ಗುಜರಾತಿನ ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಪತನದ ದುರಂತದಲ್ಲಿ ನೂರಾರು ಮಂದಿ ಸಾವನ್ನಪ್ಪಿದ್ದಾರೆ. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಯನ್ನು ಸಂಭ್ರಮಿಸಿ ವಿಕೃತಿ ಮೆರೆದಿದ್ದಾರೆ. ಮೃತರ ಗುರುತು ಪತ್ತೆಗೆ ಡಿಎನ್‌ಎ ಪರೀಕ್ಷೆಗೆ ಸಿದ್ಧತೆ ನಡೆಸಲಾಗುತ್ತಿದೆ.

ಅಹಮದಾಬಾದ್: ಗುಜರಾತಿನ ಅಹಮದಾಬಾದ್‌ನಲ್ಲಿ ನಡೆದ ಏರಿಂಡಿಯಾ ವಿಮಾನ ಪತನದಿಂದ ನೂರಾರು ಮಂದಿ ಸಾವನ್ನಪ್ಪಿರುವ ಘಟನೆಗೆ ಜಗತ್ತೇ ಕಂಬನಿ ಮಿಡಿಯುತ್ತಿದೆ. ಈ ನಡುವೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಘಟನೆ ಸಂಭ್ರಮಿಸಿ ವಿಕೃತಿ ಮೆರೆಯುತ್ತಿದ್ದಾರೆ. ವಿಮಾನ ಅವಘಡಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಬರುವ ಸುದ್ದಿಗಳಿಗೆ ಕೆಲವು ಕಿಡಿಗೇಡಿಗಳು ನಗು, ಖುಷಿ, ಹೃದಯ, ಲೈಕ್ಸ್ ಎಮೋಜಿಗಳ ಮೂಲಕ ಪ್ರತಿಕ್ರಿಯಿಸಿ ತಮ್ಮ ವಿಕೃತ ಮನಸ್ಥಿತಿ ಪ್ರದರ್ಶಿಸಿದ್ದಾರೆ. ಇಂತಹ ಮನಸ್ಥಿತಿಯ ಜನರು ಇರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

Scroll to load tweet…

ಮೃತರ ಗುರುತು ಪತ್ತೆಗೆ ಡಿಎನ್‌ಎ ಪರೀಕ್ಷೆಗೆ ಸಿದ್ಧತೆ

ಅಹಮದಾಬಾದ್: ಏರ್‌ ಇಂಡಿಯಾ ವಿಮಾನ ಅವಘಢ ದಲ್ಲಿ ಸಾವನ್ನಪ್ಪಿದವರ ಗುರುತು ಪತ್ತೆಗೆ ಡಿಎನ್ಎ ಪರೀಕ್ಷೆ ನಡೆಸಲು ಗುಜರಾತ್ ಆರೋಗ್ಯ ಇಲಾಖೆ ಮುಂದಾಗಿದೆ. ರಾಜ್ಯ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯ ದರ್ಶಿ ಧನಂಜಯ್ ದ್ವಿವೇದಿ ಮಾಹಿತಿ ನೀಡಿದ್ದು, 'ಅಪಘಾತದಲ್ಲಿ ಮೃತಪಟ್ಟವರನ್ನು ಗುರುತಿಸಲು ಅಹಮದಾಬಾದ್ ಸಿವಿಲ್ ಆಸ್ಪತ್ರೆಯು ಡಿಎನ್ಎ ಮಾದರಿ ಸಂಗ್ರಹಿಸಲು ವ್ಯವಸ್ಥೆ ಮಾಡಿದೆ. ಮೃತರ ಪೋಷಕರು ಅಥವಾ ಮಕ್ಕಳು ಸೇರಿದಂತೆ ನಿಕಟ ಸಂಬಂಧಿಗಳು ಬಿ.ಜೆ ವೈದ್ಯಕೀಯ ಕಾಲೇಜಿನ ಕಸೋಟಿ ಭವನದಲ್ಲಿ ಡಿಎನ್ಎ ಮಾದರಿಗಳನ್ನು ನೀಡಬಹುದು ಎಂದಿದ್ದಾರೆ.

2014ರಲ್ಲಿ ಏರಿಂಡಿಯಾಗೆ ಹಸ್ತಾಂತರಗೊಂಡಿದ್ದ 787

ಅಹಮದಾಬಾದ್: ನಿನ್ನೆ ಅಪಘಾತಕ್ಕಿಡಾದ ಈ ದುರಾದೃಷ್ಟ ವಿಮಾನವು 2013ರಲ್ಲಿ ಮೊದಲ ಸಲ ತನ್ನ ಹಾರಾಟವನ್ನು ಆರಂಭಿಸಿತ್ತು. ಈ ವಿಮಾನವು ಬೋಯಿಂಗ್ 797-8 ಡ್ರೀಮ್‌ಲೈನರ್ ಆಗಿದ್ದು, VT-ANB ನೋಂದಣಿ ಹೊಂದಿದೆ. 2013ರ ಡಿಸೆಂಬರ್ 14ರಂದು ಮೊದಲ ಹಾರಾಟ ನಡೆಸಿದ್ದ ವಿಮಾನವು 2014ರ ಜನವರಿಯಲ್ಲಿ ಏರ್‌ ಇಂಡಿಯಾ ತೆಕ್ಕೆಗೆ ಬಂದಿತ್ತು.

ಅಪಘಾತದ ಬಗ್ಗೆ ಮಾಹಿತಿ ಸಂಗ್ರಹ: ಬೋಯಿಂಗ್

ವಾಷಿಂಗ್ಟನ್: ವಿಮಾನ ಪತನ ಘಟನೆ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದು ವಿಮಾನ ನಿರ್ಮಾಣ ಕಂಪನಿಯಾದ ಬೋಯಿಂಗ್ ಹೇಳಿದೆ. ಪತನಗೊಂಡ ವಿಮಾನವು ಬೋಯಿಂಗ್ ಕಂಪನಿ ನಿರ್ಮಿಸಿದ್ದ 787-8 ಡ್ರೀಮ್‌ಲೈನ‌ರ್ ಆಗಿದ್ದು, ಈ ವಿಮಾನವನ್ನು 2014ರಲ್ಲಿ ಬೋಯಿಂಗ್ ಏರ್ ಇಂಡಿಯಾಗೆ ಹಸ್ತಾಂತರಿಸಿತ್ತು. ಅಲ್ಲದೇ ಈ ದುರಂತವು 787 ಮಾದರಿಯ ವಿಮಾನದ ಮೊದಲ ದುರಂತವಾಗಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಬೋಯಿಂಗ್, 'ಅಪಘಾತದ ಕುರಿತು ಮಾಹಿತಿ ಲಭ್ಯವಾಗಿದೆ. ಇನ್ನು ಹೆಚ್ಚಿನ ಮಾಹಿತಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದೆ.

ಹಾರುವುದಕ್ಕೂ ಮೊದಲೇ ತಾಂತ್ರಿಕ ದೋಷಕ್ಕೆ ತುತ್ತಾಗಿತ್ತಾ ವಿಮಾನ?

ಅಹಮದಾಬಾದ್: ಏರ್ ಇಂಡಿಯಾ ಪತನಗೊಂಡ ಬೆನ್ನಲ್ಲೇ ಆ ವಿಮಾನದಲ್ಲಿ 2 ತಾಸುಗಳ ಹಿಂದೆ ಪ್ರಯಾಣ ಮಾಡಿದ್ದ ಆಕಾಶ್ ವತ್ಸ ಎಂಬಾತ ಮಾಡಿದ್ದ ವಿಡಿಯೋ ವೈರಲ್ ಸಾಕಷ್ಟು ಆಗಿದೆ. ಅದರಲ್ಲಿ ಆತ 'ನಾನು 2 ಗಂಟೆ ಮುಂಚೆ ಇದೇ ವಿಮಾನದಲ್ಲಿ ದೆಹಲಿಯಿಂದ ಅಹಮದಾಬಾದ್‌ಗೆ ಬಂದಿದ್ದೆ. ಅದರಲ್ಲಿ ಏಸಿ, ಮನರಂಜನೆ ಟೀವಿ, ರಿಮೋಟ್ ಯಾವುದೂ ಕೆಲಸ ಮಾಡುತ್ತಿರಲಿಲ್ಲ, ಏರ್ ಇಂಡಿಯಾಗೆ ದೂರು ನೀಡಲು ವಿಡಿಯೋ ಮಾಡಿದ್ದೆ ಎಂದು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರ ಬೆನ್ನಲ್ಲೇ ವಿಮಾನ ಪತನಕ್ಕೆ ತಾಂತ್ರಿಕ ದೋಷ ಕಾರಣವೇ ಎಂಬ ಪ್ರಶ್ನೆ ಉದ್ಭವಿಸಿದೆ.