ನವದೆಹಲಿ[ಫೆ.26]: ಭಾರತದಲ್ಲಿ ವಿವಾದ ಎಬ್ಬಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಜತೆಗಿನ ಮಾತುಕತೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರಸ್ತಾಪಿಸಬಹುದು ಎಂಬುದು ಹುಸಿಯಾಗಿದೆ. ‘ಈ ವಿಷಯದ ಬಗ್ಗೆ ನಾನು ಯಾವುದೇ ಪ್ರಸ್ತಾಪ ಮಾಡಿಲ್ಲ. ಇದು ಭಾರತಕ್ಕೆ ಬಿಟ್ಟವಿಚಾರ’ ಎಂದು ಟ್ರಂಪ್‌ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ‘ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯವಿದೆ’ ಎಂದು ಪ್ರಶಂಸಿಸಿದ್ದಾರೆ.

ತಮ್ಮ ಭೇಟಿಯ ಅಂತ್ಯದ ಸಂದರ್ಭದಲ್ಲಿ ಮಂಗಳವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್‌ ಅವರು, ‘ನಾನು ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಮೋದಿ ಅವರ ಜತೆ ಮಾತನಾಡಿದೆ. ಮೋದಿ ಅವರು ‘ಜನರಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡುವುದು ನನ್ನ ನಿಲುವು’ ಎಂದು ಹೇಳಿದರು. ಅಲ್ಲದೆ, ಮುಕ್ತ ಹಾಗೂ ಅಸಾಧಾರಣ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಭಾರತ ಅತೀವ ಶ್ರಮಿಸಿದೆ ಎಂದೂ ಮೋದಿ ಈ ವೇಳೆ ಹೇಳಿದರು. ನಿಜವಾಗಿಯೂ ಧಾರ್ಮಿಕ ಸ್ವಾತಂತ್ರ್ಯಕ್ಕೆ ಭಾರತ ಶ್ರಮಿಸಿದೆ’ ಎಂದು ಕೊಂಡಾಡಿದರು.

ದಿಲ್ಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತಂತೆ ನಡೆದಿರುವ ಹಿಂಸಾಚಾರದ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿದ ಟ್ರಂಪ್‌, ‘ನಾನು ಆ ಬಗ್ಗೆ ಕೇಳಿದ್ದೇನೆ. ಆದರೆ ಮೋದಿ ಜತೆ ನಾನು ಈ ಬಗ್ಗೆ ಚರ್ಚಿಸಲಿಲ್ಲ. ಅದು ಭಾರತಕ್ಕೆ ಬಿಟ್ಟವಿಚಾರ’ ಎಂದರು.

ಇದೇ ವೇಳೆ, ‘ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಒಂದು ಸಮುದಾಯ ಪ್ರತಿಭಟನೆ ನಡೆಸುತ್ತಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು, ‘ಆ ಬಗ್ಗೆ ನಾನು ಚರ್ಚಿಸಲು ನಾನು ಇಷ್ಟಪಡಲ್ಲ’ ಎಂದರು.

‘ತಮ್ಮ ಜನರಿಗಾಗಿ ಅವರು (ಭಾರತ ಸರ್ಕಾರ) ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಅದು ಭಾರತಕ್ಕೆ ಬಿಟ್ಟದ್ದು’ ಎಂದು ಸ್ಪಷ್ಟಪಡಿಸಿದ ಟ್ರಂಪ್‌, ‘ಭಾರತದಲ್ಲಿ ಮುಸ್ಲಿಮರ ಜತೆಗೂಡಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಮೋದಿ ನನಗೆ ಹೇಳಿದರು’ ಎಂದು ನುಡಿದರು.

ಈ ನಡುವೆ, ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ ಶ್ರಿಂಗ್ಲಾ ಪ್ರತ್ಯೇಕ ಹೇಳಿಕೆ ನೀಡಿ, ‘ಮೋದಿ-ಟ್ರಂಪ್‌ ಮಾತುಕತೆ ವೇಳೆ ಪೌರತ್ವ ತಿದ್ದುಪಡಿ ಕಾಯ್ದೆ ಚರ್ಚೆ ನಡೆಯಲಿಲ್ಲ. ಭಾರತದ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಚರ್ಚೆ ನಡೆಯಿತು. ಎರಡೂ ದೇಶಗಳಲ್ಲಿ ಬಹುತ್ವ ಇರುವ ಬಗ್ಗೆ ಉಭಯ ನಾಯಕರು ಪ್ರಶಂಸೆ ವ್ಯಕ್ತಪಡಿಸಿದರು’ ಎಂದರು.