ಪಳನಿಸ್ವಾಮಿಯನ್ನು ‘ಅಕ್ರಮ ಸಂತಾನ’ ಎಂದಿದ್ದ ರಾಜಾ ಕ್ಷಮೆ| ರಾಜಾ ಹೇಳಿಕೆ ನೆನೆದು ಅತ್ತಿದ್ದ ಸಿಎಂ

ಚೆನ್ನೈ(ಮಾ.30): ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರನ್ನು ‘ಅಕ್ರಮ ಸಂತಾನ’ ಎಂದು ಕರೆದು ವಿವಾದಕ್ಕೀಡಾಗಿದ್ದ ಡಿಎಂಕೆ ಮುಖಂಡ ಎ. ರಾಜಾ ಅವರು ಸೋಮವಾರ ಕ್ಷಮೆಯಾಚಿಸಿದ್ದಾರೆ.

ಶನಿವಾರ ಮಾತನಾಡಿದ್ದ ರಾಜಾ, ‘ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್‌ ಅವರು ಸಕ್ರಮ ಸಂತಾನ ಹಾಗೂ ಸಂಪೂರ್ಣ ಪ್ರಬುದ್ಧ ಮಗು ಇದ್ದ ಹಾಗೆ. ಆದರೆ ಎಡಪ್ಪಾಡಿ ಪಳನಿಸ್ವಾಮಿ ಅವರು ಅಕ್ರಮ ಸಂಬಂಧಕ್ಕೆ ಹುಟ್ಟಿದ ಅವಧಿಪೂರ್ವ ಸಂತಾನ ಇದ್ದ ಹಾಗೆ’ ಎಂದು ಟೀಕಿಸಿದ್ದರು.

ಇದರ ಬೆನ್ನಲ್ಲೇ ಸಮಾವೇಶವೊಂದರಲ್ಲಿ ಭಾನುವಾರ ಮಾತನಾಡಿದ್ದ ಪಳನಿಸ್ವಾಮಿ, ತಮ್ಮ ಅಮ್ಮನ ಕುರಿತು ರಾಜಾ ಆಡಿದ ಮಾತು ದುಃಖ ತಂದಿದೆ. ಅವರಿಗೆ ಮತದಾರನೇ ಪಾಠ ಕಲಿಸಲಿದ್ದಾನೆ ಎಂದು ಬಿಕ್ಕಿಬಿಕ್ಕಿ ಅತ್ತಿದ್ದರು.

ಈ ಹಿನ್ನೆಲೆಯಲ್ಲಿ, ಜನಾಕ್ರೋಶ ತಮ್ಮ ಮೇಲೆ ತಿರುಗಿದೆ ಎಂದು ಅರಿತ ರಾಜಾ, ಸೋಮವಾರ ಕ್ಷಮೆಯಾಚಿಸಿದ್ದಾರೆ. ‘ನಾನು ರಾಜಕೀಯ ಅರ್ಥದಲ್ಲಿ ಹೇಳಿದ್ದೆನೇ ವಿನಾ ವೈಯಕ್ತಿಕವಾಗಿ ಹೇಳಿರಲಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಡಿಎಂಕೆ ಅಧ್ಯಕ್ಷ ಸ್ಟಾಲಿನ್‌ ಕೂಡ, ‘ಈ ರೀತಿ ವೈಯಕ್ತಿಕ ಟೀಕೆಗಳನ್ನು ಮಾಡಬೇಡಿ’ ಎಂದು ಪಕ್ಷದ ಮುಖಂಡರಿಗೆ ಸೂಚಿಸಿದ್ದಾರೆ.