ದೇಶೀಯವಾಗಿ ಉತ್ಪಾದಿಸಲಾದ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ | ಕೋವ್ಯಾಕ್ಸಿನ್‌ ಬೇಡ, ಕೋವಿಶೀಲ್ಡ್‌ ಲಸಿಕೆ ಕೊಡಿ| ದೆಹಲಿಯ ಆರ್‌ಎಂಎಲ್‌ ಆಸ್ಪತ್ರೆ ವೈದ್ಯರ ಬೇಡಿಕೆ

ನವದೆಹಲಿ(ಜ.17): ದೇಶೀಯವಾಗಿ ಉತ್ಪಾದಿಸಲಾದ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಎರಡೂ ಲಸಿಕೆಗಳು ಸುರಕ್ಷಿತ. ಲಸಿಕೆ ಪಡೆಯುವವರಿಗೆ ತಮಗೆ ಬೇಕಾದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಇಲ್ಲ ಎಂಬ ಕೇಂದ್ರ ಸರ್ಕಾರದ ಸ್ಪಷ್ಟಸೂಚನೆ ಹೊರತಾಗಿಯೂ ದೆಹಲಿಯ ಖ್ಯಾತನಾಮ ಆಸ್ಪತ್ರೆಯೊಂದರ ವೈದ್ಯರು ತಮಗೆ ಕೋವ್ಯಾಕ್ಸಿನ್‌ ಲಸಿಕೆ ಬೇಡ ಎಂದು ಪಟ್ಟು ಹಿಡಿದಿದ್ದಾರೆ.

ಲಸಿಕೆ ನೀಡಿಕೆ ಹಿಂದಿನ ದಿನವಾದ ಶುಕ್ರವಾರ ವೈದ್ಯಕೀಯ ಅಧೀಕ್ಷಕರಿಗೆ ಪತ್ರ ಬರೆದಿರುವ ದೆಹಲಿಯ ರಾಮ್‌ ಮನೋಹರ್‌ ಲೋಹಿಯಾ ಆಸ್ಪತ್ರೆ ಸ್ಥಾನಿಕ ವೈದ್ಯರ ಸಂಘಟನೆ, ‘ನಾಳೆಯಿಂದ ನಮ್ಮ ಆಸ್ಪತ್ರೆಯಲ್ಲೂ ಕೊರೋನಾ-19 ಲಸಿಕೆ ವಿತರಣೆ ಮಾಹಿತಿ ನಮಗೆ ಬಂದಿದೆ. ಆದರೆ ಭಾರತ್‌ ಬಯೋಟೆಕ್‌ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್‌ ಲಸಿಕೆ ಇನ್ನೂ ಮೂರನೇ ಹಂತದ ಪ್ರಯೋಗವನ್ನು ಪೂರ್ಣಗೊಳಿಸದೇ ಇರುವ ಹಿನ್ನೆಲೆಯಲ್ಲಿ ಅದರ ಬಗ್ಗೆ ನಮಗೆ ಸ್ವಲ್ಪ ಅಳುಕಿದೆ.

ಇದೇ ಕಾರಣಕ್ಕಾಗಿ ಬಹಳಷ್ಟು ಜನ ಲಸಿಕೆ ಆಂದೋನದಲ್ಲಿ ಭಾಗಿಯಾಗದೇ ಇರಬಹುದು. ಹೀಗಾದಲ್ಲಿ ಅಂದೋಲನದ ಮೂಲ ಉದ್ದೇಶವೇ ಈಡರದೇ ಹೋಗಬಹುದು. ಈ ಕಾರಣಕ್ಕೆ ಎಲ್ಲಾ ಪ್ರಾಯೋಗಿಕ ಪರೀಕ್ಷಾ ಹಂತ ಪೂರೈಸಿರುವ ಸೀರಂ ಇನ್‌ಸ್ಟಿಟ್ಯೂಟ್‌ ಉತ್ಪಾದಿಸಿರುವ ಕೋವಿಶೀಲ್ಡ್‌ ಲಸಿಕೆಯನ್ನೇ ನಮಗೆ ನೀಡಬೇಕು ಎಂದು ಕೋರುತ್ತೇವೆ’ ಎಂದು ಮನವಿ ಮಾಡಿದ್ದಾರೆ.