ಸಂಬಲ್‌ಪುರ(ಫೆ.15): ಬಡಜನರ ಆರೋಗ್ಯ ದೃಷ್ಟಿಯಲ್ಲಿಟ್ಟುಕೊಂಡು ಕೇವಲ ಒಂದು ರುಪಾಯಿಗೆ ಚಿಕಿತ್ಸೆ ಕಲ್ಪಿಸುವ ಆಸ್ಪತ್ರೆಯೊಂದನ್ನು ತೆರೆಯುವ ಮೂಲಕ ಒಡಿಶಾದ ವೈದ್ಯರೊಬ್ಬರು ಮಾನವೀಯತೆ ಮೆರೆದಿದ್ದಾರೆ.

ವೀರ ಸಾಯಿ ಸುರೇಂದ್ರಾ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ(ವಿಎಂಎಸ್‌ಎಆರ್‌)ಯಲ್ಲಿ ಸಹಾಯಕ ಪ್ರಾಧ್ಯಾಪಕರಾದ ಶಂಕರ್‌ ರಾಮಚಂದಾನಿ ಎಂಬುವರೇ ಬಡವರಿಗೆ ಚಿಕಿತ್ಸೆ ನೀಡಲು ಸಂಬಲ್‌ಪುರ ಜಿಲ್ಲೆಯ ಬುರ್ಲಾ ನಗರದಲ್ಲಿ 1 ರು. ಕ್ಲಿನಿಕ್‌ ಆರಂಭಿಸಿದ ಮಹಾನುಭಾವ. ಅಲ್ಲದೆ ಬಡವರು ಮತ್ತು ನಿರ್ಗತಿಕರಿಗೆ ಸೇವೆ ನೀಡುವ ಇವರ ಈ ಮಹತ್ಕಾರ್ಯಕ್ಕೆ ದಂತ ವೈದ್ಯೆಯಾದ ಅವರ ಪತ್ನಿ ಶಿಖಾ ರಾಮಚಂದಾನಿ ಅವರ ಬೆನ್ನೆಲುಬಾಗಿ ನಿಂತಿದ್ದಾರೆ.

ಶುಕ್ರವಾರದಿಂದಲೇ ಈ ಆಸ್ಪತ್ರೆಯನ್ನು ಉದ್ಘಾಟಿಸಲಾಗಿದ್ದು, ಹಲವು ಬಡವರು ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ವೈದ್ಯ ಶಂಕರ್‌ ರಾಮಚಂದಾನಿ, ‘ಭುವನೇಶ್ವರ ಜಿಲ್ಲೆಯಿಂದ 330 ಕಿ.ಮೀ ಬುರ್ಲಾದಲ್ಲಿ ವಿಎಂಎಸ್‌ಆರ್‌ಎಆರ್‌ ಆಸ್ಪತ್ರೆ ಹೊರತುಪಡಿಸಿ ಬೇರ್ಯಾವ ಆಸ್ಪತ್ರೆ ಇರಲಿಲ್ಲ. ಇಂಥ ಸಂದರ್ಭದಲ್ಲಿ ಬಡವರಿಗಾಗಿ ಕೇವಲ 1 ರು.ಗೆ ಚಿಕಿತ್ಸೆ ನೀಡುವ ಕೇಂದ್ರ ಆರಂಭಿಸುವ ಯೋಚನೆ ಬಂದಿತು. ಅದರಂತೆ ಈಗ ನನ್ನ ಕನಸು ನನಸಾಗಿದೆ’ ಎಂದಿದ್ದಾರೆ.