ನವದೆಹಲಿ[ಜ.06]: ಭಾನುವಾರ ತಡರಾತ್ರಿ JNU ಆವರಣದೊಳಗೆ ನುಗ್ಗಿದ ದುಷ್ಕರ್ಮಿಗಳು ಅಲ್ಲಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿದ್ದು, ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಘಟನೆ ಸಂಬಂಧ ದೇಶದಾದ್ಯಂತ ಬಹುತೇಕರು ಆಕ್ರೋಶ ವ್ಯಕ್ತಪಡಿಸಿದ್ದು, ಈ ದಾಳಿಯನ್ನು ಖಂಡಿಸಿದ್ದಾರೆ.

JNU ಕ್ಯಾಂಪಸ್‌ಗೆ ನುಗ್ಗಿ ದುಷ್ಕರ್ಮಿಗಳಿಂದ ವಿದ್ಯಾರ್ಥಿಗಳ ಮೇಲೆ ರಕ್ತ ಸುರಿಯುವಂತೆ ಹಲ್ಲೆ

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ಆನಂದ್ ಮಹೀಂದ್ರಾ ಈ ಸಂಬಂಧ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಆನಂದ್ ಮಹೀಂದ್ರಾ 'ನಿಮ್ಮ ರಾಜಕೀಯ ಏನು? ನಿಮ್ಮ ವಿಚಾರಧಾರೆ ಏನು? ನೀವೇನು ನಂಬುತ್ತೀರಿ ಎಂಬುವುದು ಮುಖ್ಯವಲ್ಲ. ನೀವೊಬ್ಬ ಭಾರತೀಯನೆಂದಾದರೆ ಆಯುಧಗಳನ್ನಿಡಿದು ಅರಾಜಕತೆ ಮೆರೆಯುವ ಗೂಂಡಾಗಿರಿಯನ್ನು ಸಹಿಸಬೇಡಿ. ತಡರಾತ್ರಿ ಝಣೂ ಆವರಣದಲ್ಲಿ ದಾಳಿ ನಡೆಸಿದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು. ಅವರನ್ನು ಕ್ಷಮಿಸಬಾರದು, ಕಠಿಣ ಶಿಕ್ಷೆ ವಿಧಿಸಬೇಕು' ಎಂದಿದ್ದಾರೆ.

ಆನಂದ್ ಮಹೀಂದ್ರಾ ಈ ಟ್ವೀಟ್ ಮಾಡಿದ ಬೆನ್ನಲ್ಲೇ ಅನೇಕರು ಕಮೆಂಟ್ ಮಾಡಿ, ನೀವು ಪ್ರತಿಕ್ರಿಯಿಸಿದ್ದು ಒಳ್ಳೆಯದಾಯ್ತು. ಈ ಸಂಬಂಧ ಧ್ವನಿ ಎತ್ತಿದ ನಿಮಗೆ ಧನ್ಯವಾದಗಳು ಎಂದು ಬರೆದಿದ್ದಾರೆ. ಆನಂದ್ ಮಹೀಂದ್ರಾ ಈ ಟ್ವೀಟ್ ಭಾರೀ ವೈರಲ್ ಆಗಿದೆ.