ಕೋವಿಡ್ ಲಸಿಕೆ ಪಡೆದಿದ್ದ ವೈದ್ಯರಿಗೂ ಕೊರೋನಾ ಪಾಸಿಟಿವ್!
ಕೋವಿಡ್ ಲಸಿಕೆ ಪಡೆದಿದ್ದ ವೈದ್ಯರಿಗೂ ಕೊರೋನಾ ಪಾಸಿಟಿವ್| ಲಸಿಕೆ ಪಡೆದಿದ್ದ ಚಾಮರಾಜನಗರ ಜಿಲ್ಲಾಸ್ಪತ್ರೆಯ ನಾಲ್ಕು ಮಂದಿ ವೈದ್ಯರಿಗೆ ಕೊರೋನಾ ಸೋಂಕು| ಲಸಿಕೆ ಪಡೆದ ನಾಲ್ವರು ವೈದ್ಯರು ಸೇರಿದಂತೆ ಏಳು ಮಂದಿ ವೈದ್ಯ ರಿಗೆ ಕೊರೋನಾ| ಲಸಿಕೆ ಪಡೆದ 10-12 ದಿನಗಳ ಬಳಿಕೆ ಕೊರೋನಾ ಸೋಂಕು
ಬೆಂಗಳೂರು(ಜ.30): ಇಡೀ ವಿಶ್ವದ ನಿದ್ದೆಗೆಡಿಸಿದ್ದ ಕೊರೋನಾ ಭಾರತಕ್ಕೂ ಕೆಟ್ಟ ಕನಸಾಗಿ ಪರಿಣಮಿಸಿತ್ತು. ಆದರೀಗ ಈ ಮಹಾಮಾರಿ ನಿವಾರಣೆಗಾಗಿ ದೇಶಾದ್ಯಂತ ಲಸಿಕೆ ಅಭಿಯಾನ ಆರಂಭವಾಗಿದೆ. ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಎಂಬ ಎರಡು ಮೇಡ್ ಇನ್ ಇಂಡಿಯಾ ಲಸಿಕೆಗಳನ್ನು ಜನರಿಗೆ ನೀಡುವ ಕಾರ್ಯ ಭರದಿಂದ ಸಾಗಿದೆ. ಹೀಗಿದ್ದರೂ ಅನೇಕರಲ್ಲಿ ಅಡ್ಡ ಪರಿಣಾಮಗಳು ಗೋಚರಿಸಿದ್ದು, ಅನೇಕರಲ್ಲಿ ಆತಂಕ ಉಂಟು ಮಾಡಿತ್ತು. ಆದರೀಗ ಇವೆಲ್ಲದರ ನಡುವೆ ಈ ಲಸಿಕೆ ಪಡೆದ ವೈದ್ಯರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ.
"
ಹೌದು ಲಸಿಕೆ ಪಡೆದ ಚಾಮರಾಜನಗರ ಜಿಲ್ಲಾಸ್ಪತ್ರೆಯ ನಾಲ್ಕು ಮಂದಿ ವೈದ್ಯರು ಸೇರಿದಂತೆ ಏಳು ಮಂದಿ ವೈದ್ಯರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಲಸಿಕೆ ಪಡೆದ 10-12 ದಿನಗಳ ಬಳಿಕೆ ಕೊರೋನಾ ಸೋಂಕು ಕಾಣಿಸಿಕೊಂಡಿರುವುದು ಅನೇಕರನ್ನು ಆತಂಕಕ್ಕೀಡು ಮಾಡಿದೆ. ಸದ್ಯ ಕೊರೋನಾ ಸೋಂಕು ಕಾಣಿಸಿಕೊಂಡ ವೈದ್ಯರಲ್ಲಿ ಒಬ್ಬರನ್ನು ಹೊರತುಪಡಿಸಿ ಉಳಿದವರನ್ನು ಹೋಂ ಐಸೋಲೇಷನ್‌ನಲ್ಲಿರಿಸಲಾಗಿದೆ.
ಜನವರಿ 16 ರಂದು ಆರಂಭವಾದ ಕೊರೋನಾ ಲಸಿಕೆ ಅಭಿಯಾನದಡಿ ಅನೇಕ ಮಂದಿ ವ್ಯಾಕ್ಸಿನ್ ಪಡೆದಿದ್ದರು. ಆದರೆ ಅಡ್ಡಪರಿಣಾಮ ಗೋಚರಿಸಿದ ಬೆನ್ನಲ್ಲೇ ಬಹುತೇಕ ಮಂದಿ ಲಸಿಕೆ ಪಡೆಯಲು ಹಿಂದೇಟು ಹಾಕಿದ್ದರು. ಇದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಹೀಗಿರುವಾಗಲೇ ಲಸಿಕೆ ಪಡೆದ ವೈದ್ಯರಿಗೆ ಕೊರೋನಾ ಸೋಂಕು ತಗುಲಿರುವುದು ಮತ್ತಷ್ಟು ಚಿಂತೆಗೀಡು ಮಾಡುವ ವಿಚಾರವಾಗಿದೆ.