Asianet Suvarna News Asianet Suvarna News

ಟೆಸ್ಟ್‌ ಕಡಿಮೆ ಮಾಡಿದರೆ ಇನ್ನೊಂದು ಅಲೆಗೆ ಆಹ್ವಾನ: ರಾಜ್ಯಕ್ಕಿದು ಎಚ್ಚರಿಕೆ ಕರೆಗಂಟೆ!

* ಕೊರೋನಾ ಸೋಂಕು ಪತ್ತೆ ಪರೀಕ್ಷೆ ಪ್ರಮಾಣ ಕಡಿಮೆ ಮಾಡಿದ್ದರೆ ಅದು ಅತ್ಯಂತ ಅಪಾಯಕಾರಿ

* ಟೆಸ್ಟ್‌ ಕಡಿಮೆ ಮಾಡಿದರೆ ಇನ್ನೊಂದು ಅಲೆಗೆ ಆಹ್ವಾನ!

* ರಾಜ್ಯದಲ್ಲಿ ಕೋವಿಡ್‌ ಟೆಸ್ಟ್‌ ಇಳಿಕೆ ಡಾ| ಗಿರಿಧರ್‌ ಬಾಬು ಎಚ್ಚರಿಕೆ

Do not invite third wave by reducing testing Dr Giridhar babu warns karnataka govt pod
Author
Bangalore, First Published May 20, 2021, 7:29 AM IST

ಬೆಂಗಳೂರು(ಮೇ.20): ಕೊರೋನಾ ಸೋಂಕು ಪತ್ತೆ ಪರೀಕ್ಷೆ ಪ್ರಮಾಣ ಕಡಿಮೆ ಮಾಡಿದ್ದರೆ ಅದು ಅತ್ಯಂತ ಅಪಾಯಕಾರಿ. ಒಂದು ವೇಳೆ ಕರ್ನಾಟಕ ಆ ರೀತಿ ಮಾಡಿದ್ದರೆ ರಾಜ್ಯ ತಾನಾಗಿಯೇ ಮೂರನೇ ಅಲೆಗೆ ಆಹ್ವಾನ ನೀಡುತ್ತಿದೆ ಎಂದೇ ಅರ್ಥ!

ಹೀಗಂತ ರಾಜ್ಯದ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ.ಗಿರಿಧರ್‌ ಆರ್‌. ಬಾಬು ಗಂಭೀರ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರತಿದಿನ 1.90 ಲಕ್ಷದಷ್ಟುಆಗುತ್ತಿದ್ದ ಕೋವಿಡ್‌ ಪರೀಕ್ಷೆ ಇದೀಗ 93 ಸಾವಿರಕ್ಕೆ ಇಳಿದಿದೆ. ಕೋವಿಡ್‌ ಪರೀಕ್ಷೆಗೆ ಒಳಪಡದವರು ಸೋಂಕನ್ನು ವೇಗವಾಗಿ ಹರಡಿಸುತ್ತಾರೆ. ಇದು ಸೋಂಕಿನ ವ್ಯಾಪಕತೆ ಹೆಚ್ಚಾಗಲು ಕಾರಣವಾಗುತ್ತದೆ ಎಂದು ಹೇಳಿದರು.

ಸೋಮವಾರ 97,236 ಪರೀಕ್ಷೆ ನಡೆದಿದ್ದು, ಇದರಲ್ಲಿ 38,603 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಮಂಗಳವಾರ 93,247 ಪರೀಕ್ಷೆ ನಡೆದಿದ್ದು 30,309 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಏಪ್ರಿಲ್‌ 24ರಂದು 1.90 ಲಕ್ಷ, ಏಪ್ರಿಲ್‌ 28ರಂದು 1.72 ಲಕ್ಷ ಮಂದಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿತ್ತು ಎಂದು ತಿಳಿಸಿದರು.

ಪರೀಕ್ಷೆ ಕಡಿಮೆ ಮಾಡುವುದರಿಂದ ಜನರು ಕೋವಿಡ್‌ ಹರಡುವುದನ್ನು ಮುಂದುವರಿಸುತ್ತಾರೆ. ಕೋವಿಡ್‌ ವೇಗವಾಗಿ ಹಬ್ಬುತ್ತದೆ. ಆಗ ನಾವು ಈ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗುವುದಿಲ್ಲ. ಕೋವಿಡ್‌ ಸಂಕಷ್ಟದಿಂದ ಪಾರಾಗಲು ಈಗ ಹೆಚ್ಚು ಹೆಚ್ಚು ಪರೀಕ್ಷೆ ನಡೆಸುವುದು ಅನಿವಾರ್ಯ ಎಂದು ಡಾ. ಗಿರಿಧರ್‌ ಬಾಬು ಅಭಿಪ್ರಾಯಪಟ್ಟರು.

ಕೋವಿಡ್‌ ಪರೀಕ್ಷೆಯ ವೆಚ್ಚವನ್ನು ಕಡಿಮೆ ಮಾಡಲು ಸರ್ಕಾರ ಕಡಿಮೆ ಪರೀಕ್ಷೆ ನಡೆಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಾ. ಗಿರಿಧರ್‌ ಬಾಬು, ನನ್ನ ಮಾಹಿತಿ ಪ್ರಕಾರ ಒಂದು ಪರೀಕ್ಷಾ ಕಿಟ್‌ಗೆ 30 ರು. ಇದೆ. ಇದು ಅತ್ಯಂತ ಮಿತವ್ಯಯಿ. ಪರೀಕ್ಷಾ ಕಿಟ್‌ಗಳು ಇಷ್ಟುಕಡಿಮೆ ದರದಲ್ಲಿ ಸಿಗುತ್ತಿರುವಾಗ ಸರ್ಕಾರ ಯಾಕೆ ಹೆಚ್ಚು ಖರೀದಿ ಮಾಡಿಲ್ಲ. ಇದು ಪರೀಕ್ಷಾ ಕಿಟ್‌ಗಳನ್ನು ಕೊಳ್ಳಲು ಸರಿಯಾದ ಸಮಯ ಎಂದು ಹೇಳಿದರು.

ಬೆಂಗಳೂರಿನಲ್ಲಿ ವಾರಕ್ಕೆ ಆರು ಲಕ್ಷ ಕೋವಿಡ್‌ ಪರೀಕ್ಷೆ ನಡೆಯುತ್ತಿದ್ದದ್ದು ಈಗ ಎರಡು ಲಕ್ಷಕ್ಕೆ ಇಳಿದಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಕೋವಿಡ್‌ ಪರೀಕ್ಷೆಯ ನಿರಾಕರಣೆಯು ಒಬ್ಬ ವ್ಯಕ್ತಿಯ ಬದುಕಿನ ಅವಕಾಶ ನಿರಾಕರಿಸಿದಂತೆ. ಸರ್ಕಾರ ಪರೀಕ್ಷೆ ನಡೆಸದಿದ್ದರೆ ಶಂಕಿತರು ಪಾಸಿಟಿವ್‌ ಬರುವ ಸಾಧ್ಯತೆಗಳಿಲ್ಲ. ಆದ್ದರಿಂದ ಅವರಿಗೆ ಚಿಕಿತ್ಸೆ ಸಿಗದೆ ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ಗಿರಿಧರ್‌ ಬಾಬು ವಿವರಿಸಿದರು.

ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಮತ್ತು ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ಇನ್ನೋರ್ವ ಸದಸ್ಯ ಡಾ. ಸಿ.ಎನ್‌. ಮಂಜುನಾಥ್‌ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮನೆ ಮನೆಯ ಸಮೀಕ್ಷೆ ಮತ್ತು ರಾರ‍ಯಪಿಡ್‌ ಆ್ಯಂಟಿಜೆನ್‌ ಪರೀಕ್ಷೆಯು ಸೋಂಕನ್ನು ಆರಂಭದಲ್ಲೇ ಪತ್ತೆ ಹಚ್ಚಲು ಅನುಕೂಲಕಾರಿ. ಈಗ ಆ್ಯಂಟಿಜೆನ್‌ ಪರೀಕ್ಷೆಗೂ ಹೆಚ್ಚಿನ ಮನ್ನಣೆ ನೀಡಲಾಗುತ್ತಿದೆ. ಆ್ಯಂಟಿಜೆನ್‌ ಪರೀಕ್ಷೆಯಲ್ಲಿ 3 ರಿಂದ 5 ನಿಮಿಷದಲ್ಲಿ ಫಲಿತಾಂಶ ಸಿಗುತ್ತದೆ ಎಂದು ಹೇಳಿದ್ದಾರೆ.

ಟೆಸ್ಟಿಂಗ್‌ ಹೆಚ್ಚಿಸಿ

ಪರೀಕ್ಷೆ ಕಡಿಮೆ ಮಾಡುವುದರಿಂದ ಜನರು ಕೋವಿಡ್‌ ಹರಡುವುದನ್ನು ಮುಂದುವರಿಸುತ್ತಾರೆ. ಆಗ ಸೋಂಕು ವೇಗವಾಗಿ ಹಬ್ಬುತ್ತದೆ. ಕೋವಿಡ್‌ ಸಂಕಷ್ಟದಿಂದ ಪಾರಾಗಲು ಈಗ ಹೆಚ್ಚು ಹೆಚ್ಚು ಪರೀಕ್ಷೆ ನಡೆಸುವುದು ಅನಿವಾರ್ಯ.

- ಡಾ| ಗಿರಿಧರ್‌ ಬಾಬು, ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸದಸ್ಯ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios