ನವದೆಹಲಿ(ಏ.14): FAIMA, ವೈದ್ಯರ ಸಂಘ ಪ್ರಧಾನಿ ನರೇಂದ್ರ ಮೋದಿಗೆ ಪತ್ರವೊಂದನ್ನು ಬರೆದಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ವಿಐಪಿ ಕಲ್ಚರ್‌ ವಿರುದ್ಧ ಕಿಡಿ ಕಾರಿದ್ದು, ರಾಜಕೀಯ ನಾಯಕರು ಇಲ್ಲಿನ ವೈದ್ಯರನ್ನು ಟೆಸ್ಟಿಂಗ್ ಹಾಗೂ ಚಿಕಿತ್ಸೆ ಪಡೆಯಲು ನೇರವಾಗಿ ತಮ್ಮ ಮನೆಗೇ ಕರೆಸಿಕೊಳ್ಳುತ್ತಿದ್ದಾರೆಂದು ದೂರಿದ್ದಾರೆ.

ಇಷ್ಟೇ ಅಲ್ಲದೇ ಕೊರೋನಾ ವಿರುದ್ಧದ ಹೋರಾಟದಲ್ಲಿ ಮುಂದೆ ನಿಂತು ಹೋರಾಡುತ್ತಿರುವ ವೈದ್ಯರಿಗೇ ಈ ಸೋಂಕು ತಗುಲಿದರೆ ಯಾವುದೇ ಸೌಲಭ್ಯ ನೀಡುತ್ತಿಲ್ಲ. ಈ ವಿಚಾರದಲ್ಲೂ ಸಮಾವೇಶಗಳನ್ನು ಆಯೋಜಿಸಿ, ಜನರನ್ನು ಒಗ್ಗೂಡಿಸಿ ಕೊರೋನಾ ಮತ್ತಷ್ಟು ಹರಡಲು ಕಾರಣರಾಗುತ್ತಿರುವ ರಾಜಕೀಯ ನಾಯಕರು ಹಾಗೂ ಪಕ್ಷದ ಕಾರ್ಯಕರ್ತರಿಗೇ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದೂ ದೂರಿದ್ದಾರೆ.

ಕೇಂದ್ರ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೋನಾ ಟೆಸ್ಟಿಂಗ್ ಹಾಗೂ ಚಿಕಿತ್ಸೆಗೆ ವಿಐಪಿ ಕೌಂಟರ್‌ಗಳಿವೆ. ಇಲ್ಲಿ ರಾಜಕೀಯ ನಾಯಕರು, ಪಕ್ಷದ ಕಾರ್ಯಕರ್ತರು, ಸಚಿವರಿಗೆ ಆದ್ಯತೆ ನೀಡಿ ಟೆಸ್ಟ್‌ ಮಾಡಲಾಗುತ್ತದೆ. ಆದರೆ ಈ ಹೋರಾಟದಲ್ಲಿ ಅತೀ ಹೆಚ್ಚು ಅಪಾಯ ಎದುರಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಯಾವುದೇ ಪ್ರತ್ಯೇಕ ಕೌಂಟರ್‌ ಇಲ್ಲ ಎಂದೂ ಕಿಡಿ ಕಾರಿದ್ದಾರೆ.

ಇನ್ನು ಯಾವುದೇ ಅಧಿಕೃತ ಆದೇಶವಿಲ್ಲದಿದ್ದರೂ ಬಹುತೇಕ ರಾಜಕೀಯ ನಾಯಕರು ಆಸ್ಪತ್ರೆಗೆ ಬರದೆ, ವೈದ್ಯರನ್ನು ತಮ್ಮ ಮನೆಗೇ ಬರುವಂತೆ ಮಾಡಿ ಚಿಕಿತ್ಸೆ ಪಡೆಯುತ್ತಿರುವುದಕ್ಕೆ ವೈದ್ಯರು ಈ ಪತ್ರ ಮುಖೇನ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ವೈದ್ಯರ ಈ ಪತ್ರದ ಬಗ್ಗೆ ಪಿಎಂ ಮೋದಿ ಯಾವ ಕ್ರಮ ಕೈಗೊಳ್ಳುತ್ತಾರೆ? ರಾಜಕೀಯ ನಾಅಯಕರಿಗೆ ಎಚ್ಚರಿಕೆ ನೀಡುತ್ತಾರಾ? ರಾಜಕೀಯ ನಾಯಕರ ಈ ವರ್ತನೆಗೆ ಬ್ರೇಕ್ ಹಾಕುತ್ತಾರಾ? ಕಾದು ನೋಡಬೇಕಿದೆ.