ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಪತ್ನಿ ಮೆಲಾನಿಯಾ ಟ್ರಂಪ್‌ ಇಂದಿನಿಂದ 2 ದಿನಗಳ ಕಾಲ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಈವರೆಗೆ ಅಮೆರಿಕದ 6 ಜನ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದ್ದರೂ, ಹಾಲಿ ಅಮೆರಿಕ ಅಧ್ಯಕ್ಷರೊಬ್ಬರು ಗುಜರಾತಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಈ ಹಿನ್ನೆಲೆಯಲ್ಲಿ ಟ್ರಂಪ್‌ ಹಾಗೂ ಮೆಲಾನಿಯಾ ಟ್ರಂಪ್‌ ಅವರ ಎರಡು ದಿನದ ಪ್ರವಾಸ ಹೇಗಿರಲಿದೆ, ಏನೇನು ಮಾಡುತ್ತಾರೆ ಎಂಬ ವಿವರ ಇಲ್ಲಿದೆ.

ಇಂದು ಅಮೆರಿಕ ಅಧ್ಯಕ್ಷರ ಪ್ರವಾಸ ಆರಂಭ-ಸೀಲ್‌

2 ದಿನ ಟ್ರಂಪ್‌ ಏನೇನು ಮಾಡ್ತಾರೆ?

ಫೆಬ್ರವರಿ 24

ಮಧ್ಯಾಹ್ನ 12: ಸ್ವತಃ ಭಾರತದ ಪ್ರಧಾನಿ ನರೇಂದ್ರ ಮೋದಿ ಅಹಮದಾಬಾದಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಮೆಲಾನಿಯಾ ಟ್ರಂಪ್‌ ಅವರನ್ನು ಸ್ವಾಗತಿಸಲಿದ್ದಾರೆ. ನಂತರ ಟ್ರಂಪ್‌ ಮತ್ತು ಮೋದಿ ಸರ್ದಾರ್‌ ವಲ್ಲಭಾಭಾಯಿ ವಿಮಾನ ನಿಲ್ದಾಣದಿಂದ ಸಾಬರಮತಿ ಆಶ್ರಮದ ವರೆಗೆ 22 ಕಿ.ಮೀ ರೋಡ್‌ ಶೋ ನಡೆಸಲಿದ್ದಾರೆ. ಆಶ್ರಮದಲ್ಲಿ ಎರಡೂ ದೇಶಗಳ ನಾಯಕರು ಮಹಾತ್ಮ ಗಾಂಧೀಜಿ ಅವರಿಗೆ ನಮನ ಸಲ್ಲಿಸಲಿದ್ದಾರೆ. ಈ ವೇಳೆ ಮಹಾತ್ಮ ಗಾಂಧಿ ಅವರ ಫೋಟೋ, ಆತ್ಮಕಥನ ಹಾಗೂ ಚರಕವನ್ನು ಅಮೆರಿಕ ಅಧ್ಯಕ್ಷರಿಗೆ ಮೋದಿ ಉಡುಗೊರೆಯಾಗಿ ನೀಡಲಿದ್ದಾರೆ.

ಮಧ್ಯಾಹ್ನ 12:30- ಜಗತ್ತಿನ ಅತಿ ದೊಡ್ಡ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಸ್ಟೇಡಿಯಂಗೆ ಉಭಯ ದೇಶದ ನಾಯಕರೂ ಭೇಟಿ ನೀಡಿ, ‘ನಮಸ್ತೆ ಟ್ರಂಪ್‌’ ಕಾರ‍್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ವೇಳೆ ಅಂದಾಜು 1 ಲಕ್ಷ ಜನರು ಭಾಗವಹಿಸಬಹುದೆಂದು ನಿರೀಕ್ಷಿಸಲಾಗಿದೆ.

ಮಧ್ಯಾಹ್ನ 3:30- ಪ್ರಧಾನಿ ನರೇಂದ್ರ ಮೋದಿ ಅವರೊಟ್ಟಿಗೆ ಭೋಜನ ಮಾಡಿ, ನಂತರ ಪತ್ನಿ ಸಮೇತ ಆಗ್ರಾಗೆ.

ಸಂಜೆ 5: ಅಮೆರಿಕ ದಂಪತಿಗಳಿಬ್ಬರೂ ಐತಿಹಾಸಿಕ, ಜಗದ್ವಿಖ್ಯಾತ ತಾಜ್‌ಮಹಲ್‌ಗೆ ಭೇಟಿ ನೀಡಿ ಅಲ್ಲಿ 45 ನಿಮಿಷ ಕಾಲ ಕಳೆಯಲಿದ್ದಾರೆ. ಟ್ರಂಪ್‌ ಭೇಟಿ ಹಿನ್ನೆಲೆಯಲ್ಲಿ ತಾಜ್‌ಮಹಲ್‌ ಒಳಾಂಗಣ ಮತ್ತು ಹೊರಾಂಗಣ ಸ್ವಚ್ಛಗೊಳಿಸಲಾಗಿದ್ದು, ಅಂದು ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಹಾಗೆಯೇ ಯಮುನಾ ನದಿ ನೀರು ಕೊಳಕಾಗಿದ್ದರಿಂದ 900 ಕ್ಯೂಸೆಕ್‌ಗೂ ಹೆಚ್ಚು ಹೊಸ ನೀರು ಬಿಟ್ಟು ಸ್ವಚ್ಛಗೊಳಿಸಲಾಗಿದೆ. ತಾಜ್‌ಮಹಲ್‌ ಪ್ರವಾಸದ ಬಳಿಕ ಟ್ರಂಪ್‌ ದೆಹಲಿಗೆ ತೆರಳಲಿದ್ದಾರೆ.

ಅಮೆರಿಕಾ ಅಧ್ಯಕ್ಷನಿಗೆ ಭೂರಿ ಭೋಜನ, ಮೊದಲ ದಿನ ಟ್ರಂಪ್‌ ಮೆನು ಇಲ್ಲಿದೆ!

ಫೆಬ್ರವರಿ 25

ಬೆಳಿಗ್ಗೆ 10: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಪತ್ನಿ ಮೆಲಾನಿಯಾ ಟ್ರಂಪ್‌ ಅವರನ್ನು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌ ಮತ್ತು ಪತ್ನಿ ಸವಿತಾ ಕೋವಿಂದ್‌ ಸ್ವಾಗತಿಸಲಿದ್ದಾರೆ.

ಬೆಳಿಗ್ಗೆ 10:45- ಟ್ರಂಪ್‌ ಮತ್ತು ಮೆಲಾನಿಯಾ ಟ್ರಂಪ್‌ ರಾಜ್‌ ಘಾಟ್‌ನಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಸಮಾಧಿಗೆ ನಮನ ಸಲ್ಲಿಸಲಿದ್ದಾರೆ. ಗೆಸ್ಟ್‌ ಬುಕ್‌ನಲ್ಲಿ ಸಹಿ ಮಾಡುತ್ತಾರೆ. 2015ರಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಕೂಡ ಮಹಾತ್ಮ ಗಾಂಧಿ ಸಮಾದಿಗೆ ನಮನ ಸಲ್ಲಿಸಿದ್ದರು.

ಬೆಳಿಗ್ಗೆ 11:30-ಅಲ್ಲಿಂದ ನೇರವಾಗಿ ಹೈದರಾಬಾದ್‌ ಹೌಸ್‌ಗೆ ಟ್ರಂಪ್‌ ಮತ್ತು ಅವರ ನಿಯೋಗ ತೆರಳಿ, ಅಧಿಕೃತ ಚರ್ಚೆ ನಡೆಸಲು ತಯಾರಿ ಮಾಡಿಕೊಳ್ಳುತ್ತದೆ. ಆರಂಭದಲ್ಲಿ ಫೋಟೋ ತೆಗೆಸಿಕೊಂಡ ನಂತರ ಟ್ರಂಪ್‌ ಮತ್ತು ಮೋದಿ ಹಾಗೂ ಎರಡೂ ದೇಶಗಳ ಉನ್ನತಾಧಿಕಾರಿಗಳ ನಡುವೆ ಮಾತುಕತೆ ನಡೆಯುತ್ತದೆ. ಇದೇ ವೇಳೆ ಮೆಲಾನಿಯಾ ಟ್ರಂಪ್‌ ದೆಹಲಿಯ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಲಿದ್ದಾರೆ. ಹೈದರಾಬಾದ್‌ ಹೌಸ್‌ನಲ್ಲಿ ಮೋದಿ-ಟ್ರಂಪ್‌ ನಡುವಿನ ಸಭೆ ಮುಕ್ತಾಯವಾದ ಬಳಿಕ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಲಿದ್ದಾರೆ. ಅಷ್ಟರಲ್ಲೇ ಮೆಲಾನಿಯಾ ಟ್ರಂಪ್‌ ಕೂಡ ಹೈದರಾಬಾದ್‌ ಹೌಸ್‌ಗೆ ಮರಳಲಿದ್ದಾರೆ.

ಮಧ್ಯಾಹ್ನ 3: ಅಮೆರಿಕ ರಾಯಭಾರ ಕಚೇರಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಅವರ ನಿಯೋಗ ಭಾರತದ ಹೆಸರಾಂತ ಉದ್ಯಮಿಗಳೊಂದಿಗೆ ದುಂಡು ಮೇಜಿನ ಸಬೆ ನಡೆಸಲಿದೆ.

ರಾತ್ರಿ 8: ಅಮೆರಿಕ ಅಧ್ಯಕ್ಷರು ಮತ್ತು ಅವರ ಪತ್ನಿ ರಾಷ್ಟ್ರಪತಿ ಭವನಕ್ಕೆ ತೆರಳಿ ರಾಷ್ಟ್ರಪತಿ ಆತಿಥ್ಯದಲ್ಲಿ ಭೋಜನ ಸವಿಯಲಿದ್ದಾರೆ.

ರಾತ್ರಿ 10: ಟ್ರಂಪ್‌ ಮತ್ತು ಅವರ ನಿಯೋಗ ತಮ್ಮ ವಿಶೇಷ ವಿಮಾನ ಏರ್‌ಫೋರ್ಸ್‌ ಓನ್‌ ಮೂಲಕ ನವದೆಹಲಿಯಿಂದ ನಿರ್ಗಮಿಸಲಿದೆ.

ಮೊಟೆರಾ ಸ್ಟೇಡಿಯಂ ಹೇಗಿದೆ?

ಭಾರತಕ್ಕೆ ಆಗಮಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಫೆ.24ರಂದು ಅಹಮದಾಬಾದಿನಲ್ಲಿ ನಿರ್ಮಾಣವಾಗಿರುವ ವಿಶ್ವದ ಅತಿ ದೊಡ್ಡ ಮೊಟೆರಾ ಕ್ರೀಡಾಂಗಣವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಇಲ್ಲಿ ಟ್ರಂಪ್‌ ಆಗಮನ ಪ್ರಯುಕ್ತ ಸಾಂಸ್ಕೃತಿಕ ಕಾರ‍್ಯಕ್ರಮಗಳನ್ನೂ ಏರ್ಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೊಟೆರಾ ಸ್ಟೇಡಿಯಂ ವಿಶೇಷತೆ ಎಂಬ ಮಾಹಿತಿ ಇಲ್ಲಿದೆ.

ನಮಸ್ತೆ ಟ್ರಂಪ್‌!: 2 ದಿನಗಳ ಪ್ರವಾಸಕ್ಕೆ ಭಾರೀ ಬಿಗಿಭದ್ರತೆ!

1 ಲಕ್ಷ 10 ಸಾವಿರ ಜನರ ಕೂರುವ ಸಾಮರ್ಥ್ಯ!

ಈ ನೂತನ ಕ್ರೀಡಾಂಗಣಕ್ಕೆ ಸರ್ದಾರ್‌ ಪಟೇಲ್‌ ಕ್ರೀಡಾಂಗಣ ಎಂದೂ ಕರೆಯಲಾಗುತ್ತದೆ. ಸುಮಾರು 1,10,000 ಜನರು ಕೂರುವ ವ್ಯವಸ್ಥೆ ಹೊಂದಿರುವ ಈ ಸ್ಟೇಡಿಯಂ ಜಗತ್ತಿನ ಅತಿ ದೊಡ್ಡ ಕ್ರಿಕೆಟ್‌ ಸ್ಟೇಡಿಯಂ ಹಾಗೂ ಜಗತ್ತಿನ ಎರಡನೇ ಅತಿ ದೊಡ್ಡ ಸ್ಟೇಡಿಯಂ ಎಂಬ ಖ್ಯಾತಿ ಪಡೆದಿದೆ. ಇದರೊಂದಿಗೆ ಆಸ್ಪ್ರೇಲಿಯಾದ ಮೆಲ್ಬರ್ನ್‌ ಕ್ರಿಕೆಟ್‌ ಮೈದಾನವನ್ನು ಹಿಂದಿಕ್ಕಿದೆ. ಉತ್ತರ ಕೊರಿಯಾದ ಪ್ಯೋಗ್ಯಾಂಗ್‌ನಲ್ಲಿರುವ ರನ್‌ಗ್ರಾಡೋ ಮೆ ಡೇ ಸ್ಟೇಡಿಯಂ ಜಗತ್ತಿನ ಅತಿ ದೊಡ್ಡ ಸ್ಟೇಡಿಯಂ ಆಗಿದ್ದು 1,14,000 ಆಸನ ವ್ಯವಸ್ಥೆಯನ್ನು ಹೊಂದಿದೆ. ಹಾಗೆಯೇ ಜಗತ್ತಿನ ಅತಿ ಚಿಕ್ಕ ಸ್ಟೇಡಿಯಂ ಗೌರವಕ್ಕೆ ಐರ್ಲೆಂಡ್‌ನ ಬ್ರೆಡಿ ಕ್ರಿಕೆಟ್‌ ಮೈದಾನ ಭಾಜವಾಗಿದೆ. ಅದು ಕೇವಲ 3000 ಆಸನ ವ್ಯವಸ್ಥೆಯನ್ನು ಹೊಂದಿದೆ.

715 ಕೋಟಿ ವೆಚ್ಚದಲ್ಲಿ ಪುನರ್‌ ನಿರ್ಮಾಣ!

1982ರಲ್ಲಿ ಗುಜರಾತ್‌ ಸರ್ಕಾರ ಸಬರಮತಿ ನದಿ ದಂಡೆಯ ಮೇಲಿನ 100 ಎಕರೆ ಜಾಗವನ್ನು ನೀಡಿದಾಗಲೇ ಸರ್ದಾರ್‌ ಪಟೇಲ್‌ ಸ್ಟೇಡಿಯಂ ಸ್ಥಾಪಿಸಲಾಗಿತ್ತು. ಕೇವಲ ಒಂಭತ್ತೇ ಒಂಬತ್ತು ತಿಂಗಳಿನಲ್ಲಿ ಕಾಮಗಾರಿ ಮುಗಿದು ಕ್ರೀಡಾಂಗಣ ಬಳಕೆಗೆ ಸಿದ್ಧವಾಗಿತ್ತು. ಅದಕ್ಕೂ ಮೊದಲು ಅಂತಾರಾಷ್ಟ್ರೀಯ ಕ್ರಿಕೆಟ್‌ ಮ್ಯಾಚ್‌ಗಳು ಅಹಮದಾಬಾದಿನ ಮುನ್ಸಿಪಲ್‌ ಕಾರ್ಪೋರೇಶನ್‌ ಸ್ಟೇಡಿಯಂನಲ್ಲಿ ನಡೆಯುತ್ತಿದ್ದವು. ಅನಂತರ ಸ್ಟೇಡಿಯಂ ಉನ್ನತೀಕರಿಸಲು 2016ರಿಂದ ಪುನರ್‌ ನಿರ್ಮಾಣ ಕಾಮಗಾರಿಗಳು ಆರಂಭವಾದವು.

ಹಳೆಯ ಸ್ಟೇಡಿಯಂ ಅನ್ನು ಸಂಪೂರ್ಣವಾಗಿ ನೆಲಸಮಗೊಳಿಸಿ ಹೊಸ ಸ್ಟೇಡಿಯಂ ನಿರ್ಮಾಣ ಕಾರ್ಯ ಆರಂಭಿಸಲಾಗಿತ್ತು. ಮಾಧ್ಯಮಗಳ ವರದಿ ಪ್ರಕಾರ ಅತಿ ದೊಡ್ಡ ನೂತನ ಸ್ಟೇಡಿಯಂ ನಿರ್ಮಾಣಕ್ಕೆ ಮೊದಲು ಆಸಕ್ತಿ ವಹಿಸಿದ್ದೇ ಪ್ರಧಾನಿ ನರೇಂದ್ರ ಮೋದಿ. ಮೋದಿ ಗುಜರಾತ್‌ ಕ್ರಿಕೆಟ್‌ ಅಸೋಷಿಯೇಷನ್‌ ಅಧ್ಯಕ್ಷರು ಮತ್ತು ಗುಜರಾತಿನ ಮುಖ್ಯಮಂತ್ರಿ ಆಗಿದ್ದಾಗ ಇಂಥದ್ದೊಂದು ಸ್ಟೇಡಿಯಂ ನಿರ್ಮಿಸುವ ಕನಸು ಕಂಡಿದ್ದರು. ಸದ್ಯ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಇದರ ಪುನರ್‌ ನಿರ್ಮಾಣಕ್ಕಾಗಿ ಅಂದಾಜು 715 ಕೋಟಿ ರು.ಖರ್ಚು ಮಾಡಲಾಗಿದೆ.

ಅಮೆರಿಕದ ಈ ಹಿಂದಿನ ಅಧ್ಯಕ್ಷರ ಭೇಟಿಯಲ್ಲಿ ಏನಾಗಿತ್ತು?

ವಿಶ್ವ ದರ್ಜೆಯ ಮೈದಾನ!

ಮೊಟೆರಾ ಸ್ಟೇಡಿಯಂ ಅನೇಕ ವಿಶ್ವದ ಸೌಲಭ್ಯಗಳನ್ನು ಒಳಗೊಂಡಿದೆ. 55 ರೂಮ್‌ಗಳ ಕ್ಲಬ್‌ ಹೌಸ್‌, ಜಿಮ್‌ ಮತ್ತು ಓಲಂಪಿಕ್‌ಗೆ ಸಮನಾದ ಸ್ವಿಮ್ಮಿಂಗ್‌ ಪೂಲ್‌ಗಳನ್ನು ಹೊಂದಿದೆ. ಸುಮಾರು 63 ಎಕರೆ ಜಾಗದಲ್ಲಿ ವಿಸ್ತಾರವಾಗಿ ನಿರ್ಮಾಣಗೊಂಡಿರುವ ನೂತನ ಸ್ಟೇಡಿಯಂ 3 ಎಂಟ್ರಿ ಪಾಯಿಂಟ್‌ಗಳನ್ನು ಹೊಂದಿದೆ. ಹಾಗೆಯೇ ತಲಾ 25 ಜನರು ಕೂರಬಹುದಾದ 76 ಕಾರ್ಪೋರೆಟ್‌ ಬಾಕ್ಸನ್ನು ಹೊಂದಿದೆ. 3000 ಕಾರು, 10000 ದ್ವಿಚಕ್ರ ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ ಹೊಂದಿದೆ. ಅಭ್ಯಾಸ ಮೈದಾನ, ಅಭ್ಯಾಸ ಪಿಚ್‌, ಒಳಾಂಗಣ ಕ್ರಿಕೆಟ್‌ ಅಕಾಡೆಮಿ, , ಸ್ಕಾ$್ವಷ್‌ ಕೋರ್ಟ್‌, ಟೆನಿಸ್‌ ಕೋರ್ಟ್‌, ಟೇಬಲ… ಟೆನಿಸ್‌ ಕೋರ್ಟ್‌, 3ಡಿ ಚಿತ್ರಗಳನ್ನು ಪ್ರದರ್ಶಿಸಬಲ್ಲ ಥಿಯೇಟರ್‌, ಎಲ…ಇಡಿ ಲೈಟಿಂಗ್‌ ವ್ಯವಸ್ಥೆಯನ್ನು ಹೊಂದಿದೆ.

ಸ್ಟೇಡಿಯಂನ ಸ್ಮರಣೀಯ ಗಳಿಗೆಗಳು

-1986-87ರಲ್ಲಿ ನಡೆದ ಇಂಡಿಯಾ ಪಾಕಿಸ್ತಾನ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಸುನಿಲ್‌ ಗಾವಸ್ಕರ್‌ ಇದೇ ಸ್ಟೇಡಿಯಂನಲ್ಲಿ 10,000 ರನ್‌ ಪೂರ್ಣಗೊಳಿಸಿ ದಾಖಲೆ ಬರೆದಿದ್ದರು.

-ಕಪಿಲ್‌ ದೇವ್‌, ಸರ್‌ ರಿಚರ್ಡ್‌ ಹಾಡ್ಲಿ ಅವರು ಟೆಸ್ಟ್‌ ಪಂದ್ಯಾವಳಿಗಳಲ್ಲಿ 431 ವಿಕೆಟ್‌ ಪಡೆದ ದಾಖಲೆಯನ್ನು ಮುರಿದು ಹೊಸ ಟೆಸ್ಟ್‌ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಕ್ರಿಕೆಟಿಗ ಎಂಬ ದಾಖಲೆ ಬರೆದಿದ್ದರು.

-2011 ಏಕದಿನ ವಿಶ್ವಕಪ್‌ ಪಂದ್ಯಾವಳಿ ವೇಳೆಯಲ್ಲಿ ಇದೇ ಮೈದಾನದಲ್ಲಿ ಸಚಿನ್‌ ತೆಂಡೂಲ್ಕರ್‌ 18,000 ರನ್‌ ಮೈಲುಗಲ್ಲನ್ನು ತಲುಪಿರುವುದು ಸ್ಮರಣೀಯ.