಿ. ಆದರೆ ಇನ್ನುಳಿದ ಆರು ಜಡ್ಜ್‌ಗಳ ವರ್ಗಾವಣೆಗೆ ಆದೇಶ ಹೊರಡಿಸಿಲ್ಲ. ಹೀಗೆ ಕೊಲಿಜಿಯಂನ ಶಿಫಾರಸುಗಳ ಪೈಕಿ ಆಯ್ದ ಕೆಲ ಶಿಫಾರಸನ್ನು ಮಾತ್ರ ಒಪ್ಪುವುದು ಒಳ್ಳೆಯ ಸಂದೇಶ ರವಾನಿಸುವುದಿಲ್ಲ. ಹೀಗೆ ಮಾಡಬೇಡಿ. ಇದರಿಂದ ಬೇರೆಯದೇ ಡೈನಾಮಿಕ್ಸ್ ಸೃಷ್ಟಿಯಾಗುತ್ತದೆ’ ಎಂದು ಹೇಳಿತು.
‘ಇದಲ್ಲದೆ ಇನ್ನೂ 13 ಹೆಸರುಗಳು ಕೇಂದ್ರ ಸರ್ಕಾರದಲ್ಲಿ ಬಾಕಿಯಿವೆ. ಅವುಗಳಲ್ಲಿ ಐದು ಹೆಸರುಗಳನ್ನು ಕೊಲಿಜಿಯಂನಿಂದ ಎರಡನೇ ಬಾರಿ ಕಳುಹಿಸಿದ್ದರೂ ಬಾಕಿಯುಳಿಸಿಕೊಳ್ಳಲಾಗಿದೆ. ಅವರಲ್ಲಿ ಕೆಲವರು ಈಗಾಗಲೇ ನೇಮಕಗೊಂಡವರಿಗಿಂತ ಹಿರಿತನ ಹೊಂದಿದ್ದಾರೆ. ಯಾರು ಎಲ್ಲಿ ಕೆಲಸ ಮಾಡಬಾರದು ಎಂದು ನಾವು ಹೇಳುತ್ತೇವೋ ಅವರನ್ನು ಅಲ್ಲೇ ಮುಂದುವರೆಸುವುದು ಸರಿಯಲ್ಲ’ ಎಂದು ನ್ಯಾಯಪೀಠ ಕಠಿಣವಾಗಿ ಹೇಳಿತು. ಬಳಿಕ ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 5ಕ್ಕೆ ಮುಂದೂಡಿಕೆ ಮಾಡಿತು.
ಇದನ್ನು ಓದಿ: ಕೇಂದ್ರಕ್ಕೆ ಇಂದು ಸುಪ್ರೀಂ ಪರೀಕ್ಷೆ: ಕೇಂದ್ರ ಸರ್ಕಾರ, ರಾಜ್ಯಪಾಲರ ವಿರುದ್ಧ ಸಲ್ಲಿಸಿದ ಅರ್ಜಿ ವಿಚಾರಣೆ